ಐಗೂರು, ಜ. ೪: ಮುಂಬರುವ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಚುನಾವಣೆ ಆಯೋಗದ ಸೂಚನೆಯ ಮೇರೆಗೆ ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರಾಥಮಿಕ ಕೃಷಿ ಸಂಘದ ಸಭಾಂಗಣದಲ್ಲಿ ಮತದಾನದ ಅರಿವು ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಇದರ ಅಂಗವಾಗಿ ಗ್ರಾಮಸ್ಥರಿಂದ ಅಣಕು ಮತದಾನದ ಮತವನ್ನು ಚಲಾವಣೆ ಮಾಡಿಸಿ, ಮತಗಳ ಎಣಿಕೆ ಮತ್ತು ಫಲಿತಾಂಶದ ಬಗ್ಗೆ ವಿವರಿಸಲಾಯಿತು.
ಸಾರ್ವಜನಿಕರಿಗೆ ಮತಯಂತ್ರಗಳ ಬಗ್ಗೆ ಸಂಶಯ ಮತ್ತು ಅನುಮಾನಗಳಿದ್ದರೆ ಸ್ಥಳದಲ್ಲೇ ತಿಳಿದುಕೊಳ್ಳುವಂತೆ ಅಧಿಕಾರಿಗಳು ತಿಳಿಸಿದರು. ಈ ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಜಯಣ್ಣ, ತಾಲೂಕು ಅಕ್ಷರ ದಾಸೋಹ ಸಹಾಯಕ ನಿರ್ದೇಶಕರಾದ ಕಾಳನಾಯಕ, ತಾಲೂಕು ಪಂಚಾಯಿತಿ ಚುನಾವಣೆ ಶಾಖೆಯ ಎಫ್.ಡಿ.ಸಿ. ಸುರೇಶ್, ಪಿಡಿಓ ಬಾಲಕೃಷ್ಣ, ಮಾಜಿ ತಾಲೂಕು ಪಂಚಾಯಿತಿ ಸದಸ್ಯೆ ಸಬಿತಾ ಚೆನ್ನಕೇಶವ, ಹೊಲಿಗೆ ತರಬೇತಿ ಕೇಂದ್ರದ ಶಿಕ್ಷಕಿ ಶಶಿಕಲಾ, ಗ್ರಂಥಪಾಲಕ ಮೊಣ್ಣಪ್ಪ, ಅಂಗನವಾಡಿ ಕಾರ್ಯಕರ್ತೆ ರಾಧಾಮಣಿ, ಸಂಜೀವಿನಿ ಒಕ್ಕೂಟದ ಸುಜಾತ ಬಾಲಕೃಷ್ಣ, ಪಂಚಾಯಿತಿ ಸಿಬ್ಬಂದಿಗಳಾದ ಇಂದ್ರೇಶ್ ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು.