ಸೋಮವಾರಪೇಟೆ, ಡಿ. ೩೦: ಇಲ್ಲಿನ ಕಕ್ಕೆಹೊಳೆ ಬಳಿಯಿರುವ ಶ್ರೀ ಮುತ್ತಪ್ಪ ಸ್ವಾಮಿ ಮತ್ತು ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ಮಂಡಲ ಪೂಜೋತ್ಸವ ಶ್ರದ್ಧಾಭಕ್ತಿಯಿಂದ ಜರುಗಿತು. ಬೆಳಿಗ್ಗೆ ೫ ಗಂಟೆಗೆ ಕ್ಷೇತ್ರದ ಪ್ರಧಾನ ಅರ್ಚಕ ಮಣಿಕಂಠನ್ ನಂಬೂದರಿ ಅವರ ನೇತೃತ್ವದಲ್ಲಿ ಅಯ್ಯಪ್ಪಸ್ವಾಮಿ ಸನ್ನಿಧಿಯಲ್ಲಿ ಮಹಾಗಣಪತಿ ಹೋಮದೊಂದಿಗೆ ಪೂಜೋತ್ಸವ ಆರಂಭಗೊAಡಿತು. ವಿಶೇಷ ಪೂಜೆ ನಂತರ ಹಾಲಿನ ಅಭಿಷೇಕ, ಶಾಸ್ತಾ ಹೋಮ, ಪಂಚಾಮೃತಾಭಿಷೇಕ, ಬ್ರಹ್ಮ ಕಲಶಾಭಿಷೇಕ, ಪಂಚಾಕ್ಷರ ಅಷ್ಟಾಕ್ಷರ ಹೋಮ, ತುಪ್ಪದ ಅಭಿಷೇಕ, ನಂತರ ಕಲಶ ಅಭಿಷೇಕ ನಡೆಯಿತು. ಈ ಸಂಧರ್ಭ ಕ್ಷೇತ್ರದ ಮೇಲ್ಬಾಗದಲ್ಲಿ ಗರುಡ ೫ ಸುತ್ತುಸುತ್ತುವ ಮೂಲಕ ಭಕ್ತಾದಿಗಳಿಗೆ ದರ್ಶನ ನೀಡಿದ್ದು ವಿಶೇಷವಾಗಿತ್ತು. ನಂತರ ಶ್ರೀ ದೇವರಿಗೆ ಭಸ್ಮಾಭಿಷೇಕ, ಮಹಾಮಂಗಳಾರತಿ ನಡೆಯಿತು. ಸಂಜೆ ಅಯ್ಯಪ್ಪ ಭಕ್ತರು ಮತ್ತು ಕ್ಷೇತ್ರದ ಭಕ್ತರ ಭಜನೆಯೊಂದಿಗೆ ಪಡಿಪೂಜೆ ನಡೆಯಿತು. ಪುಷ್ಪಾಭಿಷೇಕದ ತರುವಾಯ ಅಯ್ಯಪ್ಪ ವ್ರತಧಾರಿಗಳು ದೀಪವನ್ನು ಹೊತ್ತು ಪೂಜೆ ಸಲ್ಲಿಸಿದರು. ಭಕ್ತರಿಗೆ ಅನ್ನದಾನ ಏಪಡಿಸಲಾಗಿತ್ತು. ನಂತರ ಹರಿವರಾಸನಂ ನೊಂದಿಗೆ ಮಂಡಲ ಪೂಜೆ ವಿದ್ಯುಕ್ತವಾಗಿ ಕೊನೆಗೊಂಡಿತು. ಅರ್ಚಕರಾದ ಜಗದೀಶ್ ಉಡುಪ, ಚಂದ್ರಶೇಖರ್ ಹೊಳ್ಳ, ವೆಂಕಟೇಶ್ ಹೊಳ್ಳ, ಶ್ರೀರಂಗಚಾರಿ, ಪ್ರಸಾದ್ ಭಟ್, ಚಂದ್ರಹಾಸ್ ಭಟ್ ಅವರುಗಳು ಪೂಜಾ ಕಾರ್ಯದಲ್ಲಿ ಸಹಕರಿಸಿದರು. ಕ್ಷೇತ್ರದ ಅಧ್ಯಕ್ಷ ವಿನೋದ್ ಮತ್ತು ಆಡಳಿತ ಮಂಡಳಿ ಸದಸ್ಯರುಗಳ ಸಹಕಾರದಲ್ಲಿ ಮಂಡಲ ಪೂಜೋತ್ಸವ ಯಶಸ್ವಿಯಾಗಿ ಜರುಗಿತು.