ಸೋಮವಾರಪೇಟೆ, ಡಿ.೩೧: ಉದ್ಯೋಗ ನಿಮಿತ್ತ ಬಾಗಲ ಕೋಟೆಯಲ್ಲಿ ನೆಲೆಸಿದ್ದ ಕೊಡಗಿನ ಯುವಕನೋರ್ವ ಅಪಘಾತದಲ್ಲಿ ದುರ್ಮರಣ ಕ್ಕೀಡಾಗಿರುವ ಘಟನೆ ಸಂಭವಿಸಿದೆ.

ಜಿಲ್ಲೆಯ ಗರಗಂದೂರು ಗ್ರಾಮದ ನಿವಾಸಿ ಬಾಗಲಕೋಟೆಯಲ್ಲಿ ಸಂಭವಿಸಿದ ಲಾರಿ ಅವಘಡದಲ್ಲಿ ಕೊಡಗು ಜಿಲ್ಲೆಯ ಯುವಕನೋರ್ವ ಅಸುನೀಗಿದ್ದಾರೆ. ಸುಂಟಿಕೊಪ್ಪ ಸಮೀಪದ ಗರಗಂದೂರು ಗ್ರಾಮದ ನಿವೃತ್ತ ಬಿ.ಎಸ್.ಎನ್.ಎಲ್. ಉದ್ಯೋಗಿ ಹಾಗೂ ಶ್ರೀ ಕುರುಂಬ ಭಗವತಿ ಕೊಡಂಗನಲೂರಮ್ಮ ದೇವಸ್ಥಾನದ ಮುಖ್ಯಸ್ಥರಾದ ರಾಜಣ್ಣ ಅವರ ಪುತ್ರ ರಂಜನ್ (೩೫) ದುರ್ಮರಣಕ್ಕೀಡಾದ ಯುವಕ. ಖಾಸಗಿ ಕಂಪೆನಿಯ ಉದ್ಯೋಗಿ ಯಾಗಿದ್ದ ೩ಆರನೇ ಪುಟಕ್ಕೆ

(ಮೊದಲ ಪುಟದಿಂದ) ರಂಜನ್ ಅವರು ಕಳೆದ ಒಂದು ವಾರದ ಹಿಂದಷ್ಟೇ ಅಮೆಜಾನ್ ಕಂಪನಿಯಲ್ಲಿ ವ್ಯವಸ್ಥಾಪಕ ಹುದ್ದೆಗೆ ಬಡ್ತಿ ಹೊಂದಿದ್ದರು. ನಿನ್ನೆ ಮಧ್ಯಾಹ್ನ ಬಾಗಲಕೋಟೆಯಲ್ಲಿ ಸ್ನೇಹಿತರೊಂದಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭ, ಕಾರಿಗೆ ಲಾರಿಯೊಂದು ಡಿಕ್ಕಿಯಾಗಿದೆ. ಪರಿಣಾಮ ಕಾರಿನಲ್ಲಿದ್ದವರ ಪೈಕಿ ಓರ್ವ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಗಂಭೀರ ಸ್ವರೂಪದ ಗಾಯವಾಗಿದ್ದ ರಂಜನ್ ಮತ್ತು ಈರ್ವರು ಸ್ನೇಹಿತರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ರಂಜನ್ ಅವರು ಆಸ್ಪತ್ರೆಯಲ್ಲಿ ನಿನ್ನೆ ರಾತ್ರಿ ಕೊನೆಯುಸಿರೆಳೆದಿದ್ದಾರೆ.

ಕಳೆದ ಎಂಟು ತಿಂಗಳ ಹಿಂದಷ್ಟೇ ಅವಳಿ ಮಕ್ಕಳ ತಂದೆಯಾಗಿದ್ದ ರಂಜನ್ ಅವರು, ವಾರದ ಹಿಂದಷ್ಟೇ ಉದ್ಯೋಗದಲ್ಲಿ ಬಡ್ತಿ ಹೊಂದಿದ ಸಂಭ್ರಮದಲ್ಲಿದ್ದಾಗಲೇ, ನಿನ್ನೆ ನಡೆದ ಭೀಕರ ಅಪಘಾತದಲ್ಲಿ ಕೊನೆಯುಸಿರೆದಿರುವುದು ಕುಟುಂಬ ವರ್ಗದಲ್ಲಿ ತೀವ್ರ ಆಘಾತಕ್ಕೆ ಕಾರಣವಾಗಿದೆ.

ಕುಟುಂಬ ವರ್ಗದವರು ಬಾಗಲಕೋಟೆಗೆ ತೆರಳಿದ್ದು, ಪೊಲೀಸ್ ವರದಿಯ ನಂತರ ಮೃತ ದೇಹವನ್ನು ಗರಗಂದೂರಿಗೆ ತರುವ ವ್ಯವಸ್ಥೆ ಮಾಡಿದ್ದಾರೆ. ಕುಟುಂಬದ ಮೂಲಗಳ ಪ್ರಕಾರ ಇಂದು ರಾತ್ರಿ ಮೃತದೇಹ ಆಗಮಿಸಲಿದ್ದು, ತಾ.೧ರಂದು ಸ್ಬಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಮೃತ ರಂಜನ್ ಅವರು ಪೋಷಕರು, ಪತ್ನಿ ಸೇರಿದಂತೆ ೮ ತಿಂಗಳ ಒಂದು ಗಂಡು ಒಂದು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.