ಶನಿವಾರಸಂತೆ, ಜ. ೪: ಸ್ಥಳೀಯ ಗ್ರಾಮ ಪಂಚಾಯಿತಿಯ ೨೦೨೩-೨೪ನೇ ಸಾಲಿನ ಗ್ರಾಮಸಭೆ ಶನಿವಾರ ಸಂತೆ ನಾಡಕಚೇರಿ ಮುಂಭಾಗದ ಆವರಣದಲ್ಲಿ ಪಂಚಾಯಿತಿ ಅಧ್ಯಕ್ಷೆ ಗೀತಾ ಹರೀಶ್ ಅಧ್ಯಕ್ಷತೆಯಲ್ಲಿ ನಡೆಯಿತು.

ಸಭೆಯು ಆರಂಭವಾಗು ತ್ತಿದ್ದಂತೆಯೇ “ಗ್ರಾಮ ಪಂಚಾಯಿತಿ ೫ ವರ್ಷಗಳ ನಂತರ ತಡವಾಗಿ ಗ್ರಾಮ ಸಭೆ ನಡೆಸಲು ಕಾರಣವೇನು ? ಹಿಂದಿನ ನಡವಳಿಕೆ ಓದಿದ ಬಳಿಕ ಸಭೆ ಮುಂದುವರೆಯಲಿ” ಎಂದು ಗ್ರಾಮದ ಪ್ರಮುಖರಾದ ಮಹಮ್ಮದ್ ಪಾಶ, ರಂಗಸ್ವಾಮಿ, ಬಿ.ಕೆ. ಚಂದ್ರು, ಅಕ್ಮಲ್, ಮಹಮ್ಮದ್ ಗೌಸ್, ಹರೀಶ್ ಕುಮಾರ್, ಭುವನೇಶ್ವರಿ ಆಗ್ರಹಿಸಿದರು.

ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹರೀಶ್ ಅವರು, ತಾವು ಶನಿವಾರಸಂತೆ ಪಂಚಾಯಿತಿಗೆ ಬಂದು ೩ ತಿಂಗಳಷ್ಟೇ ಆಗಿದೆ. ೬ ತಿಂಗಳಿ ಗೊಮ್ಮೆ ಗ್ರಾಮಸಭೆ ನಡೆಸುವಂತೆ ನಿಯಮವಿದೆ. ೨೦೨೨-೨೩ರಲ್ಲಿ ೨ ವಾರ್ಡ್ಸಭೆಗಳು ನಡೆದಿದ್ದು ಗುಂಡೂರಾವ್ ಬಡಾವಣೆಯಲ್ಲಿ ಕಾರಣಾಂತರದಿAದ ವಾರ್ಡ್ಸಭೆ ನಡೆಯದ ಕಾರಣ ಗ್ರಾಮಸಭೆ ನಡೆಯಲಿಲ್ಲ ಎಂದರು.

೨೦೧೮ ರಲ್ಲಿ ಗ್ರಾಮಸಭೆ ನಡೆದಿದ್ದು ನಂತರ ಕೋವಿಡ್‌ನಿಂದಾಗಿ ಗ್ರಾಮಸಭೆ ನಡೆಯಲಿಲ್ಲ ಎಂದು ಪಂಚಾಯಿತಿ ಮಾಜಿ ಅಧ್ಯಕ್ಷೆ ಸರೋಜಾ ಶೇಖರ್ ಉತ್ತರ ನೀಡಿದರೇ, ಮಾಜಿ ಅಧ್ಯಕ್ಷೆ ಫರ್ಜಾನಾ ಶಾಹಿದ್ ನೀತಿ ಸಂಹಿತೆ ಜಾರಿಯಲ್ಲಿದ್ದುದರಿಂದ ಗ್ರಾಮಸಭೆ ನಡೆಸಲಿಲ್ಲ ಎಂದರು. ಅಧ್ಯಕ್ಷೆ ಗೀತಾ ಹರೀಶ್ ಹಿಂದಿನ ಪಿಡಿಓ ಅವರ ಬೇಜವಾಬ್ದಾರಿಯಿಂದಾಗಿ ಗ್ರಾಮಸಭೆ ನಡೆಯಲಿಲ್ಲ. ಮುಂದೆ ಹೀಗಾಗು ವುದಿಲ್ಲ ಎಂದು ಸಮಜಾಯಿಷಿಕೆ ನೀಡಿದರು.

ನೋಡಲ್ ಅಧಿಕಾರಿ ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ಮಿಲನಾ ಭರತ್, ಅಧ್ಯಕ್ಷರು ಮುಂದೆ ಗ್ರಾಮ ಸಭೆಯನ್ನು ತಪ್ಪದೆ ನಡೆಸುವ ಭರವಸೆ ನೀಡಿದ್ದಾರೆ. ಈ ಬಗ್ಗೆ ವಿವಾದ ಬೇಡ. ಸಭೆ ಮುಂದುವರೆಯಲಿ ಎಂದರು.

ಸಭೆಯಲ್ಲಿ ಹಾಜರಿದ್ದ ವಿವಿಧ ಇಲಾಖೆಗಳ ಅಧಿಕಾರಿಗಳು ತಮ್ಮತಮ್ಮ ಇಲಾಖೆಗಳ ಯೋಜನೆಗಳು, ಫಲಾನುಭವಿಗಳಿಗೆ ಲಭ್ಯವಿರುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.

ಶಿಕ್ಷಣ ಇಲಾಖೆಯ ಸಂಪನ್ಮೂಲ ವ್ಯಕ್ತಿ ಸಿ.ಕೆ. ದಿನೇಶ್ ಮಾತನಾಡಿ, ಸಮೂಹ ಸಂಪನ್ಮೂಲ ಕೇಂದ್ರ ವ್ಯಾಪ್ತಿಯ ಸರ್ಕಾರಿ, ಖಾಸಗಿ, ಅನುದಾನಿತ ಶಾಲೆಗಳಿಗೆ ಸಿಗುವ ಸರ್ಕಾರದ ಸೌಲಭ್ಯಗಳ ಕುರಿತು ತಿಳಿಸಿದರು.

ಆರೋಗ್ಯ ಶಿಕ್ಷಣಾಧಿಕಾರಿ ಮಂಜುಳಾ ಇಲಾಖೆಯ ಕಾರ್ಯಕ್ರಮಗಳು, ಆರೋಗ್ಯ ಮೇಳ, ಲಸಿಕೆ ಕಾರ್ಯಕ್ರಮ, ಉದರ ದರ್ಶಕ ಚಿಕಿತ್ಸೆ, ಸಂಜೀವಿನಿ ಹಾಗೂ ಜನನಿ ಸುರಕ್ಷಾ ಯೋಜನೆ ಬಗ್ಗೆ ತಿಳಿಸಿದರು.

ವಿದ್ಯುತ್ ಇಲಾಖಾಧಿಕಾರಿ ಸುದೀಪ್ ಮಾತನಾಡಿ, ಗೃಹಜ್ಯೋತಿ ಯೋಜನೆಗೆ ಶೇ. ೯೨ ರಷ್ಟು ಗ್ರಾಹಕರು ನೋಂದಾವಣೆ ಮಾಡಿದ್ದಾರೆ ಎಂದು ಮಾಹಿತಿಯಿತ್ತರು. ಕಂದಾಯ ಇಲಾಖೆ ಉಪತಹಶೀಲ್ದಾರ್ ನಾಗರಾಜ್ ಮಾತನಾಡಿ, ವಂಶವೃಕ್ಷ, ಬೆಳೆ ವಿಮೆ, ಅಕ್ರಮ-ಸಕ್ರಮ, ಹಕ್ಕುಪತ್ರ ಇತ್ಯಾದಿಗಳ ಬಗ್ಗೆ ಮಾಹಿತಿ ನೀಡಿದರು.

ಪೊಲೀಸ್ ಇಲಾಖೆಯ ಪಿಎಸ್‌ಐ ಗೋವಿಂದ್ ರಾಜ್, ತೋಟಗಾರಿಕಾ ಇಲಾಖಾಧಿಕಾರಿ ಸಿಂಧೂ, ಕೃಷಿ ಇಲಾಖಾಧಿಕಾರಿ ವೇದಪ್ರಿಯಾ, ಪಂಚಾಯತ್ ರಾಜ್ ಯೋಜನೆಯ ಇಂಜಿನಿಯರ್ ಕೀರ್ತನ್, ಅರಣ್ಯ ಇಲಾಖೆಯ ಶ್ರೀನಿವಾಸ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಾವಿತ್ರವ್ವ, ಸಮಾಜ ಕಲ್ಯಾಣ ಇಲಾಖೆಯ ರೇಣುಕಾ ತಮ್ಮ ಇಲಾಖೆಗಳ ಬಗ್ಗೆ ಮಾಹಿತಿ ನೀಡಿದರು.

ನಂತರ ಸಭೆಯಲ್ಲಿ ಗ್ರಾಮಸ್ಥರ, ಗ್ರಾಮದ ಪ್ರಮುಖರ ಅಹವಾಲು ಮಂಡನೆ, ಗದ್ದಲ-ಗೊಂದಲ ಗಳಿಂದಲೇ ಆರಂಭವಾಯಿತು. ಕೆ.ಆರ್.ಸಿ. ವೃತ್ತದಲ್ಲಿ ಬೀಟ್ ಪೊಲೀಸ್ ವ್ಯವಸ್ಥೆ, ಗಾಂಜಾ ಸೇವನೆ, ಏಕಮುಖ ಸಂಚಾರ ವ್ಯವಸ್ಥೆ, ಡಿ.ಜೆ. ಸೌಂಡ್ಸ್ ತಡೆಗಟ್ಟುವಂತೆ, ಪ್ರಾಪರ್ಟಿ ಕಾರ್ಡ್, ವಾಹನ ನಿಲುಗಡೆ ಸಮಸ್ಯೆ, ಅಂಗನ ವಾಡಿ ಕೇಂದ್ರ ಸಮಸ್ಯೆ, ಅಂಗಡಿ ಮಳಿಗೆ ಮುಂದೆ ನಿಲ್ಲುವ ಜನಸಂದಣಿ ನಿಯಂತ್ರಣ ಇತ್ಯಾದಿ ಸಮಸ್ಯೆಗಳ ಬಗ್ಗೆ ಗಂಭೀರ ಚರ್ಚೆ ನಡೆದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಸದಸ್ಯರು ಸೂಕ್ತ ಸಲಹೆಗಳನ್ನು ನೀಡಿದರು.

ಪಂಚಾಯಿತಿ ವಾಣಿಜ್ಯ ಮಳಿಗೆಗಳ ಬಾಡಿಗೆ ಹಣದ ಬಗ್ಗೆ ವಾದ-ವಿವಾದ ನಡೆದು ಚರ್ಚೆಗೆ ಗ್ರಾಸ ಒದಗಿಸಿತು. ಸದಸ್ಯರ ನಡುವೆಯೇ ಅಸಮಾಧಾನ ವ್ಯಕ್ತವಾಗಿ ಮಾತಿನ ಚಕಮಕಿ ನಡೆದು ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು. ಪಂಚಾಯಿತಿ ಮಾಜಿ ಅಧ್ಯಕ್ಷೆ ಭುವನೇಶ್ವರಿ, ಗ್ರಾಮದ ಪ್ರಮುಖರಾದ ಎಸ್.ಎನ್. ಪಾಂಡು, ಆರ್.ಪಿ. ಮೋಹನ್, ಸಂತೋಷ್, ನಾಗರಾಜ್, ಚಂದ್ರಶೇಖರ್, ಬಿ.ಎಸ್. ಮಂಜುನಾಥ್ ಇತರರು ಚರ್ಚೆಯಲ್ಲಿ ಪಾಲ್ಗೊಂಡಿದ್ದು ಅಧ್ಯಕ್ಷರು, ಸದಸ್ಯರು, ಪಿಡಿಓ ಅವರಿಂದ ಸೂಕ್ತ ಕ್ರಮದ ಭರವಸೆ ಪಡೆದರು.

ನೋಡಲ್ ಅಧಿಕಾರಿ ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ಮಿಲನಾ ಭರತ್ ಮಾತನಾಡಿ, ಗ್ರಾಮದ ಸಮಸ್ಯೆಗಳು, ಕುಂದು-ಕೊರತೆ, ದೂರುಗಳನ್ನು ಸ್ವೀಕರಿಸಿ ರೇಕಾರ್ಡ್ ಮಾಡಿ ಕೊಳ್ಳಬೇಕು. ಗ್ರಾಮ ಪಂಚಾಯಿತಿಯ ಮಾಸಿಕ ಸಾಮಾನ್ಯ ಸಭೆಯಲ್ಲಿ ಕಾನೂನು ರೀತಿ ಇತ್ಯರ್ಥ ಮಾಡಬೇಕು ಎಂದು ಸಲಹೆ ನೀಡಿದರು.

ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹರೀಶ್, ಉಪಾಧ್ಯಕ್ಷ ಸರ್ದಾರ್ ಅಹಮ್ಮದ್, ಸದಸ್ಯರಾದ ಎಸ್.ಎಸಿ. ಶರತ್ ಶೇಖರ್, ಎಸ್.ಎನ್. ರಘು, ಆದಿತ್ಯ ಗೌಡ, ಎಸ್.ಆರ್. ಮಧು, ಸರೋಜಾ ಶೇಖರ್ ಗ್ರಾಮಸ್ಥರ ಸಮಸ್ಯೆಗಳಿಗೆ ಸ್ಪಂದಿಸಿ ಸೂಕ್ತ ಉತ್ತರ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಗೀತಾ ಹರೀಶ್ ಮಾತನಾಡಿ, ಗ್ರಾಮಾಭಿವೃದ್ಧಿಗೆ ಒತ್ತು ನೀಡುವ ಜತೆಗೆ ಬಸ್ ನಿಲ್ದಾಣ ನಿರ್ಮಾಣ, ವಾಣಿಜ್ಯ ಮಳಿಗೆಗಳ ತಕರಾರು, ವೈದ್ಯರ ಕೊರತೆ, ಇತ್ಯಾದಿ ಗ್ರಾಮ ಸಮಸ್ಯೆಗಳನ್ನು ಕಾನೂನು ಬದ್ಧವಾಗಿ ಒಂದೊAದಾಗಿ ಪರಿಹರಿಸಲಾಗುವುದು. ದೂರು, ಅಹವಾಲು ಸ್ವೀಕರಿಸಿ ಮೇಲಾಧಿಕಾರಿ ಗಳಿಗೆ ಕಳುಹಿಸಲಾಗುವುದು ಎಂದು ಭರವಸೆ ನೀಡಿದರು.

ಸದಸ್ಯರಾದ ಕಾವೇರಿ, ಫರ್ಜಾನಾ, ಕಾರ್ಯದರ್ಶಿ ದೇವರಾಜ್, ಗ್ರಾಮ ಲೆಕ್ಕಿಗ ವಸಂತ್ ಕುಮಾರ್, ಪೌಜಿಯಾ, ಲೀಲಾ ಇತರ ಸಿಬ್ಬಂದಿ ಹಾಜರಿದ್ದರು. ಪಿಡಿಓ ಹರೀಶ್ ಸ್ವಾಗತಿಸಿ, ವಂದಿಸಿದರು.