ಶನಿವಾರಸಂತೆ, ಡಿ. ೨೬: ಶಾಲಾ-ಕಾಲೇಜುಗಳಲ್ಲಿ ಪೊಲೀಸ್ ಇಲಾಖೆ ಅಪರಾಧ ತಡೆ ಮಾಸಾಚರಣೆ ಮತ್ತು ಮಾದಕ ವಸ್ತುಗಳ ಬಗ್ಗೆ ಜಾಗೃತಿ ಅಭಿಯಾನ ಕಾರ್ಯಾಗಾರವನ್ನು ಹಮ್ಮಿಕೊಳ್ಳುವ ಮೂಲಕ ವಿದ್ಯಾರ್ಥಿಗಳಲ್ಲಿ ಕಾನೂನಿನ ಅರಿವು ಮೂಡಿಸುತ್ತಿದೆ ಎಂದು ಶನಿವಾರಸಂತೆ ಪೊಲೀಸ್ ಠಾಣೆಯ ಠಾಣಾಧಿಕಾರಿ ಚಂದ್ರಶೇಖರ್ ಹೇಳಿದರು.
ಪಟ್ಟಣದ ಶ್ರೀ ವಿಘ್ನೇಶ್ವರ ಬಾಲಿಕಾ ಪದವಿಪೂರ್ವ ಕಾಲೇಜಿನಲ್ಲಿ ಪೊಲೀಸ್ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಅಪರಾಧ ತಡೆ ಮಾಸಾಚರಣೆ ಮತ್ತು ಮಾದಕ ವಸ್ತುಗಳ ಬಗ್ಗೆ ಜಾಗೃತಿ ಅಭಿಯಾನ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಪೋಕ್ಸೊ ಕಾಯ್ದೆಯ ಸಾಧಕ ಬಾಧಕಗಳು, ವಿದ್ಯಾರ್ಥಿ ದಿಸೆಯಲ್ಲಿ ವರ್ತಿಸಬೇಕಾದ ರೀತಿ-ನೀತಿ, ರಸ್ತೆ ಸಂಚಾರದ ನಿಯಮ ಹಾಗೂ ಮಾದಕ ವಸ್ತು ವ್ಯಸನದಿಂದ ಯುವ ಜನತೆ ಹಾದಿ ತಪ್ಪುತ್ತಿರುವ ಬಗ್ಗೆ ಅವರು ಅರಿವು ಮೂಡಿಸಿದರು.
ಶಿಕ್ಷಕ ಕೆ.ಪಿ. ಜಯಕುಮಾರ್ ಮಾತನಾಡಿ, ಪೊಲೀಸ್ ಇಲಾಖೆಯ ರಕ್ಷಣಾ ವೈಖರಿ, ವಿದ್ಯಾರ್ಥಿಗಳ ರಕ್ಷಣೆಗಾಗಿ ಇರುವ ಕಾನೂನು ಸುವ್ಯವಸ್ಥೆ ಬಗ್ಗೆ ತಿಳಿಸಿದರು. ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಟಿ.ಪಿ. ಶಿವಪ್ರಕಾಶ್ ಮಾತನಾಡಿದರು.ಸಂಸ್ಥೆ ನಿರ್ದೇಶಕಿ ಡಿ.ಜಿ. ನಿತ್ಯಾನಿಧಿ, ಉಪನ್ಯಾಸಕರಾದ ಸರ್ಫ್ ರಾಜ್ ಅಹಮ್ಮದ್, ತೀರ್ಥಾನಂದ್, ಕಿರಣ್ ಕುಮಾರ್, ಶಿಕ್ಷಕರು ಹಾಜರಿದ್ದರು.