ಸಿದ್ದಾಪುರ, ಡಿ. ೨೭: ಅನಧಿಕೃತ ಆಟೋರಿಕ್ಷಾಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಟೋ ಚಾಲಕರು ಪೊಲೀಸ್ ಇಲಾಖಾಧಿಕಾರಿಗಳನ್ನು ಒತ್ತಾಯಿಸಿದರು. ಸಿದ್ದಾಪುರ ಠಾಣಾಧಿಕಾರಿ ರಾಘವೇಂದ್ರ ನೇತೃತ್ವದಲ್ಲಿ ನಡೆದ ಆಟೋ ಚಾಲಕರ ಹಾಗೂ ಮಾಲೀಕರ ಸಭೆಯಲ್ಲಿ ಆಟೋ ಚಾಲಕರ ಸಂಘದ ಅಧ್ಯಕ್ಷ ಎಂ.ಆರ್ ಸಲೀಂ ಮಾತನಾಡಿ, ಸಿದ್ದಾಪುರದಲ್ಲಿ ಕೆಲವು ಆಟೋರಿಕ್ಷಾ ಚಾಲಕರು ಪೊಲೀಸ್ ಠಾಣೆಯ ಮೂಲಕ ನೀಡುತ್ತಿರುವ ಎಸ್.ಪಿ.ಎಸ್ ಸಂಖ್ಯೆಗಳನ್ನು ನೋಂದಾಯಿಸದೇ ವಾಹನಗಳನ್ನು ಚಾಲನೆ ಮಾಡುತ್ತಿದ್ದಾರೆ. ಅಲ್ಲದೇ ಸಮರ್ಪಕವಾದ ದಾಖಲೆಗಳನ್ನು ಇಟ್ಟುಕೊಳ್ಳದೇ ಅನಧಿಕೃತವಾಗಿ ಬಾಡಿಗೆ ಮಾಡುತ್ತಿದ್ದಾರೆ ಎಂದು ಹೇಳಿದರು.

ಆಟೋ ಚಾಲಕರು ಮಾತನಾಡಿ, ಬಿಳಿ ಫಲಕದ ಜೀಪುಗಳು ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದು, ಆಟೋ ಚಾಲಕರಿಗೆ ಸಮಸ್ಯೆ ಆಗುತ್ತಿದೆ ಎಂದರು. ಈ ಬಗ್ಗೆ ಹಲವಾರು ಬಾರಿ ಪೊಲೀಸ್ ಇಲಾಖೆಯ ಗಮನಕ್ಕೆ ತಂದರೂ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲವೆAದು ದೂರಿದರು. ಠಾಣಾಧಿಕಾರಿ ರಾಘವೇಂದ್ರ ಮಾತನಾಡಿ ಮುಂದಿನ ದಿನಗಳಲ್ಲಿ ಅನಧಿಕೃತ ಆಟೋರಿಕ್ಷಾಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.