ವೀರಾಜಪೇಟೆ, ಡಿ. ೩೦: ವೀರಾಜಪೇಟೆ ತಾಲೂಕು ಬಿಳುಗುಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಲ್ವತ್ತೋಕ್ಲು, ಹೊಸಕೋಟೆ ಮತ್ತು ಬಿಳುಗುಂದ ಗ್ರಾಮಗಳ ಅಧಿ ದೇವತೆಯಾದ ಶ್ರೀ ಭದ್ರಕಾಳಿ ದೇವಿಯ ದೇಗುಲವು ಮೂರು ದಿನಗಳ ಕಾಲ ನಡೆದ ಪುನರ್ ಪ್ರತಿಷ್ಠೆ, ಅಷ್ಟಬಂಧ ಬ್ರಹ್ಮಕಲಶೋತ್ಸವದೊಂದಿಗೆ ಲೋಕಾರ್ಪಣೆಗೊಂಡಿತು.

ಬ್ರಹ್ಮಶ್ರೀ ಶಂಕರ್ ನಾರಾಯಣ ವೈಲಾಯ ತಂತ್ರಿಗಳ ನೇತೃತ್ವದಲ್ಲಿ ಉಡುಪಿಯ ಸಹ ಪೌರೋಹಿತ್ಯ ವರ್ಗದ ಸಮ್ಮುಖದಲ್ಲಿ ತಾ. ೨೭ ರಂದು ಸಂಜೆ ಸಾಮೂಹಿಕ ಪ್ರಾರ್ಥನೆಯೊಂದಿಗೆ ಪೂಜಾ ಕೈಂಕರ್ಯಗಳಿಗೆ ಚಾಲನೆ ದೊರಕಿತು. ತಾ. ೨೮ ರಂದು ಬೆಳಿಗ್ಗೆ ೬.೩೦ಕ್ಕೆ ಗಣಪತಿ ಹೋಮ, ಪ್ರಾಯಶ್ಚಿತ್ತ ಹೋಮ, ತತ್ವ ಹೋಮ, ಮಹಾಪೂಜೆ, ಸಂಜೆ ೬ ಗಂಟೆಗೆ ದುರ್ಗಾನಮಸ್ಕಾರ ಪೂಜೆ, ಬಿಂಬ ಶುದ್ಧಿ, ಶಯ್ಯಾಧಿವಾಸ, ಮಹಾಪೂಜೆ ಕಲಶಪ್ರತಿಷ್ಠೆ ಸಲ್ಲಿಕೆಯಾದವು. ತಾ. ೨೯ ರಂದು ಬೆಳಿಗ್ಗೆ ೫ ಗಂಟೆಗೆ ಗಣಪತಿ ಹೋಮ, ಪುಣ್ಯಾಹವಾಚನ, ಬ್ರಹ್ಮ ಕಲಶ ಪೂಜೆ, ೭.೨೨ ಗಂಟೆಯ ಶುಭ ಲಘ್ನವಾದ ಧನುರ್ ಲಘ್ನದಲ್ಲಿ ಶ್ರೀ ಭದ್ರಕಾಳಿ ದೇವಿಯ ಪ್ರತಿಷ್ಠಾಪನೆ ನಡೆಯಿತು. ಬಳಿಕ ನ್ಯಾಸ ಹೋಮ, ಕಲಶಾಭಿಷೇಕ, ದೇವಿಗೆ ಸರ್ವ ಹೂವಿನ ಅಲಂಕಾರ, ಮಹಾಮಂಗಳಾರತಿ, ಮಹಾಪೂಜೆ ಸಲ್ಲಿಸಲಾಯಿತು. ಮೂರು ದಿನಗಳ ಕಾಲ ನಡೆದ ಕಾರ್ಯಕ್ರಮದಲ್ಲಿ ಎರಡು ವೇಳೆ ಆಡಳಿತ ಮಂಡಳಿಯ ವತಿಯಿಂದ ಆಗಮಿಸಿದ ಭಕ್ತರಿಗೆ ಅನ್ನಸಂತರ್ಪಣೆ ನಡೆಸಲಾಯಿತು.

ದೇಗುಲದ ಹಿನ್ನೆಲೆ

ಶ್ರೀ ಭದ್ರಕಾಳಿ ದೇವಿಯ ದೇಗುಲಕ್ಕೆ ಸುಮಾರು ೧,೨೦೦ ವರ್ಷಗಳ ಇತಿಹಾಸವಿದೆ ಎಂದು ಊರಿನ ಹಿರಿಯರಿಂದ ತಿಳಿದುಬರುತ್ತದೆ. ಶ್ರೀ ಈಶ್ವರನಿಗೆ ಅಭಿಮುಖವಾಗಿ ನೆಲೆ ನಿಂತ ಭದ್ರಕಾಳಿಯು ದಕ್ಷಿಣಾಭಿಮುಖವಾಗಿದ್ದು ಸೌಮ್ಯಭಾವದ ಭದ್ರಕಾಳಿಯಾಗಿ ಭಕ್ತರಿಗೆ ಅಭಯಹಸ್ತ ಚಾಚುತ್ತಿದ್ದಾಳೆ. ಸಾವಿರ ವರ್ಷ ಪುರಾತನವಾದ ದೇಗುಲವು ಶಿಥಿಲವಾಗಿದ್ದು, ಪುನರ್ ನಿರ್ಮಾಣಕ್ಕೆ ಆಡಳಿತ ಮಂಡಳಿ ನಿಶ್ಚಯಿಸಿತು.

ಮಂಗಳೂರಿನ ದೇವಾಲಯ ವಿನ್ಯಾಸಗಾರರಾದ ರಮೇಶ್ ಕಾರಂತ್ ಅವರ ಮಾರ್ಗದರ್ಶನದಲ್ಲಿ ಕಾರ್ಕಳದ ಶಿಲ್ಪಕರ್ಮಿ ದಯಾನಂದ ಅವರು ವಾಸ್ತುಶಿಲ್ಪದ ಮೂಲ ಸ್ವರೂಪಕ್ಕೆ ಧಕ್ಕೆಯಾಗದಂತೆ ಸುಮಾರು ೭೦ ಲಕ್ಷ ವೆಚ್ಚದಲ್ಲಿ ದೇಗುಲದ ಪುನರ್ ನಿರ್ಮಾಣ ಕಾರ್ಯ ನಡೆಸಿದರು.

ಬೋಂದ ಮುನ್ನೂರೊಕ್ಕಡ ಶ್ರೀ ಭದ್ರಕಾಳಿ ದೇವಾಲಯದ ಆಡಳಿತ ಮಂಡಳಿಯ ಪದಾಧಿಕಾರಿಗಳು, ಸದಸ್ಯರು, ತಕ್ಕ ಮುಖ್ಯಸ್ಥರು, ಪುರೋಹಿತರು, ಬಿಳುಗುಂದ, ನಲ್ವತ್ತೋಕ್ಲು, ಹೊಸಕೋಟೆ, ಸೇರಿದಂತೆ, ವಿವಿಧ ಗ್ರಾಮಗಳಿಂದ ಆಗಮಿಸಿದ ಭಕ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು. - ಕಿಶೋರ್ ಕುಮಾರ್ ಶೆಟ್ಟಿ