ಮಡಿಕೇರಿ, ಜ. ೩: ದೇಶದಲ್ಲಿ ಮತ್ತೆ ಕೋವಿಡ್ ರೂಪಾಂತರಿಯ ಆತಂಕ ಆವರಿಸಿಕೊಳ್ಳುತ್ತಿದ್ದು, ರಾಜ್ಯದ ವಿವಿಧೆಡೆಗಳಲ್ಲಿ ಪ್ರಕರಣಗಳು ಪತ್ತೆಯಾಗುತ್ತಿರುವುದು ಜನರಲ್ಲಿ ಭಯ ಸೃಷ್ಟಿಸಿದೆ. ಕೋವಿಡ್ ತಡೆಗೆ ಈಗಾಗಲೇ ರಾಜ್ಯ ಸರಕಾರ ಕೆಲವೊಂದು ಮಾರ್ಗಸೂಚಿ ಮೂಲಕ ಕ್ರಮಕ್ಕೆ ಮುಂದಾಗಿದೆ. ಇದರೊಂದಿಗೆ ಜಿಲ್ಲೆಯಲ್ಲಿ ೨೨೦ ಕೋವಿಡ್ ಬೂಸ್ಟರ್ ಡೋಸ್ ಲಸಿಕೆಗಳನ್ನು ದಾಸ್ತಾನು ಮಾಡಲಾಗಿದೆ.

ರಾಜ್ಯದ ಆರೋಗ್ಯ ಕೇಂದ್ರಗಳಲ್ಲಿ ಒಟ್ಟು ೩೦ ಸಾವಿರ ಲಸಿಕೆ ಲಭ್ಯವಿದ್ದು, ಜಿಲ್ಲೆಯಲ್ಲಿ ೨೨೦ ಬೂಸ್ಟರ್ ಡೋಸ್ ಲಸಿಕೆಗಳನ್ನು ದಾಸ್ತಾನಿಡಲಾಗಿದೆ. ಈ ಪೈಕಿ ಜಿಲ್ಲಾಸ್ಪತ್ರೆಯಲ್ಲಿ ೧೦೦, ಸೋಮವಾರಪೇಟೆ, ವೀರಾಜಪೇಟೆ ತಾಲೂಕು ಆಸ್ಪತ್ರೆಗಳಲ್ಲಿ ತಲಾ ೬೦ ಲಸಿಕೆ ಲಭ್ಯವಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸತೀಶ್ ಮಾಹಿತಿ ನೀಡಿದ್ದಾರೆ.

ಕೊಡಗು ಜಿಲ್ಲೆಯಲ್ಲಿ ಕೋವಿಡ್-೧೯ ಲಸಿಕಾಕರಣವನ್ನು ರಾಜ್ಯ ಸರ್ಕಾರದ ಮಾರ್ಗಸೂಚಿಯಂತೆ ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗಿದೆ. ಆದರೆ ಇತ್ತೀಚೆಗೆ ಕೆಲವು ರಾಜ್ಯಗಳಲ್ಲಿ ಕೋವಿಡ್-೧೯ ಪ್ರಕರಣಗಳು ವರದಿಯಾಗುತ್ತಿದ್ದು, ಇನ್ನೂ ಕೋವಿಡ್-೧೯ ಲಸಿಕೆಯ ಮುನ್ನೆಚ್ಚರಿಕೆ ಡೋಸ್ ಪಡೆಯದೆ ಉಳಿದಿರುವ ೧೮ ವರ್ಷ ಮೇಲ್ಪಟ್ಟವರು, ೬೦ ವರ್ಷ ಮೇಲ್ಪಟ್ಟವರು, ಕಡಿಮೆ ರೋಗ ನಿರೋಧಕ ಶಕ್ತಿ ಉಳ್ಳವರು ಮತ್ತು ಆರೋಗ್ಯ ಕಾರ್ಯಕರ್ತೆಯರು, ಮುಂಚೂಣಿ ಕಾರ್ಯಕರ್ತೆಯರು ಕೋವಿಡ್-೧೯ ಸೋಂಕಿಗೆ ತುತ್ತಾಗುವ ಹೆಚ್ಚಿನ ಅಪಾಯದಂಚಿನಲ್ಲಿರುತ್ತಾರೆ. ಆದ್ದರಿಂದ ಫಲಾನುಭವಿಗಳಿಗೆ ಕೊಡಗು ಜಿಲ್ಲೆಗೆ ೨೨೦ ಡೋಸ್

(ಮೊದಲ ಪುಟದಿಂದ) ಕೋರ್ಬಿವ್ಯಾಕ್ಸ್ (ಬೂಸ್ಟರ್ ಡೋಸ್) ಕೋವಿಡ್-೧೯ ಲಸಿಕೆ ಸರಬರಾಜಾಗಿದ್ದು, ಮುನ್ನೆಚ್ಚರಿಕೆ ಡೋಸ್ ಆಗಿ ಬಳಸಲು ಈಗಾಗಲೇ ಆರೋಗ್ಯ ಸಂಸ್ಥೆಗಳಿಗೆ ಸೂಚಿಸಲಾಗಿದೆ.

ಕೋರ್ಬಿವ್ಯಾಕ್ಸ್ ಲಸಿಕೆಯನ್ನು ಕೋವಿಶೀಲ್ಡ್ ಅಥವಾ ಕೋವ್ಯಾಕ್ಸಿನ್ ೨ ಡೋಸ್ ಲಸಿಕೆ ಪಡೆದ ಫಲಾನುಭವಿಗಳು ೬ ತಿಂಗಳುಗಳು ಅಥವಾ ೨೬ ವಾರಗಳನ್ನು ಪೂರೈಸಿದ ೧೮ ವರ್ಷ ಮೇಲ್ಪಟ್ಟವರು, ೬೦ ವರ್ಷ ಮೇಲ್ಪಟ್ಟವರು, ಕಡಿಮೆ ರೋಗ ನಿರೋಧಕ ಶಕ್ತಿ ಉಳ್ಳವರು ಮತ್ತು ಆರೋಗ್ಯ ಕಾರ್ಯಕರ್ತೆಯರು, ಮುಂಚೂಣಿ ಕಾರ್ಯಕರ್ತೆಯರು ಮುನ್ನೆಚ್ಚರಿಕೆ ಡೋಸ್ ಲಸಿಕಾಕರಣಕ್ಕೆ ಬಾಕಿ ಇರುವ ಫಲಾನುಭವಿಗಳು ಕೋರ್ಬಿವ್ಯಾಕ್ಸ್ ಲಸಿಕೆಯನ್ನು ಪಡೆಯಬಹುದು. ತಾ.೪ರಿಂದ ಲಸಿಕೆಯನ್ನು ಉಚಿತವಾಗಿ ಪಡೆದುಕೊಳ್ಳುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸತೀಶ್ ತಿಳಿಸಿದ್ದಾರೆ.