ಕಾಯಪಂಡ ಶಶಿ ಸೋಮಯ್ಯ

ಮಡಿಕೇರಿ, ಡಿ. ೩೦: ಕೊಡವರು ವಿಶಿಷ್ಟ ಜನಾಂಗವಾಗಿ ಸಾರ್ವತ್ರಿಕ ವಾಗಿ ಗುರುತಿಲ್ಪಟ್ಟಿದ್ದಾರೆ. ಈ ಜನಾಂಗದ ಇತಿಹಾಸ-ಪರಂಪರೆ ಭವಿಷ್ಯದಲ್ಲೂ ಹಿಂದಿನಷ್ಟೆ ಮಹತ್ವ ಪೂರ್ಣವಾಗಿ ಮುಂದುವರಿದು ಕೊಂಡು ಬರುವ ನಿಟ್ಟಿನಲ್ಲಿ ಜನಾಂಗದ ಎಲ್ಲಾ ಸಂಸ್ಕೃತಿ, ಆಚಾರ-ವಿಚಾರಗಳ ಪರಿಪಾಲನೆ ಜನಪದದ ಉಳಿವು, ತಮ್ಮ ಪರಂಪರೆಯನ್ನು ವಿಶಿಷ್ಟವಾದ ಹಕ್ಕು-ಬಾಧ್ಯತೆಗಳನ್ನು ಇದು ತಮ್ಮದು ಇತರರದ್ದಲ್ಲ ಎಂದು ಪ್ರತಿಪಾದಿಸ ಬೇಕಾದ ಅನಿವಾರ್ಯತೆ ಈಗಿನದ್ದಾಗಿದೆ ಎಂಬ ಅಭಿಪ್ರಾಯ ಇಂದು ವಿಶ್ವಕೊಡವ ಮೇಳದಲ್ಲಿ ವ್ಯಕ್ತಗೊಂಡಿತು. ಪ್ರಮುಖವಾಗಿ ಸಾಂಸ್ಕೃತಿಕತೆಯ ಕುರಿತಾಗಿ ಆಯೋಜಿತಗೊಂಡಿದ್ದ ವಿಚಾರ ಗೋಷ್ಠಿಯಲ್ಲಿ ಪಾಲ್ಗೊಂಡಿದ್ದವರು ಈ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಪೂಮಾಲೆ ಪತ್ರಿಕೆ ಸಂಪಾದಕ ಅಜ್ಜಿನಿಕಂಡ ಮಹೇಶ್ ನಾಚಯ್ಯ, ಬ್ರಹ್ಮಗಿರಿ ಸಂಪಾದಕ ಉಳ್ಳಿಯಡ ಎಂ. ಪೂವಯ್ಯ, ಸಾಹಿತಿ-ಉಪನ್ಯಾಸಕಿ ಡಾ|| ತೀತಿರ ರೇಖಾ ವಸಂತ್, ಮೂವೆರ ರೇಖಾ ಪ್ರಕಾಶ್, ಐತಿಚಂಡ ರಮೇಶ್ ಉತ್ತಪ್ಪ, ಕೊಡವಾಮೆರ ಕೊಂಡಾಟ ಸಂಘಟನೆ ಅಧ್ಯಕ್ಷ ಚಾಮೆರ ದಿನೇಶ್ ಬೆಳ್ಯಪ್ಪ ಅವರುಗಳನ್ನು ಒಳಗೊಂಡAತೆ ಜರುಗಿದ ಸಾಂಸ್ಕೃತಿಕ ಸಮಾವೇಶದಲ್ಲಿ ಈ ಅಭಿಪ್ರಾಯ ಕೇಳಿಬಂದಿತು.

ಮಹೇಶ್ ನಾಚಯ್ಯ ಅವರು ಮಾತನಾಡಿ, ಕೊಡವ ಭಾಷೆ, ಸಂಸ್ಕೃತಿ, ಉಡುಗೆ-ತೊಡುಗೆ, ಆಹಾರ ಪದ್ಧತಿಯ ಮಹತ್ವ ತಿಳಿಸಿ ವಿಶ್ವದ ಎಲ್ಲೇ ಇದ್ದರೂ ಇದನ್ನು ಪರಿಪಾಲಿಸಬೇಕಿದೆ ಎಂದರು. ಪ್ರಪಂಚದಲ್ಲಿ ಭಾರತೀಯ ಸಂಸ್ಕೃತಿಗೆ ಮಹತ್ವ ಇರುವಂತೆ, ಭಾರತದಲ್ಲಿ ಕೊಡವ

(ಮೊದಲ ಪುಟದಿಂದ) ಸಂಸ್ಕೃತಿ ಕೂಡ ಶ್ರೇಷ್ಠವಾದದ್ದು ಎಂದು ಅವರು ಹೇಳಿದರು.

ಮಕ್ಕಳಿಗೆ ಉತ್ತಮ ಗುಣ-ನಡತೆ, ಸಂಸ್ಕಾರದೊAದಿಗೆ ಸಂಸ್ಕೃತಿಯ ಮಹತ್ವವನ್ನು ತಿಳಿಸಬೇಕಿದೆ ಎಂದವರು ನುಡಿದರು.

ಉಳ್ಳಿಯಡ ಎಂ. ಪೂವಯ್ಯ ಅವರು ಮಾತನಾಡಿ, ಹಳೆಯ ಪದ್ಧತಿಗೆ ಹೊಸತನದಿಂದ ಧಕ್ಕೆಯಾಗದಿರುವಂತೆ ಎಚ್ಚರ ವಹಿಸಬೇಕು. ಕೊಡವತನಕ್ಕೆ ತೊಂದರೆ ಆದರೆ ಜನಾಂಗಕ್ಕೆ ಧಕ್ಕೆಯಾಗಲಿದೆ ಎಂದರು.

ಐತಿಚಂಡ ರಮೇಶ್ ಉತ್ತಪ್ಪ ಮಾತನಾಡಿ, ತಮ್ಮ ಆಚಾರ-ವಿಚಾರಗಳನ್ನು ತಮ್ಮದು ಎಂದು ಧೈರ್ಯದಿಂದ ಪ್ರತಿಪಾದಿಸಬೇಕು. ಇಲ್ಲದಿದ್ದಲ್ಲಿ ಅದು ಅನ್ಯರ ಪಾಲಾಗಲಿದೆ. ಎಲ್ಲದಕ್ಕೂ ವೈಜ್ಞಾನಿಕ ಅಧ್ಯಯನದ ಮೂಲಕ ದಾಖಲೀಕರಣವಾಗಬೇಕೆಂದರು.

ಡಾ. ರೇಖಾ ವಸಂತ್ ಅನಿಸಿಕೆ ವ್ಯಕ್ತಪಡಿಸಿ ಪ್ರಪಂಚದ ಎಲ್ಲೇ ಇದ್ದರೂ ಕೊಡವತನವನ್ನು ಪರಿಪಾಲಿಸಬೇಕಾದ ಅಗತ್ಯತೆ ಇದೆ ಎಂಬ ಕುರಿತಾಗಿ ವಿವರಿಸಿ ಸಂಸ್ಕೃತಿ ಆಚಾರ ವಿಚಾರದ ಮಹತ್ವವನ್ನು ತಿಳಿಸಿದರು.

ಮೂವೆರ ರೇಖಾ ಪ್ರಕಾಶ್ ಮಾತನಾಡಿ, ಪ್ರಸ್ತುತ ಕೊಡವ ಜನಾಂಗದ ಸಂಸ್ಕೃತಿ-ಆಚಾರ ವಿಚಾರಕ್ಕೆ ಧಕ್ಕೆ ಉಂಟಾಗುತ್ತಿದ್ದು, ಈ ಬಗ್ಗೆ ಎಲ್ಲರೂ ಒಗ್ಗೂಡಿ ಪೇಟೆಂಟ್ ಪಡೆದುಕೊಳ್ಳುವಂತಾಗಬೇಕೆAದು ಸಲಹೆಯಿತ್ತರು.

ಚಾಮೆರ ದಿನೇಶ್ ಬೆಳ್ಯಪ್ಪ ಮಾತನಾಡಿ, ಕೊಡವತನದ ಮೂಲದ ಬಗ್ಗೆ ಅರಿತುಕೊಳ್ಳುವ ಇಚ್ಚಾಶಕ್ತಿ ಬೆಳೆಸಿಕೊಳ್ಳಬೇಕಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ನಾಗಂಡ ಕವಿತಾ ನಿರೂಪಿಸಿದರು.