್ಡ ಅನಿಲ್ ಎಚ್.ಟಿ.
ಮಡಿಕೇರಿ, ಜ. ೨: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದಲ್ಲಿ ಪ್ರಭು ರಾಮಚಂದ್ರನಿಗೆ ಪೂಜೆ ಸಲ್ಲಿಸುವ ಅತ್ಯಂತ ಪವಿತ್ರವಾದ ಮತ್ತು ಶ್ರೇಷ್ಠ ಹೊಣೆ ಯಾರದ್ದು..
ಈ ಪೂಜೆಯ ಹೊಣೆ ಹೊತ್ತಿರುವವರೇ ಮಹಂತ ಸತ್ಯೇಂದ್ರದಾಸ್. ಇವರು ಶ್ರೀರಾಮಮಂದಿರದ ಪ್ರಧಾನ ಅರ್ಚಕರಾಗಿದ್ದು, ೧೯೯೨ ರ ಮಾರ್ಚ್ ೧ ರಿಂದ ಅಯೋಧ್ಯೆಯ ಶ್ರೀರಾಮಮಂದಿರದಲ್ಲಿ ಸತ್ಯೇಂದ್ರದಾಸ್ ಪ್ರಧಾನ ಅರ್ಚಕರಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಇವರಿಗೆ ನಾಲ್ಕು ಮಂದಿ ಅರ್ಚಕರು ಸಹಾಯಕ್ಕಾಗಿ ನಿಯೋಜಿತರಾಗಿದ್ದಾರೆ. ೩೨ ವರ್ಷಗಳಿಂದ ರಾಮನಿಗೆ ಪೂಜೆ ಸಲ್ಲಿಸುತ್ತಿರುವ ಹಿರಿಮೆಯನ್ನು ಈ ಮಹಂತ ಸತ್ಯೇಂದ್ರದಾಸ್ ಹೊಂದಿದ್ದಾರೆ. ಬಾಬರಿ ಮಸೀದಿ ನೆಲಸಮವಾಗುವ ೮ ತಿಂಗಳ ಮುನ್ನ ಸತ್ಯೇಂದ್ರದಾಸ್ ರಾಮನ ಪೂಜೆಗೆ ನಿಯುಕ್ತರಾಗಿದ್ದರು. ಶ್ರೀರಾಮನ ಮೇಲಿನ ಅಪರಿಮಿತ ಭಕ್ತಿ, ಪ್ರಾಮಾಣಿಕವಾಗಿ ಪ್ರಭುವಿನ ಪೂಜೆ ಸಲ್ಲಿಸುತ್ತಿರುವ ಹಿರಿಮೆಯಿಂದಾಗಿ ಇದೀಗ ೮೪ ವರ್ಷ ಪ್ರಾಯದ ಸತ್ಯೇಂದ್ರದಾಸ್ ಅವರನ್ನೇ ಅಯೋಧ್ಯೆಯಲ್ಲಿ ರಾಮನ ಪೂಜೆಯ ಪ್ರಧಾನ ಅರ್ಚಕರಾಗಿ ಮುಂದುವರೆಸಲಾಗಿದೆ. ಮೂರು ದಶಕಗಳ ಕಾಲ ನಿಸ್ವಾರ್ಥವಾಗಿ ಶ್ರೀರಾಮನ ಸೇವೆ ಸಲ್ಲಿಸಿರುವ ಸತ್ಯೇಂದ್ರದಾಸ್ ಮುಂದೆಯೂ ಅಂದರೆ ಕೊನೇ ಉಸಿರು ಇರುವವರೆಗೂ ಪ್ರಭುವಿನ ಪೂಜಾ ಸೇವೆಗೆ ದೇಹ ಮತ್ತು ಮನಸ್ಸು ಸಿದ್ಧಗೊಂಡಿದೆ ಎಂದು ಹೇಳಿದ್ದಾರೆ.
ಇಲ್ಲಿ ಮತ್ತೊಂದು ಪ್ರಮುಖ ಅಂಶ ನೆನಪಿರಲಿ.. ಅಯೋಧ್ಯೆಯ ಶ್ರೀ ರಾಮನ ಮಂದಿರಕ್ಕೆ ಪೂಜೆ ಸಲ್ಲಿಸಲು ತೀರ್ಥ ಕ್ಷೇತ್ರ ಟ್ರಸ್ಟ್ ಅರ್ಹ ಅರ್ಚಕರಿಂದ ಅರ್ಜಿಯನ್ನು ಕರೆಯಿತು. ಈ ಸಂದರ್ಭ ಭಾರತ ಮಾತ್ರವಲ್ಲದೇ ಜಗತ್ತಿನಾದ್ಯಂತಲಿನಿAದ ಬಂದ ಅರ್ಜಿಗಳ ಸಂಖ್ಯೆ ೩ ಸಾವಿರವನ್ನು ಮೀರಿತ್ತು. ಇಷ್ಟೊಂದು ಅರ್ಜಿಯನ್ನು ಕೂಲಂಕಶವಾಗಿ ಪರಿಶೀಲಿಸಿದ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್, ಈ ಪೈಕಿ ೫೦ ಮಂದಿಯನ್ನು ಅಂತಿಮ ಸುತ್ತಿಗೆ ಆಯ್ಕೆ ಮಾಡಿತು.
ಇವರಿಗೆಲ್ಲಾ ಮತ್ತಷ್ಟು ತರಬೇತಿ ನೀಡಿದ ಬಳಿಕವೇ ಮುಂದಿನ ದಿನಗಳಲ್ಲಿ ಈ ಪೈಕಿ ಪ್ರಧಾನ ಅರ್ಚಕರನ್ನು ಆಯ್ಕೆ ಮಾಡಲು ತೀರ್ಮಾನಿಸಿದ ಟ್ರಸ್ಟ್ ಪ್ರಮುಖರು ಇದೀಗ ಮಹಂತ ಸತ್ಯೇಂದ್ರದಾಸ್ ಅವರನ್ನೇ ಪ್ರಧಾನ ಅರ್ಚಕರನ್ನಾಗಿ ಮುಂದುವರೆಸಿದೆ. ಹೀಗಾಗಿ ಜನವರಿ ೨೨ ರಂದು ಶ್ರೀರಾಮನ ಪ್ರತಿಷ್ಠಾಪನೆಯಾಗುವ ದಿನದಂದು ಮಹಂತ ಸತ್ಯೇಂದ್ರದಾಸ್ ಅವರೇ ಪ್ರಭುವಿನ ಐತಿಹಾಸಿಕ ಪೂಜೆಗೆ ಸಿದ್ಧರಾಗುತ್ತಿದ್ದಾರೆ.
ಮಹಂತ ಸತ್ಯೇಂದ್ರದಾಸ್ ಹಿನ್ನೆಲೆ
ಸಂತ ಕಬೀರ್ ನಗರ ಮೂಲದ ಸತ್ಯೇಂದ್ರದಾಸ್ ೧೮ ನೇ ವರ್ಷದಲ್ಲಿಯೇ ಅಯೋಧ್ಯೆ ನಗರಕ್ಕೆ ಬಂದು ವಾಸವಾಗಿದ್ದಾರೆ. ಧಾರ್ಮಿಕತೆಯನ್ನು ಜೀವನದಲ್ಲಿ ಅಳವಡಿಸಿಕೊಂಡ ಸತ್ಯೇಂದ್ರದಾಸ್ ತನ್ನ ತಂದೆ ಮೂಲಕ ಅಭಿದ್ ದಾಸ್ ಅವರೊಂದಿಗೆ ನಿಕಟ ಸಂಪರ್ಕ ಅಯೋಧ್ಯೆಯಲ್ಲಿ ಏರ್ಪಟ್ಟಿತ್ತು. ಅಭಿದ್ ದಾಸ್ ಯಾರು ಎಂದರೆ, ೧೯೪೯ ರಲ್ಲಿ ಪ್ರಥಮ ಬಾರಿಗೆ ಅಯೋಧ್ಯೆಯ ಬಾಬರಿ ಮಸೀದಿಯಲ್ಲಿ ಶ್ರೀರಾಮನ ಮೂರ್ತಿಗಳನ್ನು ಮಂದಿರದಲ್ಲಿ ಪ್ರತಿಷ್ಟಾಪಿಸಿದªರು, ಅವರೊಂದಿಗೆ ಧಾರ್ಮಿಕ ಬಾಂಧವ್ಯ ಹೊಂದಿದ್ದ ಸತ್ಯೇಂದ್ರದಾಸ್ ಈ ಪ್ರಭಾವದಿಂದ ಸನ್ಯಾಸತ್ವವನ್ನು ಸ್ವೀಕರಿಸಿದರು. ಸಂಸ್ಕೃತ ಮಹಾವಿದ್ಯಾಲಯಕ್ಕೆ ಸೇರಿ ಅಲ್ಲಿ ಸಹಾಯಕ ಪ್ರೊಫೆಸರ್ ಆಗಿ ಕೂಡ ಸತ್ಯೇಂದ್ರ ದಾಸ್ ಕಾರ್ಯನಿರ್ವಹಿಸಿದ್ದರು. ಆದರೆ ತರಗತಿಯಲ್ಲಿ ಮಕ್ಕಳಿಗೆ ಸಂಸ್ಕೃತ ಹೇಳಿಕೊಡುವುದಕ್ಕಿಂತ ದೇಶಕ್ಕೇ ಅಗತ್ಯವಾದ ಮಹತ್ವವಾದ ಧಾರ್ಮಿಕ ಕೈಂಕರ್ಯ ತನ್ನಪಾಲಿಗಿದೆ ಎಂದು ಮನಸ್ಸಿನಲ್ಲಿ ಭಾವಿಸಿದ್ದ ಸತ್ಯೇಂದ್ರದಾಸ್ ವಿಶ್ವವಿದ್ಯಾನಿಲಯದಿಂದ ಹೊರಬಂದು ಧಾರ್ಮಿಕ ಚಟುವಟಿಕೆಗಳಲ್ಲಿ ಅದರಲ್ಲಿಯೂ ಶ್ರೀರಾಮನ ಮಹತ್ವವನ್ನು ಸಾರುವ ಕಾರ್ಯಕ್ರಮಗಳಲ್ಲಿ ಸಕ್ರಿಯರಾದರು.
ಅಭಿದ್ ದಾಸ್ ಮುಖ್ಯಸ್ಥರಾಗಿದ್ದ ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ನಿರ್ಮಾಣವಾಗುವಲ್ಲಿ ಪ್ರಾರಂಭಿಕ ಆಂದೋಲನ ಕೈಗೊಂಡಿದ್ದ ನಿರ್ವಾಣ ಅಖಾಡದಲ್ಲಿಯೂ ಅಭಿದ್ ದಾಸ್ ಜತೆಗೆ ಸತ್ಯೇಂದ್ರದಾಸ್ ಕೂಡ ಪ್ರಭಾವೀ ನಾಯಕರಾಗಿ ಗುರುತಿಸಿಕೊಂಡಿದ್ದರು.
ನೆನಪಿನ ಸುರುಳಿ: ಅಯೋಧ್ಯೆಯಲ್ಲಿ ೧೯೯೨ ರ ಡಿಸೆಂಬರ್ ೬ ರಂದು ಬಾಬರಿ ಮಸೀದಿ ನೆಲಸಮವಾಗುವ ಸಂದರ್ಭ ಸತ್ಯೇಂದ್ರದಾಸ್ ಸ್ಥಳದಲ್ಲಿಯೇ ಇದ್ದರು. ಅಂದು ಕರಸೇವಕರು ಅಯೋಧ್ಯೆಗೆ ಸಾಗರೋಪಾದಿಯಲ್ಲಿ ಬಂದ ಸಂದರ್ಭ ಸತ್ಯೇಂದ್ರದಾಸ್ ಶ್ರೀರಾಮನ ಮೂರ್ತಿಗೆ ಬೆಳಗ್ಗಿನ ಪೂಜೆ ಸಲ್ಲಿಸಿದ ಕೂಡಲೇ ಅದನ್ನು ತೆಗೆದುಕೊಂಡು ಸುಭದ್ರವಾದ ಸ್ಥಳಕ್ಕೆ ಕೊಂಡೊಯ್ದಿದ್ದರು. ಪ್ರಭು ರಾಮನ ಮೂರ್ತಿಗೆ ಯಾವುದೇ ಹಾನಿಯಾಗದಂತೆ ಸತ್ಯೇಂದ್ರದಾಸ್ ಮತ್ತು ಅರ್ಚಕರ ತಂಡ ಅಂದು ವಿಶೇಷ ಗಮನ ಹರಿಸಿತ್ತು. ಆ ಸಂದರ್ಭವನ್ನು ಸತ್ಯೇಂದ್ರದಾಸ್ ಸ್ಮರಿಸಿಕೊಂಡದ್ದು ಹೀಗೆ. ಅದು ೧೯೯೨ ರ ಡಿಸೆಂಬರ್ ೬. ಕಳೆದ ೪-೫ ದಿನಗಳಿಂದ ದೇಶದ ಎಲ್ಲಾ ಕಡೆಗಳಿಂದ ಕರಸೇವಕರು ಅಯೋಧ್ಯೆಯತ್ತ ಸಾಗರೋಪಾದಿಯಲ್ಲಿ ಸಾಗಿಬರುತ್ತಿದ್ದರು. ನನಗೆ ಇವರನ್ನೆಲ್ಲಾ ನೋಡಿ ಈ ನಗರದಲ್ಲಿ ಏನೋ ವಿಶೇಷವಾದದ್ದು ಸಂಭವಿಸಲಿದೆ ಎಂದು ಗೊತ್ತಾಗಿತ್ತು. ಸಾಧುಸಂತರು ಕೂಡ ಕರಸೇವಕರ ಒಳಿತಿಗಾಗಿ ಪ್ರಾರ್ಥಿಸತೊಡಗಿದ್ದರು. ಅಂದು ಡಿಸೆಂಬರ್ ೬ ರಂದು ಎಂದಿನAತೆ ಮಸೀದಿ ಒಳಗಿನ ಪ್ರಾಂಗಣದಲ್ಲಿದ್ದ ಶ್ರೀರಾಮನ ಮೂರ್ತಿಗೆ ಯಥಾಪ್ರಕಾರ ಪೂಜೆ ಸಲ್ಲಿಸಿ ಮಧ್ಯಾಹ್ನ ೧೧ ಗಂಟೆ ವೇಳೆಗೆ ಬಾಗಿಲು ಮುಚ್ಚುವ ಕಾರ್ಯದಲ್ಲಿದ್ದೆ. ವಿಶ್ವಹಿಂದೂ ಪರಿಷತ್ನ ಕೆಲವು ಸ್ವಯಂಸೇವಕರು ಬಂದು ಪ್ರಭುವಿಗೆ ಕೈ ಮುಗಿದರು. ಎಳನೀರು ಮತ್ತು ಪೂಜೆಗೆ ಬೇಕಾದ ಹೂವುಗಳನ್ನು ಕೇಳಿ ಪಡೆದರು. ಇದು ಯಾಕಾಗಿ ಎಂದು ಪ್ರಶ್ನಿಸಿದೆ. ಕೆಲವೇ ಸಮಯದಲ್ಲಿ ಗೊತ್ತಾಗಲಿದೆ ಎಂದು ಉತ್ತರಿಸಿದರು. ಅವರು ತೆರಳಿದ ಬಳಿಕ ಕೆಲ ಹೊತ್ತು ಅಲ್ಲಿಯೇ ನಿಂತಿದ್ದೆ. ಆವಾಗಲೇ ಘೋಷಣೆಗಳು ಕೇಳಿಬಂದವು. ನಾವು ಬಯಸಿದ್ದ ಸಮಯ ಬಂದೇ ಬಿಟ್ಟಿತು ಎಂಬ ಘೋಷಣೆ ಕೇಳತೊಡಗಿತು. ಹರಹರ ಮಹಾದೇವ್.. ಶ್ರೀರಾಮ ಚಂದ್ರಕೀ ಜೈ ಎಂಬ ಘೋಷಣೆ ಮುಗಿಲು ಮುಟ್ಟತೊಡಗಿತು. ನನಗೆ ಆಗ ಬಾಬರಿ ಮಸೀದಿ ಕೆಡವುತ್ತಿದ್ದಾರೆ ಎಂದು ಸ್ಪಷ್ಟವಾಗತೊಡಗಿತು. ಸಮಯ ಮಧ್ಯಾಹ್ನ ೧೧.೨೦ ಗಂಟೆ ಇರಬಹುದು. ನನ್ನ ಸಹಾಯಕ ಅರ್ಚಕರು ಕರೆದು ಕೂಡಲೇ ಶ್ರೀರಾಮಚಂದ್ರನ ವಿಗ್ರಹ, ಪೂಜಾ ಪರಿಕರಗಳನ್ನು ಜೋಪಾನವಾಗಿ ಎತ್ತಿಕೊಂಡು ದೇವಾಲಯ ಸ್ಥಳದಿಂದ ಹೊರಕ್ಕೆ ಬಿರಬಿರನೆ ಸಾಗಿದೆವು. ಏನು ಮಾಡಬೇಕೆಂದೂ ನಮಗೆ ಗೊತ್ತಿರಲಿಲ್ಲ. ರಾಮನ ಮೂರ್ತಿಯನ್ನು ಬಿಗಿಯಾಗಿ ಅಪ್ಪಿಕೊಂಡಿದ್ದೆ. ನನಗೆ ಇಲ್ಲಿಂದ ಮೂರ್ತಿ ಕದಲಿಸಲು ಸ್ವಲ್ಪವೂ ಇಷ್ಟವಿರಲಿಲ್ಲ. ಆದರೆ, ಇಲ್ಲಿಯೇ ಬಿಟ್ಟರೆ ಶ್ರೀರಾಮನಿಗೆ ಅಪಾಯ ಸಾಧ್ಯತೆಯಿತ್ತು. ಕೆಲ ಮಾರು ದೂರದಲ್ಲಿ ಬೇವಿನ ಮರದ ಅಡಿಯಲ್ಲಿ ಮೂರ್ತಿಯನ್ನು ಭದ್ರವಾಗಿ ಇರಿಸಿದೆವು. ದೂರದಲ್ಲಿ ಬಾಬರಿ ಮಸೀದಿ ಕೆಳಕ್ಕೆ ಬೀಳುತ್ತಿರುವ ದೃಶ್ಯ ಕಾಣುತ್ತಿತ್ತು. ಸಂಜೆ ೫.೩೦ ಗಂಟೆ ವೇಳೆಗೆ ಬಾಬರಿ ಮಸೀದಿ ಸಂಪೂರ್ಣ ನೆಲಸಮವಾಗಿತ್ತು. ಸಂಜೆ ೭ ಗಂಟೆಗೆ ನಾವಿದ್ದ ಸ್ಥಳಕ್ಕೆ ವಿಶ್ವಹಿಂದೂ ಪರಿಷತ್ನ ಸ್ಥಳೀಯ ಮುಖಂಡರು ಬಂದರು. ರಾಮನಿಗೆ ಟೆಂಟ್ ಸಿದ್ಧ ಮಾಡಿದರು. ಅಲ್ಲಿಯೇ ಶ್ರೀರಾಮನ ಮೂರ್ತಿ ಇರಿಸಲಾಯಿತು. ಸಂಜೆಯ ಪೂಜೆಯನ್ನು ಅಲ್ಲಿಯೇ ಮಾಡತೊಡಗಿದೆ. ಪ್ರಭುವೇ ನಿನಗೆ ಇಂಥ ಸ್ಥಿತಿ ಬಂತೇ ಎಂದು ಕಣ್ಮೀರಿಟ್ಟುಕೊಂಡೇ ಪೂಜೆ ಸಲ್ಲಿಸತೊಡಗಿದ್ದೆ. ಆದರೆ ಮನದಲ್ಲಿ ಒಂದೇ ಒಂದು ಪ್ರಾರ್ಥನೆ ಇತ್ತು.
ರಾಮನಿಗೆ ಮನಸ್ಸಿನಲ್ಲಿಯೇ ಭರವಸೆ ನೀಡಿದ್ದೆ.. ಹೇ ಪ್ರಭು.. ಇಂದು ನೀನು ಭಕ್ತರ ದೃಷ್ಟಿಯಿಂದ ಮರೆಯಾಗಬಹುದು. ಆದರೆ ಒಂದಲ್ಲ ಒಂದು ದಿನ ನಿನ್ನನ್ನು ಮತ್ತೆ ಕೊಂಡಾಡುವ ದಿನ ಬರುತ್ತದೆ. ವೈಭವದ ದಿನಗಳು ನಿನಗೆ ಮರಳುವುದನ್ನು ನಾನು ಕಣ್ಣಾರೆ ಕಾಣಲೇಬೇಕು ಎಂದು ಪ್ರಾರ್ಥಿಸಿದ್ದೆ. ಆ ದಿನ ಇದೇ ೨೨ ರಂದು ಬರುತ್ತಿರುವುದು ತನ್ನ ಭಾಗ್ಯ ಎಂದು ಸತ್ಯೇಂದ್ರದಾಸ್ ಹೆಮ್ಮೆಯಿಂದ ಸ್ಮರಿಸಿಕೊಂಡರು.
ರೂ. ೧೦೦ ವೇತನಕ್ಕೆ ಕೆಲಸ ಮಾಡಿದ್ದರು
ಅಯೋಧ್ಯೆಯಲ್ಲಿನ ಶ್ರೀ ರಾಮಚಂದ್ರನ ಮಹಾಪೂಜೆಗೆ ೧೯೯೨ ರಲ್ಲಿ ಸತ್ಯೇಂದ್ರದಾಸ್ ನಿಯೋಜಿತರಾದಾಗ ಅವರಿಗೆ ದೊರಕುತ್ತಿದ್ದ ಮಾಸಿಕ ವೇತನ ಕೇವಲ ಕೇವಲ ೧೦೦ ರೂಪಾಯಿ ಮಾತ್ರ. ಹೀಗಿದ್ದರೂ ಯಾವುದೇ ಅಸಮಾಧಾನ ವ್ಯಕ್ತಪಡಿಸದೇ ಮಹಂತ ಸತ್ಯೇಂದ್ರದಾಸ್ ದೇವರ ಪೂಜಾ ಕೈಂಕರ್ಯದಲ್ಲಿ ತೊಡಗಿಸಿಕೊಂಡರು. ಈ ಹಣದಲ್ಲಿ ಜೀವನ ಸಾಗಿಸುವುದು ಕಷ್ಟಸಾಧ್ಯವಾದಾಗ ಶಾಲೆಯೊಂದರಲ್ಲಿ ಮಕ್ಕಳಿಗೆ ಪಾಠ ಹೇಳಿಕೊಡುವ ಅರೆಕಾಲಿಕ ವೃತ್ತಿ ಹಿಡಿದರು. ೨೦೦೭ ರ ನಂತರ ಸತ್ಯೇಂದ್ರದಾಸ್ ಅವರಿಗೆ ೧೩ ಸಾವಿರ ರೂ. ಮತ್ತು ದೇವಾಲಯದ ಇತರ ಅರ್ಚಕರಿಗೆ ೮ ಸಾವಿರ ರೂ. ಗಳನ್ನು ತೀರ್ಥಕ್ಷೇತ್ರ ಟ್ರಸ್ಟ್ ನಿಗದಿ ಮಾಡಿತು.
ಅಯೋಧ್ಯೆಯಲ್ಲಿ ಇಂದಲ್ಲ ನಾಳೆ ಖಂಡಿತವಾಗಿಯೂ ಶ್ರೀರಾಮನಿಗೆ ಮಂದಿರ ನಿರ್ಮಾಣವಾಗುತ್ತದೆ ಎಂದು ಬಲವಾಗಿ ನಂಬಿದ್ದ ಸತ್ಯೇಂದ್ರದಾಸ್ ಅವರ ನಂಬಿಕೆ ಕೊನೆಗೂ ನಿಜವಾಗುವ ದಿನ ಹತ್ತಿರ ಬಂದಿದೆ. ಅಯೋಧ್ಯೆಯನ್ನು ಬಹಳ ಚೆನ್ನಾಗಿ ತಿಳಿದಿರುವ ಸತ್ಯೇಂದ್ರದಾಸ್ ಇದೇ ರೀತಿ ಶ್ರೀರಾಮಮಂದಿರದ ಬಗ್ಗೆಯೂ ಸೂಕ್ಷö್ಮವಾಗಿ ಅರಿತವರಾಗಿದ್ದಾರೆ. ಇದೀಗ ಈ ಅಂಶಗಳೇ ಸತ್ಯೇಂದ್ರದಾಸ್ ಅವರನ್ನೇ ಶ್ರೀರಾಮಮಂದಿರದ ಪ್ರಧಾನ ಅರ್ಚಕರಾಗಿ ಮುಂದುವರೆಸಲು ಕಾರಣವಾಗಿದೆ.
ಕಾಯಬೇಕಿತ್ತು : ಗಮನಾರ್ಹ ಎಂದರೆ ಅಯೋಧ್ಯೆಯ ಶ್ರೀರಾಮಮಂದಿರ ದೇವಾಲಯದ ಪ್ರಧಾನ ಅರ್ಚಕರಾಗಿ ಮೂರುದಶಕಗಳಿಂದ ಪೂಜೆ ಸಲ್ಲಿಸುತ್ತಿರುವ ಸತ್ಯೇಂದ್ರದಾಸ್, ಬಿಜೆಪಿ ಮಾತ್ರವಲ್ಲ ಹಿಂದೂ ಸಂಘಟನೆಗಳ ಕಠಿಣ ವಿಮರ್ಶಕರಾಗಿದ್ದಾರೆ. ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ನಿರ್ಮಾಣದ ಬಗ್ಗೆ ಕೋರ್ಟ್ ತೀರ್ಪಿಗೆ ಕಾಯಬೇಕಾಗಿತ್ತು. ಮಸೀದಿ ಕೆಡವಲು ಮುಂದಾಗದೇ ಒಂದಲ್ಲ ಒಂದು ದಿನ ಕೋರ್ಟ್ ನೀಡಲಿರುವ ರಾಮನ ಪರವಾದ ಆದೇಶಕ್ಕೆ ಕಾಯಬೇಕಾಗಿತ್ತು ಎಂದು ದಾಸ್ ಹೇಳಿದ್ದಾರೆ.
ಬಾಬರಿ ಮಸೀದಿ ಕೆಡವಿದ್ದರಿಂದಾಗಿ ಹಿಂದೂಗಳಿಗೇ ನಷ್ಟವಾಯಿತು ಎಂದು ವಿಶ್ಲೇಷಿಸುವ ಸತ್ಯೇಂದ್ರದಾಸ್, ಈ ಒಂದು ಮಂದಿರಕ್ಕಾಗಿ ಭಾರತದಲ್ಲಿ ನೂರಾರು ಮಂದಿರಗಳನ್ನು ಕಳೆದುಕೊಂಡೆವು. ಪವಿತ್ರ ಸ್ಥಳಗಳಿಗೆ ಹಾನಿಯಾಯಿತು. ಇದರ ಬದಲಿಗೆ ಕೊಂಚ ತಾಳ್ಮೆಯಿಂದ ಕಾಯುತ್ತಿದ್ದರೆ ನ್ಯಾಯಾಲಯ ಶ್ರೀರಾಮನ ಪರವೇ ತೀರ್ಪು ನೀಡುತ್ತಿತ್ತು . ವಿವಾದ ಬಹಳ ಬೇಗ ಇತ್ಯರ್ಥವಾಗಿದ್ದರೆ ಅದರಿಂದ ಮುಸ್ಲಿಮರಿಗೆ ಸಾಕಷ್ಟು ಅನುಕೂಲವಾಗುತ್ತಿತ್ತು, ಕೋಮುಧ್ವೇಷದ ಸನ್ನಿವೇಶ ದೇಶವ್ಯಾಪಿ ಇರುತ್ತಿರಲಿಲ್ಲ ಎಂದು ಸತ್ಯೇಂದ್ರದಾಸ್ ಹೇಳಿಕೆ ನೀಡಿದ್ದಾರೆ.
ರಾಹುಲ್ ಗಾಂಧಿ ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಭಾರತ್ ಜೋಡೋ ಯಾತ್ರೆ ನಡೆಸಿದ ಸಂದರ್ಭ ಮಹಂತ ಸತ್ಯೇಂದ್ರದಾಸ್ ಭಾರತ್ ಜೋಡೋಗೆ ಬೆಂಬಲ ನೀಡಿ ಹಾರೈಸಿದ್ದರು. ಇದು ಬಿಜೆಪಿ ಪ್ರಮುಖರ ಕಣ್ಣು ಕೆಂಪಾಗುವAತೆ ಮಾಡಿತ್ತು. ಏನು ಹೇಳಬೇಕೋ ಅದನ್ನು ನಿರ್ಭೀತಿಯಿಂದ ಹೇಳುವ ಮನೋಭಾವ ಹೊಂದಿರುವ ಪಂಡಿತ್ ಸತ್ಯೇಂದ್ರದಾಸ್ ಈ ಕಾರಣದಿಂದಲೂ ಹಲವೊಮ್ಮೆ ಸುದ್ದಿಯಲ್ಲಿರುತ್ತಾರೆ.