ಕರಿಕೆ, ಡಿ. ೨೮: ಇಲ್ಲಿಗೆ ಸಮೀಪದ ಪಟ್ಟಿಘಾಟ್ ಮೀಸಲು ಅರಣ್ಯದ ತಪ್ಪಲಿನ ಚೆತ್ತುಕಾಯ ಬರೂಕ ಜಲವಿದ್ಯುತ್ ಉತ್ಪಾದನಾ ಘಟಕದ ನೀರಿನ ಕಾಲುವೆಗೆ ಕಡವೆಯೊಂದು ಬಿದ್ದು ಮೃತಪಟ್ಟ ಘಟನೆ ನಡೆದಿದೆ.
ಜಲವಿದ್ಯುತ್ ಘಟಕದ ಅಣೆಕಟ್ಟೆ ಮೀಸಲು ಅರಣ್ಯದ ಒತ್ತಿನಲ್ಲಿದ್ದು, ನೀರಿನ ಪ್ರದೇಶವಾದ ಕಾರಣ ಈ ಭಾಗದಲ್ಲಿ ವನ್ಯಜೀವಿಗಳು ಹೆಚ್ಚಾಗಿ ವಾಸಿಸುತ್ತಿವೆ. ಸಮೀಪದಲ್ಲಿಯೇ ಎರಡು ಕಿ.ಮಿ. ಅಪಾಯಕಾರಿ ಕಾಂಕ್ರೀಟ್ ಕಾಲುವೆಯಿದ್ದು, ಕಡವೆ, ಕಾಳಿಂಗ ಸರ್ಪ ಸೇರಿದಂತೆ ಹಲವು ವನ್ಯಜೀವಿಗಳು ಈ ನೀರಿನ ಕಾಲುವೆಗೆ ನಿರಂತರ ಬಲಿಯಾಗುತ್ತಿದ್ದು, ಇದೀಗ ಇದು ಐದನೇ ಕಡವೆ ಬಲಿಯಾಗಿದೆ. ಇದಲ್ಲದೆ ಕಾಲುವೆ ಸಾರ್ವಜನಿಕ ರಸ್ತೆ ಬದಿಯಲ್ಲಿ ಹಾದು ಹೋಗುತ್ತಿದ್ದು, ಎರಡು ವರ್ಷಗಳ ಹಿಂದೆ ಸ್ಥಳೀಯ ಸುಂದರ ಎಂಬ ಯುವಕನೊಬ್ಬ ನೀರಿಗೆ ಬಿದ್ದು ಮ್ರತಪಟ್ಟಿದ್ದು, ಪುಟಾಣಿ ಮಕ್ಕಳು, ಕೂಲಿ ಕಾರ್ಮಿಕರು ದಿನ ನಿತ್ಯ ಜೀವ ಭಯದಿಂದ ಸಂಚರಿಸುತ್ತಿ ದ್ದಾರೆ. ಸ್ಥಳೀಯ ಗ್ರಾಮಸ್ಥರು, ಗ್ರಾಮ ಪಂಚಾಯಿತಿ ಸುರಕ್ಷಾ ಬೇಲಿ ನಿರ್ಮಿಸಲು ಸೂಚಿಸಿದರೂ ಜಲವಿದ್ಯುತ್ ಘಟಕದ ಆಡಳಿತ ಮಂಡಳಿ ಯಾವುದೇ ಮುಂಜಾಗ್ರತಾ ಕ್ರಮಗಳನ್ನು ವಹಿಸದಿರುವುದಕ್ಕೆ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸ್ಥಳಕ್ಕೆ ಭಾಗಮಂಡಲ ವಲಯ ಅರಣ್ಯ ಅಧಿಕಾರಿ ರವೀಂದ್ರರವರು ಭೇಟಿ ನೀಡಿ ಪರಿಶೀಲನೆ ನಡೆಸಿ, ಪಶು ವೈದ್ಯಾಧಿಕಾರಿಯಿಂದ ಮರಣೋತ್ತರ ಪರೀಕ್ಷೆ ನಡೆಸಿ ಕಡವೆಯ ಮೃತ ಶರೀರವನ್ನು ವಿಲೇವಾರಿ ಮಾಡಲಾಯಿತು.
ಸುಧೀರ್ ಹೊದ್ದೆಟ್ಟಿ