ಸೋಮವಾರಪೇಟೆ, ಜ. ೪ : ಇಲ್ಲಿನ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ೬೦ ಮಳಿಗೆಗಳ ಟೆಂಡರ್ ಪ್ರಕ್ರಿಯೆಗೆ ನ್ಯಾಯಾಲಯ ತಡೆಯಾಜ್ಞೆ ನೀಡಿದ್ದು, ಇದನ್ನು ಶೀಘ್ರವಾಗಿ ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ಟೆಂಡರ್ದಾರರು ಜಿಲ್ಲಾ ಉಪ ವಿಭಾಗಾಧಿಕಾರಿ ನರ್ವಾಡೆ ವಿನಾಯಕ್ ಅವರಿಗೆ ಮನವಿ ಸಲ್ಲಿಸಿದರು.
ತಾ. ೩ರಂದು ನಿಗದಿಯಾಗಿದ್ದ ಮಳಿಗೆ ಹರಾಜಿಗೆ ಕೆಲವರು ಹೈಕೋರ್ಟ್ನಿಂದ ತಡೆಯಾಜ್ಞೆ ತಂದಿದ್ದಾರೆ. ಅಧಿಕಾರಿಗಳು ಸೂಕ್ತ ದಾಖಲಾತಿಗಳೊಂದಿಗೆ ನ್ಯಾಯಾಲಯದ ಗಮನಕ್ಕೆ ತಂದು ತಡೆಯಾಜ್ಞೆಯನ್ನು ತೆರವುಗೊಳಿಸಲು ತಕ್ಷಣ ಕಾರ್ಯೋನ್ಮುಖರಾಗಬೇಕೆಂದು ಟೆಂಡರ್ದಾರರು ಮನವಿ ಸಲ್ಲಿಸಿದರು.
೬೦ ಅಂಗಡಿ ಮಳಿಗೆಗಳಿಗೆ ಹಲವಷ್ಟು ಮಂದಿ ಟೆಂಡರ್ ಹಾಕಿದ್ದಾರೆ. ಈಗಾಗಲೇ ಟೆಂಡರ್ನ ಅವಧಿಯೂ ಮುಕ್ತಾಯವಾಗಿದೆ. ಕಳೆದ ಬಾರಿಯೂ ಪಾರದರ್ಶಕವಾಗಿ ಟೆಂಡರ್ ನಡೆಸಿಲ್ಲ. ಕೆಲವರು ತಮ್ಮ ಅಂಗಡಿಗಳನ್ನು ಬೇರೆಯವರಿಗೆ ದುಪ್ಪಟ್ಟು ಬಾಡಿಗೆಗೆ ನೀಡಿದ್ದಾರೆ. ಈ ಹಿನ್ನೆಲೆ ತಕ್ಷಣ ತಡೆಯಾಜ್ಞೆ ತೆರವುಗೊಳಿಸಿ, ಟೆಂಡರ್ ನಡೆಸಲು ಕ್ರಮಕೈಗೊಳ್ಳಬೇಕೆಂದು ಸುರೇಶ್ ಶೆಟ್ಟಿ ಒತ್ತಾಯಿಸಿದರು.
ಮನವಿ ಸ್ವೀಕರಿಸಿದ ಉಪ ವಿಭಾಗಾಧಿಕಾರಿಗಳು, ತಡೆಯಾಜ್ಞೆ ತೆರವಿಗೆ ಪಂಚಾಯಿತಿ ಕ್ರಮಕೈಗೊಳ್ಳಲಿದೆ. ನಿಯಮಾನುಸಾರ ಟೆಂಡರ್ ಪ್ರಕ್ರಿಯೆ ನಡೆಯಲಿದೆ ಎಂದರು. ಈ ಸಂದರ್ಭ ಎಸ್.ಎ. ಪ್ರತಾಪ್, ಮಂಜುನಾಥ್, ದಾಕ್ಷಾಯಿಣಿ ಸೇರಿದಂತೆ ಇತರರು ಉಪಸ್ಥಿತರಿದ್ದರು