ಸುಂಟಿಕೊಪ್ಪ, ಡಿ. ೨೯: ಕೊಡಗರಹಳ್ಳಿ ಶಾಂತಿನಿಕೇತನ ನರ್ಸರಿ, ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲೆಯ ವಾರ್ಷಿಕೋತ್ಸವ ಸಮಾರಂಭ, ಪ್ರತಿಭಾ ಪುರಸ್ಕಾರ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ನಡೆಯಿತು.
ಸಮಾರಂಭದಲ್ಲಿ ಶಾಲೆಯ ಭಾರತೀಯ ಎಜುಕೇಷನಲ್ ಸರ್ವಿಸ್ ಟ್ರಸ್ಟ್ ಕಾರ್ಯದರ್ಶಿ ರಂಜಿತ್ ಕಾರ್ಯಪ್ಪ ಮಾತನಾಡಿ, ಶಾಲೆ ನಡೆಸುವುದು ಬಹಳ ಕಷ್ಟ. ಆದರೆ ಆಡಳಿತ ಮಂಡಳಿಯ ಸದಸ್ಯರು, ಪೋಷಕರು, ಶಿಕ್ಷಕ ವೃಂದ, ಸಿಬ್ಬಂದಿ ವರ್ಗ ಸಮರ್ಪಣಾ ಮನೋಭಾವದಿಂದ ಶೇ. ೧೦೦ ಫಲಿತಾಂಶವನ್ನು ಪಡೆಯುತ್ತಿದೆ. ಶಾಲೆಯಲ್ಲಿ ೧೨೧೫ ವಿದ್ಯಾರ್ಥಿಗಳಿದ್ದು, ಗ್ರಾಮೀಣ ಪ್ರದೇಶದಲ್ಲಿ ಕಳೆದ ೪೩ ವರ್ಷಗಳಿಂದ ತನ್ನದೆಯಾದ ಛಾಪು ಮೂಡಿಸಿದೆ ಎಂದರು.
ಶಾಲಾ ಮುಖ್ಯೋಪಾಧ್ಯಾಯಿನಿ ಮೇರಿ ಫಾತಿಮಾ ಶಾಲಾ ವರದಿಯನ್ನು ಮಂಡಿಸಿ ಕಳೆದ ೧೬ ವರ್ಷಗಳಿಂದ ಶೇ. ೧೦೦ ಫಲಿತಾಂಶ ಪಡೆಯಲು ಸಹಾಯ ಮಾಡಿದ, ಅವಿರತವಾಗಿ ಶ್ರಮಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಮಕ್ಕಳು ಶಾಲೆಯಲ್ಲಿ ಶಿಕ್ಷಕರ ಅಧೀನದಲ್ಲಿದ್ದು, ಉಳಿದಂತೆ ಪೋಷಕರ ಜವಾಬ್ದಾರಿಯಲ್ಲಿದ್ದು, ಮೊಬೈಲ್ಗೀಳಿನಿಂದ ವಿದ್ಯಾಭ್ಯಾಸ ಹಾಳಾಗದಂತೆ ನೋಡಿಕೊಳ್ಳಬೇಕೆಂದು ಕಿವಿಮಾತು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಶಾಲಾಡಳಿತ ಮಂಡಳಿ ಅಧ್ಯಕ್ಷ ಸಿ.ಎ. ಉತ್ತಯ್ಯ ಮಾತನಾಡಿ, ನಮ್ಮ ಶಾಲೆಯಲ್ಲಿ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಪ್ರಗತಿ ಸಾಧಿಸಿದಲ್ಲದೆ ಪಠ್ಯೇತರ ಚಟುವಟಿಕೆಗಳಲ್ಲೂ ಸಹ ಸಾಕಷ್ಟು ಸಾಧನೆ ಮಾಡಿರುವುದು ಹೆಮ್ಮೆಯ ವಿಚಾರವೆಂದು ಹೇಳಿದರು.
ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪಾರಿತೋಷಕ ನೀಡಿ ಗೌರವಿಸಿದರು. ಎಜುಕೇಷನ್ ಸೊಸೈಟಿ ಟ್ರಸ್ಟಿಗಳಾದ ಟಾಟು ಚಂಗಪ್ಪ, ಅನಿಲ್ ಪೊನ್ನಪ್ಪ, ಅಜಿತ್ ಅಪ್ಪಚ್ಚು, ಬಿ.ಡಿ. ಸುಭಾಷ್ ಇದ್ದರು.
ಶಾಲಾ ವಿದ್ಯಾರ್ಥಿನಿಯರಾದ ನಯನ ತಂಡದವರು ಪ್ರಾರ್ಥಿಸಿ, ವಿನೀಶ ಮತ್ತು ಅನುಷ ನಿರೂಪಿಸಿ, ನಿಗ್ಮಾ ಸ್ವಾಗತಿಸಿ, ಸಭೆಗೆ ದಕ್ಷಿತ ಮತ್ತು ಸಾನಿಕ ವಂದಿಸಿದರು. ಶಾಲಾ ಮಕ್ಕಳ ೩೦ ತಂಡಗಳಿAದ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರೆದಿದ್ದ ಪೋಷಕರ, ಸಾರ್ವಜನಿಕರ ಜನಮನ ಸೂರೆಗೊಳಿಸಿತು.