ಸೋಮವಾರಪೇಟೆ, ಡಿ. ೨೭: ಕಿರಗಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದ ಮಕ್ಕಳ ಗ್ರಾಮಸಭೆಯಲ್ಲಿ ಜನಪ್ರತಿನಿಧಿಗಳು ಹಾಗೂ ಸಭೆಗೆ ಹಾಜರಾದಷ್ಟು ಅಧಿಕಾರಿಗಳ ಮುಂದೆ ಮಕ್ಕಳು ತಮ್ಮ ವ್ಯಾಪ್ತಿಯ ಸಮಸ್ಯೆಗಳ ಬಗ್ಗೆ ಗಮನ ಸೆಳೆದರು.
ಮಕ್ಕಳ ಗ್ರಾಮ ಸಭೆಯಲ್ಲಿ ಭಾಗವಹಿಸಿ ಅವರುಗಳ ಸಮಸ್ಯೆಗಳನ್ನು ಆಲಿಸಬೇಕಿದ್ದ ಹಲವಷ್ಟು ಅಧಿಕಾರಿಗಳು ಸಭೆಗೆ ಗೈರಾಗಿದ್ದರಿಂದ ಮಕ್ಕಳ ಹಲವಷ್ಟು ಸಮಸ್ಯೆಗಳು ಸಮಸ್ಯೆಯಾಗಿಯೇ ಉಳಿದುಕೊಂಡವು.
ಕಿರಗAದೂರು ಗ್ರಾಮ ಪಂಚಾಯಿತಿ, ನಾವು ಪ್ರತಿಷ್ಠಾನದ ಆಶ್ರಯದಲ್ಲಿ ಕಿರಗಂದೂರು ಸರ್ಕಾರಿ ಪೌಢಶಾಲಾ ಸಭಾಂಗಣದಲ್ಲಿ ಮಕ್ಕಳ ಗ್ರಾಮ ಸಭೆ ಆಯೋಜನೆಗೊಂಡಿತ್ತು. ಗ್ರಾಮಸಭೆ ನಡೆಸಿಕೊಡಬೇಕಾದ ಪಿಡಿಓ ರಜನಿ ಅವರು ಬೇರೆ ಕೆಲಸದ ಕಾರಣ ನೀಡಿ ಪಂಚಾಯಿತಿಯಿAದ ಬೆಳಿಗ್ಗೆ ಹೊರಹೋಗಿದ್ದರು.
ಪಂಚಾಯಿತಿ ವ್ಯಾಪ್ತಿಯ ಭಾಗೀದಾರರಾದ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಜಿಲ್ಲಾ ಮಟ್ಟದ ಮಕ್ಕಳ ಸಂರಕ್ಷಣಾಧಿಕಾರಿ, ಸಮಾಜಕಲ್ಯಾಣ ಇಲಾಖೆ, ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆಗಳ ಅಧಿಕಾರಿಗಳು ಅಥವಾ ಪ್ರತಿನಿಧಿಗಳು ಮಕ್ಕಳ ಗ್ರಾಮಸಭೆಯಲ್ಲಿ ಭಾಗವಹಿಸಿ ಮಕ್ಕಳ ಸಮಸ್ಯೆಯನ್ನು ಆಲಿಸ ಬೇಕಾಗಿದೆ. ಇಲಾಖೆಯ ಅಧಿಕಾರಿಗಳು ಹಾಜರಾಗುವಂತೆ ನೋಡಿಕೊಳ್ಳುವುದು ಪಿಡಿಓ ಕರ್ತವ್ಯವಾಗಿದ್ದರೂ, ಪಿಡಿಓ ಅವರೇ ಸಭೆಗೆ ಗೈರಾಗಿರುವ ಬಗ್ಗೆ ಅಸಮಾಧಾನ ವ್ಯಕ್ತಗೊಂಡಿತು.
ಕಿರಗAದೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎರಡು ಕೊಠಡಿಗಳ ಮೇಲ್ಚಾವಣಿ ಮುರಿದು ಬೀಳುವ ಹಂತದಲ್ಲಿದ್ದು, ಅಲ್ಲಲ್ಲಿ ಮರದ ಕೋಲನ್ನು ಸಿಕ್ಕಿಸಿಕೊಂಡು ಹೆಂಚು ಬೀಳದಂತೆ ಮಾಡಿ ಕೊಂಡಿದ್ದೇವೆ ಎಂದು ೫ನೇ ತರಗತಿಯ ಕಾರ್ತಿಕ್ ಹೇಳಿದರು. ಈ ಬಗ್ಗೆ ಶಿಕ್ಷಣ ಇಲಾಖೆಗೆ ಪತ್ರ ಬರೆಯುವುದಾಗಿ ಕಾರ್ಯದರ್ಶಿ ಕೃಷ್ಣಪ್ಪ ಭರವಸೆ ನೀಡಿದರು.
ಹಸಿ ಹಾಗೂ ಒಣಕಸ ಹಾಕಲು ಪಂಚಾಯಿತಿಯಿAದ ಊರುಬೆಟ್ಟ ಗ್ರಾಮಕ್ಕೆ ಬಕೇಟ್ ಕೊಟ್ಟಿದ್ದಾರೆ. ಆದರೆ ಅನೇಕ ತಿಂಗಳುಗಳು ಕಳೆದರೂ, ಅದನ್ನು ತೆಗೆದುಕೊಂಡು ಹೋಗಿಲ್ಲ ಎಂದು ವಿದ್ಯಾರ್ಥಿನಿ ಗನ್ಯತಾ ಹೇಳಿದರು. ಕಸ ವಿಲೇವಾರಿ ವ್ಯಾನ್ ಹೋಗಲು ರಸ್ತೆ ಸರಿಯಿಲ್ಲ. ಪಂಚಾಯಿತಿ ಸಭೆಯಲ್ಲಿ ಚರ್ಚಿಸಿ ಕ್ರಮಕೈಗೊಳ್ಳುವುದಾಗಿ ಕಾರ್ಯದರ್ಶಿ ಭರವಸೆ ನೀಡಿದರು. ಸಂಜೆ ಸಮಯದಲ್ಲಿ ಶಾಲೆ ಆವರಣದಲ್ಲಿ ಮದ್ಯಸೇವಿಸಿ ಬಾಟಲ್ ಎಸೆಯುತ್ತಾರೆ. ಧೂಮಪಾನ ಮಾಡಿ ಸಿಗರೇಟ್ ಪ್ಯಾಕೇಟ್ಗಳನ್ನು ಅಂಗಳದಲ್ಲಿ ಎಸೆಯುತ್ತಿದ್ದಾರೆ. ಕ್ರಮ ಕೈಗೊಳ್ಳಿ ಎಂದು ವಿದ್ಯಾರ್ಥಿ ವಂಶಿ ಮನವಿ ಮಾಡಿಕೊಂಡರು. ಈ ಬಗ್ಗೆ ಗ್ರಾಮ ಸಭೆಯಲ್ಲಿ ಚರ್ಚೆಯಾಗಿದ್ದು, ಪೊಲೀಸ್ ಹಾಗು ಅಬಕಾರಿ ಇಲಾಖೆಗೆ ದೂರು ನೀಡಲಾಗಿದೆ. ಬೀಟ್ ಪೊಲೀಸರು ಕ್ರಮ ಕೈಗೊಳ್ಳಲಿದ್ದಾರೆ ಎಂದು ಕಾರ್ಯದರ್ಶಿ ಹೇಳಿದರು.
ಬಡಗಿಮನೆ ಹಾಗೂ ಅಚ್ಚೆಗೌಡ್ನ ಮನೆಯ ರಸ್ತೆ ಸಂಪೂರ್ಣ ಹಾಳಾಗಿದ್ದು, ಶಾಲೆಗೆ ಕಾಲ್ನಡಿಗೆಯಲ್ಲಿ ಬರಲು ಕಷ್ಟವಾಗುತ್ತಿದೆ. ರಸ್ತೆ ಹಣ ವಾಪಾಸ್ಸಾಯಿತು. ಕಠಿಣ ನಿಯಮಗಳಿಂದ ನರೇಗಾದಲ್ಲಿ ಯಾವುದೇ ಕಾಮಗಾರಿ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ ಎಂದು ಪಂಚಾಯಿತಿ ಉಪಾಧ್ಯಕ್ಷ ಎಂ.ಎA. ಬೆಳ್ಳಿಯಪ್ಪ ಅಸಹಾಯಕತೆ ವ್ಯಕ್ತಪಡಿಸಿದರು.
ನಾವು ಪ್ರತಿಷ್ಠಾನದ ಕಾರ್ಯಕಾರಿ ಸಮಿತಿ ಮುಖ್ಯಸ್ಥರಾದ ಸುಮನಾ ಗೌತಮ್ ಮಾತನಾಡಿ, ಮಕ್ಕಳಿಗೆ ಬದುಕುವ ಹಕ್ಕು, ರಕ್ಷಣೆಯ ಹಕ್ಕು, ಅಭಿವೃದ್ಧಿ ಹೊಂದುವ ಹಕ್ಕು, ಭಾಗವಹಿಸುವ ಹಕ್ಕುಗಳಿದ್ದು, ಅವುಗಳನ್ನು ಮೊಟಕುಗೊಳಿಸುವ ಪ್ರಯತ್ನ ಯಾರಿಂದಲೂ ಆಗಬಾರದು. ಮಕ್ಕಳ ಭಾವನೆಗಳಿಗೆ ಸ್ಪಂದಿಸುವ ಮಕ್ಕಳ ಗ್ರಾಮ ಸಭೆಯಾಗಬೇಕೇ ಹೊರತು ಕಾಟಾಚಾರದ ಸಭೆ ನಡೆಸಬಾರದು ಎಂದರು.
ಪ್ರೌಢಶಾಲೆಯ ಮುಖ್ಯಶಿಕ್ಷಕಿ ರಶ್ಮಿ ಮಾತನಾಡಿ, ಮಕ್ಕಳಲ್ಲಿ ಪ್ರಶ್ನಿಸುವ ಕೌಶಲ್ಯ ಬರಬೇಕಾದರೆ ಇಂತಹ ಕಾರ್ಯಕ್ರಮಗಳು ನಡೆಯಬೇಕು ಎಂದು ಅಭಿಪ್ರಾಯಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿದ್ಯಾರ್ಥಿನಿ ರಿತಿಕ್ಷಾ ವಹಿಸಿದ್ದರು. ವಿದ್ಯಾರ್ಥಿ ಆದಿತ್ಯಾ, ನಾವು ಪ್ರತಿಷ್ಠಾನದ ಸಂಸ್ಥಾಪಕ ಗೌತಮ್ ಕಿರಗಂದೂರು, ಸಮಿತಿ ಸದಸ್ಯ ಪೊನ್ನಪ್ಪ, ಮುಖ್ಯ ಶಿಕ್ಷಕಿ ವಿನೋದ ಇದ್ದರು.