ಸ್ನೇಹಿತರೇ, ನಿನ್ನೆ (೦೧.೦೧.೨೦೨೪) ರಂದು ಬೆಳಿಗ್ಗೆ ಉದಯಿಸಿದ ನೇಸರ, ಸಂಜೆಯ ಬಾನಂಗಳದ ಚಂದಿರ, ಮಿನುಗಿದ ತಾರೆಗಳು, ತಂಪಾದ ಗಾಳಿ, ಮನೆಯ ಪುಟ್ಟ ಕಂದನ ಕೇಕೆ, ಮನೆಯಲ್ಲಿರುವ ಪುಟ್ಟ ನಾಯಿ ಮರಿ ತೋರಿದ ಪ್ರೀತಿ, ಸುಶ್ರಾವ್ಯ ಹಾಡುಗಳ ಧನಿ ಹೊರಡಿಸಿದ ಕಸದ ಗಾಡಿ ಎಲ್ಲವೂ ನಿನ್ನೆಯ ಬೆಳಿಗ್ಗೆ ಮೊದಲಿನಂತೆಯೇ ಇತ್ತಲ್ಲವೇ?

ಆದರೂ ಮನುಜರಾದ ನಾವು ವರ್ಷಕೊಮ್ಮೆ ನಮ್ಮೆಲ್ಲರ ಹುಟ್ಟು ಹಬ್ಬವನ್ನು ಸಂಭ್ರಮಿಸುವAತೆ, ವರ್ಷಕ್ಕೊಮ್ಮೆ ಬದಲಾಗುವ ೨೦೨೪ ರ ಕ್ಯಾಲೆಂಡರ್ ಅನ್ನು ಸ್ವಾಗತಿಸಿದ್ದೇವೆ. ಸಂಭ್ರಮಿಸಿದ್ದೇವೆ. ಹೊಸತನಕ್ಕೆ ಮುನ್ನುಡಿ ಬರೆದಿದ್ದೇವೆ. ಎಂದಿಗಿAತಲೂ ಹೆಚ್ಚು ರಂಗೇರಿಸಿಕೊAಡು ಮಧುವಣಗಿತ್ತಿಯಂತೆ ಸಿಂಗರಿಸಿಕೊAಡಿದ್ದ ಕೇಕುಗಳು ಬಹುಷಃ ನಮ್ಮೆಲ್ಲರ ಉದರದಲ್ಲಿ ಕೇಕೆ ಹಾಕುತ್ತಿವೆ. ಇದರ ನಡುವೆ ನಾವು ಮರೆತ ಒಂದAಶ ಏನು ಗೊತ್ತೇ? ನಮ್ಮ ಆಯುಷ್ಯದ ಒಂದು ದಿನ ನಮಗೆ ಅರಿವಿಲ್ಲದೆಯೇ ಕಳೆದು ಹೋಗಿದೆ!

ಆದರೆ ಮುಂದೆ ೨೦೨೫ ಕಾದಿದೆಯಲ್ಲವೇ? ಅದುವರೆಗೆ ೩೬೬ ದಿನಗಳು ನಾವೇನು ಮಾಡುತ್ತೇವೆ ಎಂಬುದು ತುಲನಾತ್ಮಕ ಪ್ರಶ್ನೆ. ಅದೇ ಅನಿವಾರ್ಯವಾದ ಮನೆಗೆಲಸ, ಅದೇ ಉದ್ಯೋಗ ಅಲ್ಲವೇ? ಆದರೆ ಇದರ ನಡುವೆ "ಅದೇ ಮನಸ್ಥಿತಿ" "ಅದೇ ಆರೋಗ್ಯ" ಎಂಬ ಅಂಶವನ್ನಾದರೂ ಒಂದಷ್ಟು ಬದಲಾವಣೆ ಮಾಡಿಕೊಳ್ಳುವ ಪ್ರಯತ್ನವನ್ನು ನಾವೆಲ್ಲ ಮಾಡಬಹುದಲ್ಲವೇ? ದೇಹ ಹಾಗೂ ಮನಸ್ಸು ಒಂದೇ ನಾಣ್ಯದ ಎರಡು ಮುಖಗಳು.. ಮನುಷ್ಯನ ಮನಸ್ಥಿತಿಯ ಸುಧಾರಣೆಯಾದರೆ ಸಮಾಜವೇ ಬದಲಾಗುತ್ತದೆ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿದರೆ ದೇಹವೂ ಸುಸ್ಥಿತಿಯಲ್ಲಿರುತ್ತದೆ.

ಕೈಲಾದಷ್ಟು ಹಸಿದವರಿಗೆ ಸಹಾಯ ಮಾಡಿದರೆ ಸುಖ ನಿದ್ರೆ ಬರುತ್ತದೆ. ವಿದ್ಯಾದಾನಕ್ಕೆ ಮಾರ್ಗ ಹುಡುಕಿದರೆ ನಾವು ಗಳಿಸಿದ ವಿದ್ಯೆ ಸಾರ್ಥಕತೆ ಪಡೆಯುತ್ತದೆ. ಕಾಮ, ಕ್ರೋಧ, ಮದ, ಮತ್ಸರ ಅಕ್ಷಮ್ಯವಲ್ಲ. ಅದು ಪ್ರಕೃತಿ ನಿಯಮ. ಆದರೂ ಕೆಲವು ವಿಚಾರಗಳು ಇತಿಮಿತಿಯ ಚೌಕಟ್ಟಿನಲ್ಲಿದ್ದರೆ ಸುಂದರ. ಇವೆಲ್ಲ ಬದಲಾವಣೆಗಳು ಕ್ಯಾಲೆಂಡರ್ ಬದಲಾದಂತೆ ಬದಲಾದರೆ ಎಷ್ಟು ಚೆನ್ನ ಅಲ್ಲವೇ?

ಹೊಸ ವರ್ಷವನ್ನು ಸ್ವಾಗತಿಸುತ್ತ ಎಲ್ಲರ ಮನೆ ಮನಗಳಲ್ಲಿ ಬರೆದುಕೊಂಡಿರುವ ಮುನ್ನುಡಿಯ ಮುಂದಿನ ಹಾಳೆಗಳು ವರ್ಣರಂಜಿತವಾದ ಜೀವನದ ಹೊತ್ತಗೆಯಾಗಲಿ. ಪ್ರತಿಪುಟವನ್ನು ಮತ್ತೊಮ್ಮೆ ಓದುವ ಹುಮ್ಮಸ್ಸನ್ನು ಕರುಣಿಸಲಿ. ಶಾಂತಿ -ಸಹಬಾಳ್ವೆ, ನೆಮ್ಮದಿ, ಸಮೃದ್ಧಿ ಎಲ್ಲವು ಎಂದಿಗಿAತ ಒಂದು ಮುಷ್ಟಿ ಹೆಚ್ಚಾಗಿರಲಿ. ಶತಮಾನಗಳಿಂದ ನಮ್ಮನ್ನು- ಪ್ರಕೃತಿಯನ್ನು ಸಲಹಿದ ಸೂರ್ಯ, ಅಂಧಕಾರವನ್ನು ಹೊಡೆದೋಡಿಸಿದ ಚಂದ್ರ, ಮನಕ್ಕೆ ಮುದ ನೀಡಿದ ನದಿ, ಜಲಪಾತ, ಹಸಿರ ಸಿರಿಗಳು ಎಂದೂ ಮುನಿಸಿಕೊಳ್ಳದಿರಲಿ. ಅವುಗಳ ಮುನಿಸನ್ನು ಶಮನಗೊಳಿಸುವ ಕೈಂಕರ್ಯಕ್ಕೆ ನಮ್ಮಿಂದ ಆಗುವ ಕಾಣಿಕೆ ನೀಡುವಂತಾಗಲಿ. ಮನುಜ ಮತ ವಿಶ್ವಪಥ ಧ್ಯೇಯವಾಕ್ಯ ಅಕ್ಷರಗಳಾಗಿಯೇ ಉಳಿಯದೆ ಹೃದಯಾಂತರಾಳದಲ್ಲಿ ಮೊಳಗಲಿ. ಸರ್ವರಿಗೂ ಶುಭವಾಗಲಿ.

- ಶ್ವೇತಾ ರವೀಂದ್ರ, ಮಡಿಕೇರಿ.