*ಗೋಣಿಕೊಪ್ಪ, ಡಿ. ೩೦: ನಿವೃತ್ತ ಸೈನಿಕರ ಜಾಗ ಮಂಜೂರಾತಿಗೆ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾ ಸಾರ್ವಜನಿಕ ಹಿತರಕ್ಷಣಾ ಸಮಿತಿ ವತಿಯಿಂದ ಪೊನ್ನಂಪೇಟೆ ತಾಲೂಕು ತಹಶೀಲ್ದಾರ್ ಅವರನ್ನು ಒತ್ತಾಯಿಸಲಾಯಿತು.

ಪೊನ್ನಂಪೇಟೆ ಆಡಳಿತ ಕಚೇರಿಯಲ್ಲಿ ತಹಶೀಲ್ದಾರ್ ಪ್ರಶಾಂತ್ ಅವರಿಗೆ ಹಿತರಕ್ಷಣಾ ಸಮಿತಿ ಅಧ್ಯಕ್ಷ ಎ.ಎಸ್. ಕಟ್ಟಿ ಮಂದಯ್ಯ ಅವರ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.

ಕಳೆದ ೧೦ ವರ್ಷಗಳಿಂದ ನಿವೃತ್ತ ಸೈನಿಕ ಕಾಳಿಮಾಡ ಬಿ. ಕುಶಾಲಪ್ಪ ಅವರು, ಬೀರುಗ ಗ್ರಾಮದಲ್ಲಿರುವ ೧/೧ ಸರ್ವೆ ನಂಬರಿನ ೩ ಎಕರೆ ೩೦ ಸೆಂಟ್ ಜಾಗದ ಕಾಫಿ ತೋಟವನ್ನು ತಮ್ಮ ಹೆಸರಿಗೆ ನೋಂದಾಯಿಸುವAತೆ ಅರ್ಜಿ ಸಲ್ಲಿಸಿದರೂ, ಅರ್ಜಿ ವಿಲೇವಾರಿಗೊಂಡಿಲ್ಲ. ಇಲಾಖೆಯ ಸಿಬ್ಬಂದಿಗಳು ಈ ವಿಚಾರವಾಗಿ ಸತಾಯಿಸುತ್ತಿದ್ದಾರೆ ಎಂದು ಆರೋಪಿಸಿದ ಸಮಿತಿ, ಜಾಗವನ್ನು ತಕ್ಷಣ ಮಂಜೂರು ಮಾಡಿಸಿ ನಿವೃತ್ತ ಸೈನಿಕರಿಗೆ ನ್ಯಾಯ ಒದಗಿಸಿಕೊಡಬೇಕೆಂದು, ಕಚೇರಿಯಲ್ಲಿರುವ ಕಡತವನ್ನು ವಿಲೇವಾರಿ ಮಾಡಿಕೊಡಬೇಕೆಂದು ಮನವಿ ಸಲ್ಲಿಸಿತು.

ಈ ವಿಚಾರಕ್ಕೆ ಸಂಬAಧಿಸಿದAತೆ, ವೀರಾಜಪೇಟೆ ತಹಶೀಲ್ದಾರ್ ಕಚೇರಿಯಿಂದ ಸರ್ವೆ ಕಾರ್ಯವು ನಡೆದಿದೆ. ಕಾಫಿ ಬೋರ್ಡಿನವರು ಕೂಡ ತೋಟವನ್ನು ಪರಿಶೀಲನೆ ನಡೆಸಿದ್ದು, ಈ ಹಿಂದೆ ಕರ್ತವ್ಯದಲ್ಲಿದ್ದ ತಹಶೀಲ್ದಾರ್ ಗಳು ಸಹ ಸ್ಥಳ ಪರಿಶೀಲಿಸಿದ್ದಾರೆ. ಜಾಗದ ಬಾಬ್ತು ಅನ್ನು ಕಟ್ಟಲಾಗಿದೆ. ಆದರೂ, ಅವರ ಹೆಸರಿಗೆ ಜಾಗ ಮಂಜೂರು ಮಾಡದೇ ಇರುವುದು ತಾಲೂಕು ಆಡಳಿತಕ್ಕೆ ಮಾಜಿ ಸೈನಿಕರ ಮೇಲಿರುವ ಗೌರವವನ್ನು ಪ್ರಶ್ನಿಸುವಂತಾಗಿದೆ ಎಂದು ಅಧ್ಯಕ್ಷ ಅಜ್ಜಮಾಡ ಕಟ್ಟಿ ಮಂದಯ್ಯ ವಿಷಾದ ವ್ಯಕ್ತಪಡಿಸಿದರು.

ಸಮಿತಿ ಮನವಿಯನ್ನು ಸ್ವೀಕರಿಸಿದ ತಹಶೀಲ್ದಾರ್ ಪ್ರಶಾಂತ್ ಅವರು ಒಂದು ವಾರದೊಳಗೆ ಅರ್ಜಿಯ ಸಾಧಕ ಬಾದಕಗಳ ಬಗ್ಗೆ ಅಂತಿಮ ನಿರ್ಧಾರವನ್ನು ತಿಳಿಸಲಾಗುವುದು ಎಂದು ಭರವಸೆ ನೀಡಿದರು.

ಈ ಸಂದರ್ಭ ತಾಲೂಕು ಆಡಳಿತ ಕಚೇರಿ ಸುತ್ತ ಬೆಳೆದು ನಿಂತಿರುವ ಗಿಡಘಂಟಿಗಳನ್ನು ತೆರವುಗೊಳಿಸಿ ಶುಚಿತ್ವದ ಕಡೆಗೂ ಗಮನ ಹರಿಸಬೇಕು ಎಂದು ಹಿತರಕ್ಷಣಾ ಸಮಿತಿ ಪದಾಧಿಕಾರಿಗಳು ಸಲಹೆ ನೀಡಿದರು. ಕಾರ್ಯಾಧ್ಯಕ್ಷ ಬಿ.ಎಸ್. ಕಾರ್ಯಪ್ಪ, ಕಾರ್ಯದರ್ಶಿ ಕೋಳೆರ ಸನ್ನು ಕಾವೇರಪ್ಪ, ಅರಮಣಮಾಡ ಸತೀಶ್ ದೇವಯ್ಯ, ಸಹಕಾರ್ಯದರ್ಶಿ ಕೆ.ಕೆ. ಬೆಳ್ಯಪ್ಪ, ಸದಸ್ಯ ಕಾಳಿಮಾಡ ಮುತ್ತಣ್ಣ, ಸಲಹೆಗಾರ ಚೊಟ್ಟೆಯಂಡಮಾಡ ವಿಶ್ವನಾಥ್ ಮತ್ತು ಶಿರಸ್ಥೆದಾರರುಗಳಾದ ಟ್ರಿಷ, ರವಿಕುಮಾರ್, ಕೇಸ್ ವರ್ಕರ್ ಮೋಹನ್ ಇದ್ದರು.