ಸೋಮವಾರಪೇಟೆ, ಡಿ. ೩೦: ಸಮೀಪದ ಚೌಡ್ಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ೬೫ ವಿದ್ಯಾರ್ಥಿಗಳಿಗೆ ಬೆಂಗಳೂರಿನ ಭಕ್ತಿ ಪ್ರೇಮಾಂಜಲಿ ಟ್ರಸ್ಟ್ ವತಿಯಿಂದ ಬೆಡ್‌ಶೀಟ್‌ಗಳನ್ನು ಕೊಡುಗೆಯಾಗಿ ನೀಡಲಾಯಿತು.

ಟ್ರಸ್ಟ್ನ ಪದಾಧಿಕಾರಿಗಳಾದ ಅಭಿರಾಮ್, ಸುಧಾ ಅಭಿರಾಮ್ ಅವರುಗಳು ಬೆಡ್‌ಶೀಟ್‌ಗಳನ್ನು ವಿತರಿಸಿದರು. ಈ ಸಂದರ್ಭ ಮಾತನಾಡಿದ ಅಭಿರಾಮ್ ಅವರು, ಬೆಂಗಳೂರಿನ ಶ್ರೀನಿವಾಸಮೂರ್ತಿ ಅವರು ಟ್ರಸ್ಟ್ನ ಸಂಚಾಲಕರಾಗಿದ್ದು, ಸರ್ಕಾರಿ ಶಾಲೆಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಪ್ರಯೋಜನ ಕಲ್ಪಿಸುವ ನಿಟ್ಟಿನಲ್ಲಿ ಹಲಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದ್ದಾರೆ.

ಈಗಾಗಲೇ ಕಿರಗಂದೂರು, ಐಗೂರು ಶಾಲೆಗಳಿಗೆ ಮಕ್ಕಳ ಕಲಿಕೋಪಕರಣಗಳನ್ನು ನೀಡಲಾಗಿದೆ. ಚೌಡ್ಲು ಶಾಲೆಗೆ ಮುಂದಿನ ದಿನಗಳಲ್ಲಿಯೂ ಹೆಚ್ಚಿನ ಸಹಕಾರ ನೀಡಲಾಗುವುದು ಎಂದರು.

ಈ ಸಂದರ್ಭ ಶಾಲಾ ಶಿಕ್ಷಕರುಗಳಾದ ಪದ್ಮ, ಸುಶೀಲಮ್ಮ, ಆನಂದ್, ಚೌಡ್ಲು ಗ್ರಾ.ಪಂ. ಸದಸ್ಯ ಸುರೇಶ್ ಶೆಟ್ಟಿ ಸೇರಿದಂತೆ ಇತರರು ಉಪಸ್ಥಿತರಿದ್ದರು.