ಕರಿಕೆ, ಜ. ೩: ಇಲ್ಲಿನ ಗ್ರಾಮ ಪಂಚಾಯಿತಿ ಯ ೨೦೨೨-೨೩ ನೇ ಸಾಲಿನ ಗ್ರಾಮ ಸಭೆ ಎಳ್ಳುಕೊಚ್ಚಿ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಎನ್. ಬಾಲಚಂದ್ರ ನಾಯರ್ ಅಧ್ಯಕ್ಷತೆಯಲ್ಲಿ, ನೋಡಲ್ ಅಧಿಕಾರಿಗಳಾದ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಗಿರೀಶ್ ಅವರ ಉಪಸ್ಥಿತಿಯಲ್ಲಿ ನಡೆಯಿತು.
ಹಿಂದಿನ ಗ್ರಾಮ ಸಭೆಯ ನಡಾವಳಿಯನ್ನು ಸಭೆಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗಣಪತಿ ಮಂಡಿಸಿದರು. ಸಭೆಯಲ್ಲಿ ಗ್ರಾಮದ ಮೂಲಭೂತ ಸೌಕರ್ಯಗಳ ಕುರಿತು ಗ್ರಾಮಸ್ಥರು ಸುದೀರ್ಘ ಚರ್ಚೆ ನಡೆಸಿದರು. ಸ್ಥಳೀಯರಾದ ಕೋಡಿ ಪೊನ್ನಪ್ಪ ಮಾತನಾಡಿ, ಕರಿಕೆ ಕೊಚ್ಚಿ ಪ್ರಾಥಮಿಕ ಶಾಲಾ ಜಾಗವನ್ನು ಪ್ರಭಾವಿ ಖಾಸಗಿ ವ್ಯಕ್ತಿಗಳು ಒತ್ತುವರಿ ಮಾಡಿದ್ದು, ಎಂಟುವರೆ ಎಕರೆ ಜಾಗ ಶಾಲಾ ದಾಖಲೆಯಲ್ಲಿದ್ದು ಆರ್ಟಿಸಿ ಆಗಿರುತ್ತದೆ, ಆದರೆ ಶಾಲೆ ಕಟ್ಟಡ ಇರುವ ಜಾಗ ಹೊರತುಪಡಿಸಿ ಉಳಿದ ಜಾಗವನ್ನು ರಾಜಕೀಯ ಪ್ರಭಾವವಿರುವ ವ್ಯಕ್ತಿಗಳು ಒತ್ತುವರಿ ಮಾಡಿದ್ದು, ಇದನ್ನು ತೆರವುಗೊಳಿಸು ವಂತೆ ಕ್ರಮವಹಿಸಲು ಸಭೆಯಲ್ಲಿ ಇದ್ದ ಕ್ಷೇತ್ರ ಶಿಕ್ಷಣ ಅಧಿಕಾರಿಗಳನ್ನು ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಿಕ್ಷಣ ಅಧಿಕಾರಿಗಳು ಈ ಬಗ್ಗೆ ತೆರವು ಮಾಡಲು ತಹಶೀಲ್ದಾರರಿಗೆ ಲಿಖಿತ ರೂಪದಲ್ಲಿ ಅರ್ಜಿ ಸಲ್ಲಿಸಿದ್ದು, ಜಿಲ್ಲಾಧಿಕಾರಿಗಳ ಗಮನಕ್ಕೆ ಕೂಡ ಬಂದಿದ್ದು ಸದ್ಯದಲ್ಲಿ ತೆರವುಗೊಳಿಸಲು ಕ್ರಮವಹಿಸ ಲಾಗುವುದೆಂದರು.
ಮಾಜಿ ಜಿ.ಪಂ. ಸದಸ್ಯೆ ಕವಿತಾ ಪ್ರಭಾಕರ್ ಮಾತನಾಡಿ, ಸರಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗೆ ಶಿಕ್ಷಕರ ಕೊರತೆಯಿದ್ದು, ಬಿ.ಎಡ್ ಆದ ಶಿಕ್ಷಕರನ್ನು ನಿಯೋಜನೆ ಮಾಡಬೇಕೆಂಬ ನಿಯಮ ಇದ್ದರೂ ಅರ್ಹತೆ ಇಲ್ಲದ ಶಿಕ್ಷಕರನ್ನು ಶಿಕ್ಷಣ ಇಲಾಖೆ ನೇಮಿಸಿದ್ದು, ಇದರಿಂದಾಗಿ ವಿದ್ಯಾರ್ಥಿಗಳಿಗೆ ಶಿಕ್ಷಣ ಪಡೆಯಲು ಸಮಸ್ಯೆ ಆಗುತ್ತಿದೆ. ಖಾಯಂ ಶಿಕ್ಷಕರ ನೇಮಕಾತಿ ಮಾಡಿ ಎಂದರು. ಈ ಬಗ್ಗೆ ಸರಕಾರದ ಮಟ್ಟದಲ್ಲಿ ನೇಮಕಾತಿ ಪ್ರಕ್ರಿಯೆ ಆಗಬೇಕೆಂದರು. ಬೇಕಲ್ ರಮಾನಾಥ ಮಾತನಾಡಿ, ಭಾಗಮಂಡಲ-ಕರಿಕೆ ರಸ್ತೆ ಎರಡು ಬದಿ ಕಾಡಿನಿಂದ ಆವೃತವಾಗಿದೆ, ಈ ಬಗ್ಗೆ ರಸ್ತೆ ಬದಿ ಮರಗಳ ಕೊಂಬೆ ಕತ್ತರಿಸಲು ಅರಣ್ಯ ಇಲಾಖೆ ಸಹಕಾರ ನೀಡಬೇಕೆಂದು ಅರಣ್ಯ ಅಧಿಕಾರಿಗಳಿಗೆ ಮನವಿ ಮಾಡಿದರು. ಆರೋಗ್ಯ ವಿಸ್ತರಣಾ ಕೇಂದ್ರದ ವೈದ್ಯಾಧಿಕಾರಿ ಪುಂಡಲೀಕ ಕೃಷ್ಣ ಮಾತನಾಡಿ, ಇದೀಗ ಕೋವಿಡ್ ಮತ್ತೆ ಕಾಣಿಸಿಕೊಂಡಿದ್ದು ಈ ಬಗ್ಗೆ ಜನತೆ ಆರೋಗ್ಯ ಇಲಾಖೆಯ ಸೂಚನೆಗಳನ್ನು ಪಾಲಿಸಿ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಮನವಿ ಮಾಡಿದರು. ಅಧ್ಯಕ್ಷ ಬಾಲಚಂದ್ರ ನಾಯರ್ ಮಾತನಾಡಿ ಸರಕಾರ, ಶಾಸಕರ ಸಹಕಾರದಿಂದ ಗ್ರಾಮದ ಹಲವು ಗಂಭೀರ ಸಮಸ್ಯೆಗಳನ್ನು ಇತ್ಯರ್ಥ ಮಾಡಿ, ಸರಕಾರಿ ಸೌಲಭ್ಯವನ್ನು ಕಟ್ಟ ಕಡೆಗೂ ತಲುಪಿಸಿ ಗಡಿ ಗ್ರಾಮವನ್ನು ಮಾದರಿ ಗ್ರಾಮವನ್ನಾಗಿ ಮಾಡಲು ಆಡಳಿತ ಮಂಡಳಿ ವತಿಯಿಂದ ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ ಎಂದರು. ೨೦೨೨-೨೩ನೇ ಸಾಲಿನಲ್ಲಿ ಹತ್ತನೆಯ ತರಗತಿಯಲ್ಲಿ ಅತೀ ಹೆಚ್ಚು ಅಂಕಗಳಿಸಿ ಸಾಧನೆ ಮಾಡಿದ ಪ್ರೌಢ ಶಾಲಾ ವಿದ್ಯಾರ್ಥಿನಿಯರಾದ ನಿನ್ನಿ ಮೋಳ್ ಕೆ.ಎಂ. ಮತ್ತು ಜೋಸ್ನಾ ಕೆ.ವಿ. ಅವರನ್ನು ಗ್ರಾಮಸ್ಥರ ಸಮ್ಮುಖದಲ್ಲಿ ಸಭೆಯಲ್ಲಿ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ಕಂದಾಯ, ಆಯುಷ್, ಅರಣ್ಯ, ಕುಡಿಯುವ ನೀರು ಮತ್ತು ನೈರ್ಮಲ್ಯ, ಶಿಕ್ಷಣ, ಜಿಲ್ಲಾ ಪಂಚಾಯಿತಿ ಇಂಜಿನಿಯರಿAಗ್, ಆಹಾರ, ಕೃಷಿ, ಭೂಮಾಪನ, ಇಲಾಖೆ ಸೇರಿದಂತೆ ಇತರೆ ಇಲಾಖೆಗಳ ಸಿಬ್ಬಂದಿಗಳು, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಕಲ್ಪನಾ ಜಗದೀಶ್, ಪಂಚಾಯಿತಿ ಸದಸ್ಯರು, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು. ಸರಕಾರಿ ಪ್ರೌಢಶಾಲಾ ವಿದ್ಯಾರ್ಥಿನಿಯರ ಪ್ರಾರ್ಥನೆ ಹಾಗೂ ನಾಡಗೀತೆಯೊಂದಿಗೆ ಕಾರ್ಯಕ್ರಮ ಆರಂಭಗೊAಡಿತು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗಣಪತಿ ಪಿ.ಪಿ. ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.