ಸೋಮವಾರಪೇಟೆ, ಡಿ. ೩೦: ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಆಶ್ರಯ ದಲ್ಲಿ ರಾಷ್ಟçಕವಿ ಕುವೆಂಪು ಜನ್ಮದಿನಾಚರಣೆಯನ್ನು ಸಾಹಿತ್ಯ ಭವನದಲ್ಲಿ ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಸಾಪ ತಾಲೂಕು ಅಧ್ಯಕ್ಷ ಎಸ್.ಡಿ. ವಿಜೇತ್ ಮಾತನಾಡಿ, ಕುವೆಂಪು ಅವರು ಸಾಹಿತ್ಯ ಕೃಷಿಯಲ್ಲಿ ೨೫ ಕವನ ಸಂಕಲನಗಳು, ೮ ನಾಟಕಗಳು, ೨ ಕಾದಂಬರಿಗಳು, ೨ ಮಹಾ ಕಾವ್ಯಗಳು ಮತ್ತು ಹಲವಾರು ಪ್ರಬಂಧಗಳನ್ನು ಬರೆದಿದ್ದಾರೆ. ಕನ್ನಡ ಸಾರಸ್ವತ ಲೋಕಕ್ಕೆ ಇವರ ಕೊಡುಗೆ ಅಪಾರ ಎಂದು ಹೇಳಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಯೋಜನಾಧಿಕಾರಿ ರೋಹಿತ್ ಮಾತನಾಡಿ, ಜ್ಞಾನಪೀಠ ಪುರಸ್ಕಾರ, ಕರ್ನಾಟಕ ರತ್ನ, ಪದ್ಮವಿಭೂಷಣ, ಪದ್ಮಭೂಷಣ, ಕನ್ನಡ ಸಾಹಿತ್ಯ ಅಕಾಡೆಮಿ ಪುರಸ್ಕಾರ ಪಡೆದ ರಾಷ್ಟçಕವಿ ಕುವೆಂಪು ಅವರ ಕನ್ನಡ ಪ್ರೇಮ ಹಾಗೂ ಅವರ ಆದರ್ಶಗಳನ್ನು ನಾವೆಲ್ಲರೂ ಮೈಗೂಡಿಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಕಸಾಪ ಕಾರ್ಯದರ್ಶಿ ಎ.ಪಿ. ವೀರರಾಜು, ಕೋಶಾಧಿಕಾರಿ ಕೆ.ಪಿ. ದಿನೇಶ್ ಇದ್ದರು. ಶಿಕ್ಷಕಿ ವಾಸಂತಿ ಕಾರ್ಯಕ್ರಮ ನಿರ್ವಹಿಸಿದರು.