ವೀರಾಜಪೇಟೆ, ಡಿ. ೨೯: ಇಲ್ಲಿನ ಪ್ರಗತಿ ಆಂಗ್ಲ ಮಾದ್ಯಮ ಶಾಲೆಯ ವಾರ್ಷಿಕೋತ್ಸವ ಸಮಾರಂಭವು ಶಾಲೆಯ ಆವರಣದಲ್ಲಿ ನಡೆಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪಕ್ಷಿ ತಜ್ಞ ಡಾ. ನರಸಿಂಹನ್ ಮಾತನಾಡಿ, ಮಕ್ಕಳು ವಿದ್ಯಾರ್ಥಿ ಜೀವನದಲ್ಲಿ ಪಠ್ಯಗಳಲ್ಲಿ ಬರುವ ವಿಷಯಗಳಿಗೆ ಮಾತ್ರ ಮರುಳಾಗದೆ ಪ್ರಾಪಂಚಿಕ, ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗಿಗಳಾಗಬೇಕು. ಪೋಷಕರು ತಮ್ಮ ಮಕ್ಕಳಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಪ್ರೋತ್ಸಾಹ ನೀಡಬೇಕು. ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸುವ ಮೂಲಕ ಸಮಾಜದ ಮುಖ್ಯವಾಹಿನಿಗೆ ತರುವ ಪ್ರಯತ್ನವಾದಲ್ಲಿ ಸುಭದ್ರ ಭಾರತ ನಿರ್ಮಾಣ ಸಾಧ್ಯ ಎಂದು ಅವರು ನುಡಿದರು.
ಕರ್ನಾಟಕ ರಾಜ್ಯ ಮೀನುಗಾರಿಕಾ ಇಲಾಖೆಯ ಉಪ ನಿರ್ದೇಶಕರು ಬೆಂಗಳೂರು ಮತ್ತು ಪ್ರಗತಿ ಶಾಲೆಯ ಹಳೆಯ ವಿದ್ಯಾರ್ಥಿನಿ ಯಶಸ್ವಿನಿ ಟಿ.ಎನ್. ಮಾತನಾಡಿ ಶಾಲೆಯಲ್ಲಿ ಎಲ್ಲಾ ಬಗೆಯ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಲು ವಿದ್ಯಾರ್ಥಿಗಳು ಮುಂದಾಗಬೇಕು, ಬಾಲ್ಯದಿಂದಲೇ ನಾಯಕತ್ವದ ಗುಣಗಳನ್ನು ಮೈಗೂಡಿಸಿಕೊಂಡು ಮುಂದುವರೆದಲ್ಲಿ ಉನ್ನತ ಸ್ಥಾನಗಳನ್ನು ಪಡೆಯಬಹುದಾಗಿದೆ ಎಂದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ನಿವೃತ್ತ ಉಪ ನಿರ್ದೇಶಕ ಪಿ.ಸಿ. ಮಾಚ್ಚಾಡೋ ಮಾತನಾಡಿ, ಪೋಷಕರು ತಾಳ್ಮೆಯಿಂದ ಮಕ್ಕಳೊಂದಿಗೆ ವ್ಯವಹರಿಸಬೇಕು. ಬಾಲ್ಯದಿಂದಲೇ ಮಕ್ಕಳ ಅಂತರAಗವನ್ನು ಪೋಷಕರು ಅರಿಯುವಂತಾಗಬೇಕು ಎಂದರು.
ಪ್ರಗತಿ ಆಂಗ್ಲ ಮಾಧ್ಯಮ ಶಾಲೆಯ ಸ್ಥಾಪಕ ಮಾದಂಡ ಪೂವಯ್ಯ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಕ್ರೀಡೆ, ಸಾಹಿತ್ಯ, ಸಾಮಾಜಿಕ ಕಳಕಳಿ, ಸಂಸ್ಕೃತಿಗೆ ಒತ್ತು ನೀಡಿ ಎಲ್ಲಾ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಪ್ರೋತ್ಸಾಹಿಸಲಾಗುತ್ತದೆ ಎಂದರು.
ಶಾಲೆಯ ಆಡಳಿತಾಧಿಕಾರಿ ಮಾದಂಡ ಪಿ. ತಿಮ್ಮಯ್ಯ ಶಾಲೆಯ ವಾರ್ಷಿಕ ಪ್ರಗತಿಯ ವರದಿ ವಾಚಿಸಿದರು. ಕಾರ್ಯಕ್ರಮದ ವೇದಿಕೆಯಲ್ಲಿ ಮುಖ್ಯೋಪಾಧ್ಯಾಯಿನಿ ವಿಮಲ, ಮತ್ತಿತರರು ಉಪಸ್ಥಿತರಿದ್ದರು. ಶೈಕ್ಷಣಿಕ ಸಾಲಿನಲ್ಲಿ ಉತ್ತಮ ಅಂಕಗಳಿಸಿದ ವಿದ್ಯಾರ್ಥಿಗಳು, ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಪ್ರಾಥಮಿಕ ಮತ್ತು ಪ್ರೌಢಶಾಲೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಶಾಲೆಯ ಆಡಳಿತ ಮಂಡಳಿಯ ನಿರ್ದೇಶಕಿ ಮಾದಂಡ ಸುಶ್ಮ ತಿಮ್ಮಯ್ಯ ಸ್ವಾಗತಿಸಿದರು, ಪ್ರೌಢಶಾಲೆಯ ವಿದ್ಯಾರ್ಥಿನಿ ಹೀಫಾಜ್ ಖಾನಂ ಕಾರ್ಯಕ್ರಮ ನಿರೂಪಿಸಿ, ಮುಖ್ಯೋಪಾಧ್ಯಾಯಿನಿ ವಿಮಲ ವಂದಿಸಿದರು.