ಸೋಮವಾರಪೇಟೆ, ಡಿ. ೨೮ : ಇಲ್ಲಿನ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಶಿಥಿಲಾವಸ್ಥೆಯಲ್ಲಿರುವ ಅಂಗಡಿ ಮಳಿಗೆಗಳ ಹರಾಜು ಮಾಡಲು ಹೊರಟಿರುವ ಬಗ್ಗೆ ಪಟ್ಟಣ ಪಂಚಾಯ್ತಿ ಸದಸ್ಯರುಗಳು ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಿನ್ನೆ ಪಂಚಾಯಿತಿ ಸಭೆಯಲ್ಲಿ ಸಿ.ಕೆ.ಸುಬ್ಬಯ್ಯ ರಸ್ತೆಯ ವಾಣಿಜ್ಯ ಮಳಿಗೆಗಳು ಶಿಥಿಲಾವಸ್ಥೆ ತಲುಪಿದ್ದು ದುರಸ್ತಿಗೊಳಿಸಿ ನಂತರ ಹರಾಜು ನಡೆಸುವಂತೆ ತಿಳಿಸಿದ್ದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದ ಸದಸ್ಯರು, ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳನ್ನು ಪರಿಶೀಲಿಸಿದರು.

ಕಟ್ಟಡದ ಗೋಡೆ, ಮೇಲ್ಛಾವಣಿ, ಉದುರಿ ಬೀಳುತಿದ್ದು, ಕಬ್ಬಿಣ ಹೊರಬಂದಿವೆ. ಇಲ್ಲಿನ ವರ್ತಕರು ಜೀವ ಕೈಯಲ್ಲಿ ಹಿಡಿದು ವ್ಯಾಪಾರ ಮಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಇದನ್ನು ದುರಸ್ತಿಗೊಳಿಸದೇ ಅಧಿಕಾರಿಗಳು ಹರಾಜು ಮಾಡಲು ಮುಂದಾಗಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪಟ್ಟಣ ಪಂಚಾಯಿತಿ ಸದಸ್ಯ ಸಂಜೀವ ಮಾತನಾಡಿ, ಪಂಚಾಯ್ತಿಯ ಅತ್ಯಂತ ಹಳೆಯ ಕಟ್ಟಡವಾಗಿರುವ ಹಿನ್ನೆಲೆ ತುರ್ತಾಗಿ ದುರಸ್ತಿ ಆಗಬೇಕಾಗಿದೆ. ಈ ಮಳಿಗೆಯನ್ನು ಅಧಿಕಾರಿಗಳು ಪರಿಶಿಷ್ಟ ಜಾತಿಗೆ ಮೀಸಲಿರಿಸಿದ್ದು, ಇಂತಹ ಪರಿಸ್ಥಿತಿಯಲ್ಲಿರುವ ಮಳಿಗೆಯನ್ನು ನೀಡುವುದು ಸರಿಯೇ? ಎಂದು ಪ್ರಶ್ನಿಸಿದರು. ಹರಾಜು ಪ್ರಕ್ರಿಯೆ ನಡೆಸಲು ನಮ್ಮ ವಿರೋಧವಿಲ್ಲ, ಆದರೆ ಮೊದಲು ಅವ್ಯವಸ್ಥೆ ಸರಿಪಡಿಸಬೇಕಿದೆ. ಮೀಸಲಾತಿ ತಾರತಮ್ಯ ನಿವಾರಿಸಿ ನಂತರ ಹರಾಜು ನಡೆಸುವಂತೆ ಹೇಳಿದ್ದೇವೆ. ಆದರೆ ಅಧಿಕಾರಿಗಳು ಕ್ರಮ ವಹಿಸುತ್ತಿಲ್ಲ ಎಂದು ಆರೋಪಿಸಿದರು. ಈ ಸಂದರ್ಭ ಪಟ್ಟಣ ಪಂಚಾಯ್ತಿ ಸದಸ್ಯರುಗಳಾದ ಪಿ.ಕೆ.ಚಂದ್ರು, ಶುಭಕರ, ಜೀವನ್, ಮೃತ್ಯುಂಜಯ ಹಾಗೂ ಸ್ಥಳೀಯ ವರ್ತಕರು ಹಾಜರಿದ್ದರು.