ಮಡಿಕೇರಿ, ಡಿ. ೨೭: ಮಡಿಕೇರಿ ನಗರದ ಪ್ರಥಮ ಕೊಡವಕೇರಿಯಾದ ಕಾವೇರಿ ಕೊಡವಕೇರಿ ಸಂಘದ ವಾರ್ಷಿಕ ಮಹಾಸಭೆ ಹಾಗೂ ಒತ್ತೋರ್ಮೆಕೂಟ ತಾ.೨೫ರಂದು ಕೊಡವ ಸಮಾಜದ ಸಭಾಂಗಣದಲ್ಲಿ ನಡೆಯಿತು.
ಅಧ್ಯಕ್ಷೆ ಬಲ್ಯಾಟಂಡ ಲತಾ ಚಂಗಪ್ಪ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಜರುಗಿತು. ಹಿರಿಯ ಸದಸ್ಯರಾದ ಪುಲಿಯಂಡ ಮಾದಪ್ಪ ಹಾಗೂ ಕಲಿಯಂಡ ಸರಸ್ವತಿ ಚಂಗಪ್ಪ ಅವರುಗಳು ದೀಪ ಬೆಳಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭ ಕ್ರೀಡಾ ಸಾಧಕಿ ತಾತಪಂಡ ಜ್ಯೋತಿ ಸೋಮಯ್ಯ ಹಾಗೂ ಆರೋಗ್ಯ ಇಲಾಖೆಯಲ್ಲಿನ ಸೇವೆಗೆ ಕೂಪದಿರ ಸುನಿತಾ ಮುತ್ತಣ್ಣ ಅವರನ್ನು ಸನ್ಮಾನಿಸಲಾಯಿತು. ಹಿರಿಯರು ಹಾಗೂ ಮಕ್ಕಳಿಗೆ ವಿವಿಧ ಕ್ರೀಡಾಸ್ಪರ್ಧೆಗಳನ್ನು ನಡೆಸಲಾಯಿತು. ಅಧ್ಯಕ್ಷೆ ಲತಾ ಚಂಗಪ್ಪ ಸ್ವಾಗತಿಸಿ ಪ್ರಾಸ್ತವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಅಳಮಂಡ ವಚನ್ ಸುಬ್ಬಯ್ಯ ಮಹಾಸಭೆಯ ವರದಿ ಹಾಗೂ ಲೆಕ್ಕಪತ್ರ ಮಂಡಿಸಿದರು.
ಈ ಸಂದರ್ಭ ಕನೆಕ್ಟಿಂಗ್ ಕೊಡವಾಸ್ನಿಂದ ನಡೆಯುತ್ತಿರುವ ವಿಶ್ವ ಕೊಡವ ಸಮ್ಮೇಳನದ ಕುರಿತು ಬೊಳ್ಳೆರ ವಿನು ಅವರು ಮಾಹಿತಿ ನೀಡಿ ಆಹ್ವಾನಿಸಿದರು. ಸಂಘಟನೆಗೆ ಕೇರಿಯ ಪರವಾಗಿ ಸದಸ್ಯರು ನೀಡಿದ ರೂ. ೨೧,೫೦೦ ಹಣವನ್ನು ಹಸ್ತಾಂತರಿಸಲಾಯಿತು. ಅಪ್ಪನೆರವಂಡ ವಿಲಿನ ದೇವಯ್ಯ ಪ್ರಾರ್ಥಿಸಿ, ಉಪಾಧ್ಯಕ್ಷ ಉಳ್ಳಿಯಡ ನಂದಾ ನಂಜಪ್ಪ ವಂದಿಸಿದರು.
ಸಂಘದ ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ಪಟ್ಟಡ ಕರುಂಬಯ್ಯ, ಉಪಾಧ್ಯಕ್ಷರಾಗಿ ತೊತ್ತಿಯಂಡ ಸರಸ್ವತಿ, ಕಾರ್ಯದರ್ಶಿಯಾಗಿ ಕೋಡಿರ ರತನ್ ದೇವಯ್ಯ, ಖಜಾಂಚಿಯಾಗಿ ತಂಬುಕುತ್ತಿರ ಬೋಪಯ್ಯ ಹಾಗೂ ಇತರ ೧೧ ಮಂದಿಯನ್ನು ನಿರ್ದೇಶಕರುಗಳನ್ನಾಗಿ ಆಯ್ಕೆ ಮಾಡಲಾಯಿತು.