ಕುಶಾಲನಗರ, ಡಿ. ೨೭: ನೂತನ ವಾಗಿ ಅಸ್ತಿತ್ವಕ್ಕೆ ಬಂದಿರುವ ಕೊಡಗು ವಿಶ್ವವಿದ್ಯಾಲಯದ ಘನತೆಗೆ ಕೆಲವರು ಧಕ್ಕೆ ತರುತ್ತಿದ್ದಾರೆ ಎಂದು ಕೊಡಗು ವಿಶ್ವವಿದ್ಯಾಲಯ ಹಿತ ರಕ್ಷಣಾ ಬಳಗ ಆರೋಪಿಸಿದೆ.
ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಹೆಗ್ಗಳಿಕೆಗೆ ಭಾಜನವಾಗಿರುವ ಕೊಡಗು ವಿಶ್ವವಿದ್ಯಾಲಯದ ಕಾರ್ಯತತ್ಪರತೆಯನ್ನು ಹಾಳು ಮಾಡುವ ಸಂಬAಧ ಸರ್ಕಾರದ ಆದೇಶದಂತೆ ಸಂಸ್ಥೆಯಿAದ ವಜಾಗೊಂಡ ಕೆಲವು ಬೋಧಕೇತರ ಸಿಬ್ಬಂದಿಗಳು ಸಂಸ್ಥೆಯ ಹೆಸರನ್ನು ಕೆಡಿಸುತ್ತಿದ್ದಾರೆ ಎಂದು ಬಳಗದ ಅಧ್ಯಕ್ಷರಾದ ಕೆ.ಎಸ್. ಕೃಷ್ಣೇಗೌಡ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ವಜಾಗೊಂಡ ಬೋಧಕೇತರ ಸಿಬ್ಬಂದಿಗಳು ವಿಶ್ವವಿದ್ಯಾಲಯದ ವಿರುದ್ಧ ಸುತ್ತಮುತ್ತಲ ಜನರಲ್ಲಿ ಗೊಂದಲ ಮೂಡಿಸುತ್ತಿದ್ದಾರೆ.
ಉನ್ನತ ಶಿಕ್ಷಣ ಇಲಾಖೆಯ ಪೂರ್ವ ಅನುಮತಿ ಪಡೆಯದೆ ಅಗತ್ಯಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ತಾತ್ಕಾಲಿಕ ಹೊರಗುತ್ತಿಗೆ ಆಧಾರದಲ್ಲಿ ನೇಮಿಸಿಕೊಂಡಿರುವ ಬೋಧಕೇತರ ಸಿಬ್ಬಂದಿಗಳನ್ನು ವಜಾ ಮಾಡಲಾಗಿದ್ದು ವಿನಾಕಾರಣ ಕೊಡಗು ವಿಶ್ವವಿದ್ಯಾಲಯದ ಎದುರು ಕೆಲವು ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಪ್ರತಿಭಟನೆ ನಡೆಸುತ್ತಿರುವ ೨೦ಕ್ಕೂ ಅಧಿಕ ಮಂದಿ ವಜಾಗೊಂಡ ಸಿಬ್ಬಂದಿಗಳು ಕೆಲವು ಸಂಘಟನೆಗಳನ್ನು ಒಗ್ಗೂಡಿಸಿಕೊಂಡು ವಿಶ್ವವಿದ್ಯಾಲಯದ ಕುಲಸಚಿವರ ವಿರುದ್ಧ ದಿನನಿತ್ಯ ಅವಹೇಳನಕಾರಿಯಾಗಿ ಘೋಷಣೆ ಕೂಗುತ್ತಿದ್ದು, ಇದರಿಂದ ಅಧಿಕಾರಿಗಳ ಘನತೆಗೆ ಧಕ್ಕೆ ಬರುತ್ತಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಳಗದ ಪ್ರಮುಖರಾದ ನಟೇಶ್ ಗೌಡ, ವಿಶ್ವವಿದ್ಯಾಲಯದಲ್ಲಿ ಈ ಹಿಂದೆ ನಿಯಮ ಬಾಹಿರವಾಗಿ ಕೆಲವು ಬೋಧಕೇತರ ಸಿಬ್ಬಂದಿಗಳನ್ನು ನಿಯೋಜಿಸಿರುವುದಾಗಿ ದೂರಿದರು.
ಅಂಬೇಡ್ಕರ್ ಸಂಘದ ಪ್ರಮುಖರಾದ ಶಿವಶಂಕರ್ ಮಾತನಾಡಿ, ವಿಶ್ವವಿದ್ಯಾಲಯದ ಅಧಿಕಾರಿಗಳು ಯಾವುದೇ ರೀತಿಯ ಬೆದರಿಕೆಗೆ ಒಳಗಾಗಬಾರದೆಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಬಳಗದ ಪ್ರಮುಖರಾದ ಟಿ ಬಿ ಜಗದೀಶ್, ಪಂಚಾಯಿತಿ ಸದಸ್ಯರಾದ ಸಾವಿತ್ರಿ, ಮಹದೇವ್ ಮತ್ತು ಗ್ರಾಮಸ್ಥರು ಇದ್ದರು.
ಕುಲಸಚಿವರ ಪ್ರತಿಕ್ರಿಯೆ
ಈ ಬಗ್ಗೆ ಪ್ರತಿಕ್ರಿಯೆ ವ್ಯಕ್ತಪಡಿಸಿರುವ ಕೊಡಗು ವಿಶ್ವವಿದ್ಯಾಲಯದ ಕುಲ ಸಚಿವರಾದ ಡಾ ಸೀನಪ್ಪ ಅವರು ವಜಾಗೊಂಡಿರುವ ಸಿಬ್ಬಂದಿಗಳಿಗೂ ಕೊಡಗು ವಿಶ್ವವಿದ್ಯಾಲಯಕ್ಕೂ ಯಾವುದೇ ರೀತಿಯ ಸಂಬAಧ ಇರುವುದಿಲ್ಲ. ಸರಕಾರದ ಸುತ್ತೋಲೆಯಂತೆ ಕ್ರಮ ನಡೆದಿದೆ. ಈ ಬಗ್ಗೆ ಸ್ಪಷ್ಟವಾಗಿ ಪ್ರತಿಭಟನಾಕಾರರಿಗೆ ತಿಳಿ ಹೇಳಲಾಗಿದೆ. ಆದರೂ ವಜಾಗೊಂಡ ಸಿಬ್ಬಂದಿಗಳು ಕೊಡಗು ವಿಶ್ವವಿದ್ಯಾಲಯದ ಎದುರು ಕೆಲವು ದಿನಗಳಿಂದ ಪ್ರತಿಭಟನೆ ಮಾಡುತ್ತಿದ್ದು ತಮ್ಮ ಮೇಲೆ ಅವಹೇಳನಕಾರಿ ಘೋಷಣೆ ಕೂಗುತ್ತಿರುವುದು ತಿಳಿದು ಬಂದಿದೆ. ಪ್ರತಿಭಟನಾಕಾರರಲ್ಲಿ ಕೆಲವರು ಸಂಘ ಸಂಸ್ಥೆಗಳ ಹೆಸರಿನಲ್ಲಿ ವಿಶ್ವವಿದ್ಯಾಲಯಕ್ಕೆ ಅಕ್ರಮವಾಗಿ ನುಗ್ಗಿ ಅನುಚಿತವಾಗಿ ವರ್ತಿಸುವುದರೊಂದಿಗೆ ಕಿರುಕುಳ ಕೊಡುತ್ತಿದ್ದಾರೆ. ವಿಶ್ವವಿದ್ಯಾಲಯದಲ್ಲಿ ಪರೀಕ್ಷೆಗಳು ನಡೆಯುತ್ತಿದ್ದು ವಿದ್ಯಾರ್ಥಿಗಳಿಗೆ ಇದರಿಂದ ಕಿರಿಕಿರಿ ಉಂಟಾಗುತ್ತಿದೆ.
ಈ ಬಗ್ಗೆ ಈಗಾಗಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮತ್ತು ಸಂಬAಧಿಸಿದ ಹಿರಿಯ ಅಧಿಕಾರಿಗಳಿಗೆ ದೂರು ನೀಡಲಾಗಿದೆ ಎಂದು ತಿಳಿಸಿದ್ದಾರೆ.