ಮಡಿಕೇರಿ, ಜ. ೩: ೧೯೯೩ರಲ್ಲಿ ರಾಮಜನ್ಮಭೂಮಿ ಹೋರಾಟದ ಸಂದರ್ಭ ಹುಬ್ಬಳ್ಳಿಯಲ್ಲಿ ಸೃಷ್ಟಿಯಾದ ಸಂಘರ್ಷ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಇದೀಗ ಹಿಂದೂ ಹೋರಾಟಗಾರರನ್ನು ಬಂಧಿಸಿರುವುದನ್ನು ಖಂಡಿಸಿ ನಗರದಲ್ಲಿ ಜಿಲ್ಲಾ ಬಿಜೆಪಿ ವತಿಯಿಂದ ಪ್ರತಿಭಟನೆ ನಡೆಯಿತು.
ನಗರದ ಸ್ಕಾ÷್ವ.ಲೀ. ಅಜ್ಜಮಾಡ ದೇವಯ್ಯ ವೃತ್ತದಲ್ಲಿ ಜಮಾವಣೆಗೊಂಡ ಪ್ರತಿಭಟನಾಕಾರರು ರಾಜ್ಯ ಸರಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ಹಲವು ವರ್ಷಗಳ ಕಾಲದ ಹಿಂದೂ ಸಮಾಜದ ಕನಸು ಇದೀಗ ನನಸಾಗುತ್ತಿದೆ. ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣವಾಗಿದೆ. ಹಲವು ವರ್ಷದ ಹಿಂದಿನ ಪ್ರಕರಣವನ್ನು ಇಂದು ಮತ್ತೆ ತೆರೆದಿರುವುದು ರಾಜಕೀಯ ಪ್ರೇರಿತ. ಈ ಹಿಂದೆಯೂ ಕಾಂಗ್ರೆಸ್ ಸರಕಾರ ಇದ್ದ ಸಂದರ್ಭ ಸಿ ರಿಪೋರ್ಟ್ ಮೂಲಕ ಪ್ರಕರಣದ ವಿರುದ್ಧ ಕ್ರಮ ತೆಗೆದುಕೊಳ್ಳಬಹುದಿತ್ತು. ಆದರೆ, ರಾಮಮಂದಿರ ಉದ್ಘಾಟನೆ ಸಂದರ್ಭ ಹಿಂದೂ ಸಮಾಜವನ್ನು ಕೆರಳಿಸುವ ಕೆಲಸ ರಾಜ್ಯ ಸರಕಾರ ಮಾಡುತ್ತಿದೆ. ಇದರಿಂದ ಆಘಾತಕಾರಿ ಸಂದೇಶ ನೀಡಲು ಮುಂದಾಗಿದೆ. ಅಲ್ಪಸಂಖ್ಯಾತರನ್ನು ಓಲೈಸುವ ಕೆಲಸ ಸರಕಾರ ಮಾಡುತ್ತಿದೆ ಎಂದು ಕಿಡಿಕಾರಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಪಳೆಯಂಡ ರಾಬಿನ್ ದೇವಯ್ಯ ಮಾತನಾಡಿ, ದೇಶದ ಪ್ರತೀಕವಾದ ಅಯೋಧ್ಯೆ ರಾಮಮಂದಿರ ಉದ್ಘಾಟನೆ ಸುಸಂದರ್ಭದಲ್ಲಿ ರಾಜ್ಯದಲ್ಲಿ ಕರಸೇವಕರನ್ನು ಬಂಧಿಸಿರುವುದು ಖಂಡನೀಯ. ಈ ಮೂಲಕ ರಾಜ್ಯ ಸರಕಾರ ದ್ವೇಷ ರಾಜಕಾರಣದ ಮೂಲಕ ಧರ್ಮ ಸಂಘರ್ಷ ಸೃಷ್ಟಿಗೆ ಮುಂದಾಗಿದೆ. ಹಿಂದುತ್ವ ಉಳಿಸುವ ಕೆಲಸ ಮಾಡುವವರನ್ನು ಬಂಧಿಸಿದರೆ ನಾವು ಜಗ್ಗಲ್ಲ. ಜೈಲಿನಲ್ಲಿಯೂ ರಾಮ ಜಪ ಮಾಡುತ್ತೇವೆ. ರಾಮಮಂದಿರ ನಿರ್ಮಾಣವನ್ನು ಸರ್ವಧರ್ಮಿಯರು ಸ್ವಾಗತಿಸಿದ್ದಾರೆ. ಆದರೆ, ಸಿದ್ದರಾಮಯ್ಯ ಸರಕಾರ ಮಾತ್ರ ತುಷ್ಠೀಕರಣ ನೀತಿ ಅನುಸರಿಸುತ್ತಿದೆ ಎಂದು ದೂರಿದರು.
ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಬಿ.ಕೆ. ಅರುಣ್ ಕುಮಾರ್, ಜಿಲ್ಲಾ ವಕ್ತಾರ ಮಹೇಶ್ ಜೈನಿ, ನಗರಾಧ್ಯಕ್ಷ ಮನುಮಂಜುನಾಥ್, ನಗರಸಭಾ ಅಧ್ಯಕ್ಷೆ ನೆರವಂಡ ಅನಿತಾ ಪೂವಯ್ಯ, ನಗರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಎಸ್.ಸಿ. ಸತೀಶ್, ನಗರ ಬಿಜೆಪಿ ಉಪಾಧ್ಯಕ್ಷ ಬಿ.ಕೆ. ಜಗದೀಶ್, ಹಿಂದುಳಿದ ವರ್ಗ ಮೋರ್ಚಾದ ಅಧ್ಯಕ್ಷ ಬಿ.ಎಂ. ರಾಜೇಶ್, ನಗರಸಭಾ ಸದಸ್ಯರುಗಳಾದ ಅರುಣ್ ಶೆಟ್ಟಿ, ಶ್ವೇತಾ ಪ್ರಶಾಂತ್, ಶಾರದ ನಾಗರಾಜ್, ಉಷಾ ಕಾವೇರಪ್ಪ, ಸೇರಿದಂತೆ ಇನ್ನಿತರರು ಹಾಜರಿದ್ದರು.