ಗೋಣಿಕೊಪ್ಪಲು, ಜ. ೩: ಕಳೆದ ಮೂರು ವರ್ಷಗಳಿಂದ ಬಹು ನಿರೀಕ್ಷೆಯಲ್ಲಿದ್ದ ಪೊನ್ನಂಪೇಟೆ ತಾಲೂಕಿನ ಭೂ ಮಾಪನ ಕೇಂದ್ರವನ್ನು ವೀರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಲೋಕಾರ್ಪಣೆ ಮಾಡಿದರು. ಪೊನ್ನಂಪೇಟೆ ನಾಡು ಕಚೇರಿ ಹಿಂಭಾಗದಲ್ಲಿರುವ ಸುಸಜ್ಜಿತ ಕಟ್ಟಡದಲ್ಲಿ ಭೂ ಮಾಪನ ಇಲಾಖೆ ಕಾರ್ಯಾರಂಭ ಮಾಡಿದೆ. ಪೊನ್ನಂಪೇಟೆ ನಾಗರಿಕ ವೇದಿಕೆಯು ಭೂ ಮಾಪನ ಕಚೇರಿ ಆರಂಭಕ್ಕೆ ಸರ್ಕಾರದ ಮಟ್ಟದಲ್ಲಿ ಹಲವು ಬಾರಿ ಪತ್ರ ಬರೆಯುವ ಮೂಲಕ ಗಮನ ಸೆಳೆದಿತ್ತು.

ಪೊನ್ನಂಪೇಟೆ ನಾಗರಿಕ ವೇದಿಕೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭೂ ಮಾಪನ ಕೇಂದ್ರ ಉದ್ಘಾಟಿಸಿ ಮಾತನಾಡಿದ ಶಾಸಕ ಪೊನ್ನಣ್ಣ ಹಲವು ಸಮಯದಿಂದ ತಾಲೂಕಿನಲ್ಲಿ ಭೂಮಾಪನ ಕೇಂದ್ರ ಆರಂಭಿಸಲು ಒತ್ತಡ ಕೇಳಿ ಬಂದಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿ ಸರ್ಕಾರದ ಮಟ್ಟದಲ್ಲಿ ಅಧಿಕಾರಿಗಳ ಗಮನ ಸೆಳೆದು ಕೇಂದ್ರ ಆರಂಭಿಸಲಾಗಿದೆ. ಭೂ ಮಾಪನ ಕೇಂದ್ರ ಆರಂಭಕ್ಕೆ ನಾಗರಿಕ ವೇದಿಕೆ ತೀವ್ರ ಒತ್ತಡ ಹೇರಿತ್ತು. ಇದೀಗ ವೀರಾಜಪೇಟೆಯಲ್ಲಿರುವ ಕಡತಗಳು ನೂತನ ಕಚೇರಿಗೆ ಬರಲಿವೆ. ಕಚೇರಿ ಸಿಬ್ಬಂದಿ ನೆಪ ಮಾತ್ರಕ್ಕೆ ಕೆಲಸ ನಿರ್ವಹಿಸದೆ ಶ್ರದ್ಧೆಯಿಂದ ಕೆಲಸ ನಿರ್ವಹಿಸಬೇಕು ಎಂದರು.

ಸರ್ವೆ ಇಲಾಖೆಯ ಸಮಸ್ಯೆ ಇಂದು ನೆನ್ನೆಯದಲ್ಲ ಹಲವು ದಶಕಗಳಿಂದದ ಸಮಸ್ಯೆ ಕಾಡುತ್ತಿದೆ. ಹಂತ ಹಂತವಾಗಿ ಸಮಸ್ಯೆ ಬಗೆಹರಿಸಲು ಎಲ್ಲಾ ರೀತಿಯ ಪ್ರಯತ್ನ ಮಾಡಲಾಗುವುದು. ಸಾರ್ವಜನಿಕರು ಸಹಕಾರ ನೀಡಬೇಕೆಂದು ಮನವಿ ಮಾಡಿದರು.

ಪೊನ್ನಂಪೇಟೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಬೊಟ್ಟಂಗಡ ದಶಮಿ ಸದಾ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನಾಗರಿಕ ವೇದಿಕೆ ಅಧ್ಯಕ್ಷ ಚೊಟ್ಟೆಯಂಡಮಾಡ ಬೋಸ್ ವಿಶ್ವನಾಥ್ ಮಾತನಾಡಿ, ಭೂ ಮಾಪನ ಕಚೇರಿ ಆರಂಭವಾಗಿದೆ. ಮುಂದೆ ಕ್ಷೇತ್ರ ಶಿಕ್ಷಣ ಅಧಿಕಾರಿಗಳ ಕಚೇರಿ ಆರಂಭವಾಗಬೇಕು. ಈ ನಿಟ್ಟಿನಲ್ಲಿ ಶಾಸಕರು ಗಮನ ಹರಿಸಬೇಕು ಎಂದರು. ಭೂ ಮಾಪನ ಕಚೇರಿಯ ಸೌಲಭ್ಯವನ್ನು ಇಲ್ಲಿನ ಜನತೆ ಪಡೆದುಕೊಳ್ಳಬೇಕು, ಅಧಿಕಾರಿಗಳು ಕೂಡ ಸ್ಪಂದಿಸುವAತಾಗಬೇಕು ಎಂದರು. ನಾಗರಿಕ ವೇದಿಕೆ ಉಪಾಧ್ಯಕ್ಷ ಆಲಿರ ಎರ್ಮು ಹಾಜಿ ಮಾತನಾಡಿ ನೂತನ ಭೂ ಮಾಪನ ಕೇಂದ್ರ ಆರಂಭಕ್ಕೆ ಸತತ ಮೂರು ವರ್ಷಗಳಿಂದ ಒತ್ತಡ ಹೇರಲಾಗಿತ್ತು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಪ್ರಶಾಂತ್, ಭೂ ಮಾಪನ ಇಲಾಖೆಯ ಅಧಿಕಾರಿಗಳು ನಾಗರಿಕ ವೇದಿಕೆ ಪದಾಧಿಕಾರಿಗಳಾದ ಮತ್ರಂಡ ಅಪ್ಪಚ್ಚು, ಪಿ.ಬಿ.ಪೂಣಚ್ಚ, ಮೂಕಳೇರ ಕುಶಾಲಪ್ಪ, ಹಿರಿಯ ಸರ್ವೆ ಅಧಿಕಾರಿ ಬಾನಂಗಡ ಅರುಣ್, ಭೂ ಮಾಪನ ಇಲಾಖೆ ಅಧಿಕಾರಿಗಳು, ಸೇರಿದಂತೆ ಕಂದಾಯ ಇಲಾಖೆಯ ಅಧಿಕಾರಿ ಆರ್.ಐ.ಸುಧೀಂದ್ರ ಸಿಬ್ಬಂದಿಗಳು, ವಿವಿಧ ಸಂಘ ಸಂಸ್ಥೆಗಳ ಮುಖಂಡರು ಹಾಜರಿದ್ದರು.