ಜಗತ್ತಿನ ಯಾವುದೇ ರಾಷ್ಟçದಲ್ಲಿಯೂ ಒಂದು ಸ್ವಚ್ಛ ಸಮಾಜದ ನಿರ್ಮಾಣಕ್ಕೆ ಸಾಹಿತ್ಯದ ಕೊಡುಗೆ ಅತ್ಯಂತ ಗಮನಾರ್ಹವಾದುದು. ಮಾನವಕುಲದ ನೆಮ್ಮದಿಯ ಬದುಕಿಗೆ ಕಂಟಕವಾಗಿ ಕಾಡಿದ ರಾಜಕೀಯ, ಆರ್ಥಿಕ, ಸಾಮಾಜಿಕ ಮತ್ತು ಧಾರ್ಮಿಕ ವಿಚಾರಗಳ ವಿರುದ್ಧ ಸಾಹಿತ್ಯದ ಮೂಲಕ ಬದಲಾವಣೆಗೆ ಪ್ರಯತ್ನಿಸಿದ ಸಾಧಕರು ಇಂದಿನ ಆದರ್ಶ ಸಮಾಜದ ಪ್ರತಿಪಾದಕರು. ಸಮಾಜದ ಅಂಥ ಲೋಪದೋಷಗಳ ಸಮಗ್ರ ಬದಲಾವಣೆಗೆ ಶ್ರಮಿಸಿದ ಈ ಶತಮಾನದ ಮಹಾನ್ ಪ್ರತಿಭೆ ಬುದ್ಧ, ಬಸವಣ್ಣ, ಗಾಂಧಿ, ಅಂಬೇಡ್ಕರ್, ಸ್ವಾಮಿ ವಿವೇಕಾನಂದರAಥ ಮಹಾನುಭಾವರ ಸಾಲಿನಲ್ಲಿ ನಮ್ಮ ನಾಡಿನ ರಸಋಷಿ ಯುಗದ ಕವಿ ಜಗದ ಕವಿ ಎಂದೇ ದ.ರಾ. ಬೇಂದ್ರೆಯವರಿAದ ಪ್ರಶಂಸೆಗೆ ಭಾಜನರಾದವರು ಕುವೆಂಪುರವರು. ಕುವೆಂಪುರವರ ವಿಚಾರಧಾರೆಗಳು ಸಾರ್ವಕಾಲಿಕವಾದ ಮೌಲ್ಯಗಳನ್ನು ಪ್ರತಿಪಾದಿಸಿದಂತಹವು. ಸಮ ಸಮಾಜದ ಅಸ್ತಿತ್ವಕ್ಕೆ ಧಕ್ಕೆ ತರುವಂಥ ಎಲ್ಲಾ ವ್ಯವಸ್ಥೆಗಳ ವಿರುದ್ಧ ಸಮರ ಸಾರಿದ ಕುವೆಂಪು ಒಂದು ಆದರ್ಶ ಸಮಾಜದ ಪರಿಕಲ್ಪನೆಗೆ ಬಳಸಿಕೊಂಡದ್ದು ಸಾಹಿತ್ಯದ ಬೇರೆ ಬೇರೆ ಆಯಾಮಗಳನ್ನು. ಕಥೆ, ಕವನ, ಕಾದಂಬರಿ, ನಾಟಕ, ಮಹಾಕಾವ್ಯಗಳಲ್ಲಿ ಅವರು ಚಿತ್ರಿಸಿರುವ ಪ್ರತಿಯೊಂದು ಪಾತ್ರದಲ್ಲಿಯೂ ಅವರೊಳಗೆ ಅಡಗಿದ್ದ ಮಾನವತ್ವವನ್ನು ಕಾಣಬಹುದು. ಓ ನನ್ನ ಚೇತನಾ ಆಗು ನೀ ಅನಿಕೇತನ...ಎಂಬ ಸಾಲುಗಳ ಮೂಲಕ ವಿಶ್ವ ಮಾನವ ಪರಿಕಲ್ಪನೆಗೆ ಜೀವ ತುಂಬಿದ ಕುವೆಂಪುರವರು ಪ್ರಸ್ತುತ ಜಾಗತೀಕರಣದ ಯುಗದಲ್ಲಿರುವ ನಮಗೆ, ನಮ್ಮ ನಡೆ ನುಡಿಯನ್ನು ನಿರ್ಧಾರ ಮಾಡುವ ಮಾರ್ಗಸೂಚಿಯನ್ನು ಅವರ ಸಾಹಿತ್ಯದಲ್ಲಿ ಕಾಣಲು ಸಾಧ್ಯ. ಮನುಷ್ಯ ತನ್ನನ್ನು ತಾನು ಅನಗತ್ಯವಾದ ದೋಷಪೂರಿತ ಸಂಪ್ರದಾಯ, ಆಚರಣೆ, ಕಟ್ಟಳೆಗಳ ಅನುಕರಣೆಯಿಂದ ಮೌಢ್ಯತೆಯಲ್ಲಿ ಬಂಧಿಸಲ್ಪಡುತ್ತಿದ್ದಾನೆ. ವಿಚಾರ ಮಾಡುವ, ಪ್ರಶ್ನಿಸುವ, ನೈತಿಕ ಧೈರ್ಯವನ್ನು ಪಡೆಯದೆ ವೈಚಾರಿಕತೆಯನ್ನು ಮೈಗೂಡಿಸಿಕೊಳ್ಳದ ಒಂದು ರೀತಿಯಲ್ಲಿ ಭ್ರಮೆಯಲ್ಲಿಯೇ ಬದುಕು ಮುಗಿಸುತ್ತಿರುವುದು ಸುಶಿಕ್ಷಿತರೆನಿಸಿಕೊಂಡ ನಾಗರಿಕ ಸಮಾಜದವರ ಅತೀ ದೊಡ್ಡ ದುರಂತ. ಕುವೆಂಪುರವರು ದೇವರು, ಧರ್ಮ, ಆಚಾರ, ವಿಚಾರ, ಸಂಸ್ಕೃತಿ, ಸಂಪ್ರದಾಯಗಳನ್ನು ಎಂದಿಗೂ ವಿರೋಧಿಸಲಿಲ್ಲ. ಆದರೆ ಯಾವುದೋ ಕಾಲಘಟ್ಟದಲ್ಲಿ ಅಂದಿನ ಸಮಾಜದ ಬದುಕಿನ ರೀತಿ ನೀತಿಗಳಿಗೆ ಪ್ರತಿಪಾದಿಸಲ್ಪಟ್ಟ ವಿಚಾರಗಳನ್ನು ಇಂದಿಗೂ ಅವು ಪ್ರಸ್ತುತವೇ? ಸಾಮಾನ್ಯ ಲೋಕಜ್ಞಾನವಿಲ್ಲದೆಯೇ ಅಂಧಾನುಕರಣೆ ಮಾಡುವುದು ಎಷ್ಟು ಸಮಂಜಸ ಎಂದು ಸಕಾರಣವಾಗಿ ಪ್ರಶ್ನಿಸಿದರು. ಹುಟ್ಟು ನಿಸರ್ಗ ಪ್ರೇಮಿಯಾಗಿ ಬೆಳೆದ ಕುವೆಂಪುರವರು ದೇವರನ್ನು ಕಂಡದ್ದು ಯಾವುದೇ ಗುಡಿ, ಗೋಪುರ, ಚರ್ಚ್ಗಳಲ್ಲಿ ಅಲ್ಲ, ನಿಸರ್ಗದಲ್ಲಿ. "ಆನಂದಮಯ ಈ ಜಗ ಹೃದಯಾ" ಈ ಪದ್ಯದ ಪ್ರತಿ ಸಾಲು ಕೂಡ ಅವರ ಆಧ್ಯಾತ್ಮಿಕ ದೃಷ್ಟಿಗೊಂದು ಸಾಕ್ಷಿಯಾಗಿ ಉಳಿದಿದೆ. ಉಸಿರು, ಅನ್ನ, ಬದುಕನ್ನು ನೀಡುತ್ತಿರುವ ನಿಸರ್ಗಕ್ಕೆ ನಿಷ್ಠೆಯನ್ನು ತೋರಿಸದೆ ನಾವು ಇಂದು ಡಾಂಭಿಕ ಭಕ್ತಿಯನ್ನು ಪ್ರದರ್ಶನ ಮಾಡುತ್ತಿರುವುದು ಗುಡಿಯೊಳಗಿರುವ ದೇವರಿಗೆ. ವಿಜ್ಞಾನ, ತಂತ್ರಜ್ಞಾನದ ಯುಗದಲ್ಲಿರುವ ನಾವು ನಮ್ಮೊಳಗೇ ಕಟ್ಟಿಕೊಂಡಿರುವ ಮೌಢ್ಯತೆಗೆ ಶರಣಾಗಿಬಿಟ್ಟಿದ್ದೇವೆ!
ಕುವೆಂಪುರವರ ವೈಚಾರಿಕ ನಿಲುವುಗಳು ೧೨ನೇ ಶತಮಾನದ ಕ್ರಾಂತಿಕಾರಿ ಬಸವಣ್ಣನವರ ವಿಚಾರಧಾರೆಗಳಿಂದ ಪ್ರಭಾವಿಸಲ್ಪಟ್ಟಿರುವುದನ್ನು ಅವರ ಕವನಗಳಲ್ಲಿ ಗುರುತಿಸಲು ಸಾಧ್ಯ. ಮನುಷ್ಯ ಮನುಷ್ಯರ ಮಧ್ಯೆ ಜಾತಿ, ವರ್ಣ, ಧರ್ಮ, ಲಿಂಗಗಳ ತಾರತಮ್ಯದ ಮೂಲಕ ನೈಜ ಬದುಕಿನ ಸಂತೋಷವನ್ನು ಕಿತ್ತುಕೊಂಡ ವ್ಯವಸ್ಥೆ, ವರ್ಗದ ವಿರುದ್ಧ ಅವರ ಹೋರಾಟ ಇಂದಿಗೂ ಕುವೆಂಪುರವರನ್ನು ಕವಿಗಳ ಪೈಕಿಯೇ ವಿಭಿನ್ನ ಸಾಲಿನಲ್ಲಿ ತಂದು ನಿಲ್ಲಿಸಿದೆ. ಅವರ ವಿಚಾರಧಾರೆಗಳೆಲ್ಲವೂ ಕೇವಲ ಬರಹಗಳಿಗೆ, ಸಾಹಿತ್ಯವಲಯಕ್ಕೆ, ಉಪನ್ಯಾಸಕ್ಕೆ, ಭಾಷಣಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. ನುಡಿದಂತೆ ನಡೆದ ಕಟ್ಟಾ ವಾಸ್ತವವಾದಿ ಕುವೆಂಪುರವರು. ತಾವು ಪ್ರತಿಪಾದಿಸಿದ ಮಂತ್ರ ಮಾಂಗಲ್ಯ ವಿವಾಹ ಸಂಹಿತೆಗೆ ತನ್ನ ಮಕ್ಕಳ ಮದುವೆಯನ್ನೇ ಸಾಕ್ಷೀಕರಿಸಿದ ಸಾಕಾರ ರೂಪಿ ಅವರು. ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ ಆಡಳಿತದಲ್ಲಿಯೂ ತಾನು ಬಹುವಾಗಿ ಪ್ರೀತಿಸಿ, ಗೌರವಿಸುತ್ತಿದ್ದ ಶಿಕ್ಷಕ ವೃತ್ತಿಯಲ್ಲಿ ಆತ್ಮ ಗೌರವಕ್ಕೆ ಚ್ಯುತಿ ಬಾರದಂತೆ ತನ್ನ ನೇರ, ದಿಟ್ಟ ನಡವಳಿಕೆಯ ಮೂಲಕ ಗುರು ಪರಂಪರೆಗೆ ಒಂದು ವಿಶೇಷ ಗೌರವವನ್ನು ಅವರು ತಂದು ಕೊಟ್ಟವರು.
ಕುವೆಂಪು ಬದುಕಿನ ಒಂದೊAದು ಘಟನೆಗಳು, ಸಂದರ್ಭ-ಸನ್ನಿವೇಶಗಳಲ್ಲಿ ಅವರ ನಡೆ ನಿಜಕ್ಕೂ ನಮಗೊಂದು ಅದ್ಭುತ ಮಾರ್ಗಸೂಚಿಯಾಗಲಿದೆ. ಜ್ಞಾನ ಭಂಡಾರ ಎನ್ನುವುದು ಬತ್ತದ ಚೀಲವಾಗದೆ ಭತ್ತ ಬೆಳೆಯುವ ಗದ್ದೆಯಾಗಲಿ ಎನ್ನುವ ನುಡಿಗಳು ಶಿಕ್ಷಣದ ಸದುಪಯೋಗವನ್ನು ಪ್ರಸ್ತುತ ಪಡಿಸುತ್ತದೆ. ನಮ್ಮೊಳಗಿರುವ ಯಾವುದೇ ಪ್ರತಿಭೆ, ಕೌಶಲಗಳು ಸಮಾಜದ ಒಳಿತಿಗೆ ಬಳಕೆಯಾಗದಿದ್ದಲ್ಲಿ ಮತ್ತೇನು ಲಾಭ? ಇದು ಇಂದಿನ ಯುವ ಸಮುದಾಯದ ಮುಂದಿರುವ ಸವಾಲು. ಕುವೆಂಪುರವರನ್ನು ಒಬ್ಬ ಕವಿಯಾಗಿ ಮಾತ್ರವಲ್ಲ, ಒಂದು ಪರಿಪೂರ್ಣ ವ್ಯಕ್ತಿತ್ವದಿಂದಲೇ ಇಡೀ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡ ಶ್ರೇಷ್ಠ ಮಾನವತಾವಾದಿಯಾಗಿ ಅವರ ಜನ್ಮ ದಿನಾಚರಣೆಯನ್ನು ಆಚರಿಸುತ್ತಿರುವ ಈ ಸಂದರ್ಭದಲ್ಲಿ ಅವರು ಕಟ್ಟಿಕೊಟ್ಟ ಬದುಕಿನ ಆದರ್ಶದ ಒಂದAಶವನ್ನಾದರೂ ಪಾಲಿಸಿ ಧನ್ಯತೆಯನ್ನು ಅನುಭವಿಸೋಣ
- ಪ್ರತಿಮಾ ಹರೀಶ್ ರೈ, ಉಪನ್ಯಾಸಕರು, ಸೈಂಟ್ ಆನ್ಸ್ ಪದವಿ ಕಾಲೇಜು, ವೀರಾಜಪೇಟೆ.