ಕೂಡಿಗೆ, ಡಿ. ೨೭: ಸಮಾಜಕ್ಕೆ ಪೂರಕವಾಗುವ ವಿಷಯಗಳನ್ನು ಮತ್ತು ವಿದ್ಯಾರ್ಥಿಗಳ ಬದುಕಿಗೆ ಆದರ್ಶ ಮತ್ತು ಜೀವನ ಮೌಲ್ಯಗಳನ್ನು ಶಿಕ್ಷಣದ ಮೂಲಕ ಕಲಿಸುವುದರ ಜೊತೆಯಲ್ಲಿ ಬದುಕಿನ ಮೌಲ್ಯಗಳನ್ನು ಬೆಳೆಸಲು ಸ್ಫೂರ್ತಿಯನ್ನು ನೀಡುವುದರ ಜೊತೆಗೆ ವಿದ್ಯಾರ್ಥಿಗಳನ್ನು ಸತ್ಪçಜೆಗಳನ್ನಾಗಿಸುವ ಜವಾಬ್ದಾರಿಯನ್ನು ಶಿಕ್ಷಣದ ಮೂಲಕ ನೀಡಲಾಗುತ್ತದೆ ಎಂದು ಕೊಡ್ಲಿಪೇಟೆಯ ಕಿರಿಕೊಡ್ಲಿ ಮಠದ ಶ್ರೀ ಸದಾಶಿವ ಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದರು.

ಕೂಡಿಗೆಯಲ್ಲಿ ನಡೆದ ಕಿಶೋರೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಮಾಜದಲ್ಲಿ ಮಾನವೀಯತೆ ಮನೆಮಾಡಿದರೆ ಮಾತ್ರ ಸಮಸ್ಯೆಗಳಿಗೆ ಪರಿಹಾರ ಸಾಧ್ಯ. ವಿದ್ಯಾರ್ಥಿಗಳ ಯಶಸ್ವಿಗೆ, ಶಿಕ್ಷಣದ ಪ್ರಗತಿಗೆ ಪೋಷಕರ ಪಾತ್ರ ಅತಿ ಮುಖ್ಯವಾಗಿರುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂಥರ್ ಗೌಡ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಅಧ್ಯಯನಶೀಲತೆಯನ್ನು ಮೈಗೂಡಿಸಿಕೊಂಡು, ಉನ್ನತ ಶಿಕ್ಷಣ ಹೊಂದಿ ತಮ್ಮ ಭವಿಷ್ಯವನ್ನು ಉಜ್ವಲ ಗೊಳಿಸಿಕೊಳ್ಳಬೇಕಾಗುತ್ತದೆ. ಇದರ ಜೊತೆಯಲ್ಲಿ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳ ಮೂಲಕ ಅನುಭವ ಜ್ಞಾನವನ್ನು ಪಡೆಯಲು ಅನುಕೂಲ ವಾಗುತ್ತದೆ. ಪೋಷಕರು ವಿದ್ಯಾರ್ಥಿಗಳ ಮೇಲೆ ಒತ್ತಡವನ್ನು ಹೇರಬಾರದು ಎಂದು ಕಿವಿಮಾತು ಹೇಳಿದರು.

ಕರ್ನಾಟಕ ನೈರುತ್ಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ ಮಾತನಾಡಿ, ಶಿಕ್ಷಣ ಸಂಸ್ಥೆಗಳ ಏಳಿಗೆಯಲ್ಲಿ ಪೋಷಕರ, ಶಿಕ್ಷಕರ ಹಾಗೂ ವಿದ್ಯಾರ್ಥಿಗಳ ಪಾತ್ರ ಮಹತ್ವವಾದದ್ದು, ವಿದ್ಯಾರ್ಥಿಗಳು ಆತ್ಮವಿಶ್ವಾಸವನ್ನು ಮೈಗೂಡಿಸಿ ಕೊಂಡು, ಕಠಿಣ ಪರಿಶ್ರಮದೊಂದಿಗೆ ವಿದ್ಯಾಭ್ಯಾಸಕ್ಕೆ ಹೆಚ್ಚು ಗಮನ ನೀಡಿದಾಗ ಯಶಸ್ಸು ಕಾಣಬಹುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕೂಡು ಮಂಗಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಭಾಸ್ಕರ್ ನಾಯಕ್ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆ.ಇ.ಎಸ್. ವಿದ್ಯಾಸಂಸ್ಥೆಯ ಕಾರ್ಯದರ್ಶಿ ಉಮಾ ಪ್ರಭಾಕರ್ ವಹಿಸಿದ್ದರು. ವೇದಿಕೆಯಲ್ಲಿ ಚಿಕ್ಕ ಅಳುವಾರದ ಕೊಡಗು ವಿಶ್ವವಿದ್ಯಾಲಯ ನಿರ್ದೇಶಕ ಡಾ. ಧರ್ಮಪ್ಪ, ಶಾಲಾ ಪೋಷಕ ಸಲಹಾ ಸಮಿತಿಯ ಸದಸ್ಯರಾದ ಐಶಾಭಿ, ಯಮುನಾ, ಡಿ.ವಿ. ಮೂರ್ತಿ, ಶಿವಕುಮಾರ್ ಸೇರಿದಂತೆ ಶಿಕ್ಷಕರು ಉಪಸ್ಥಿತರಿದ್ದರು. ನಂತರ ಕಿಶೋರೋತ್ಸವ ಅಂಗವಾಗಿ ಶಾಲಾ ವಿದ್ಯಾರ್ಥಿಗಳಿಂದ ಅತ್ಯಾಕರ್ಷಕವಾದ ಉಡುಗೆ ತೊಡುಗೆಗಳ ಮೂಲಕ ನೃತ್ಯ ಪ್ರದರ್ಶನ ನಡೆಯಿತು.