ಕಿರುಗೂರು ಗ್ರಾಮಸಭೆ
ಗೋಣಿಕೊಪ್ಪಲು ಡಿ. ೨೬: ಗ್ರಾಮದ ಹತ್ತು ಹಲವು ಸಮಸ್ಯೆ ಪರಿಹಾರಕ್ಕೆ ಜನರು ಆಗ್ರಹಿಸಿದರು. ಸಭೆಗೆ ಆಗಮಿಸಿದ ಪಂಚಾಯತ್ ರಾಜ್ ಇಂಜಿನಿಯರಿAಗ್ ವಿಭಾಗದ ಇಂಜಿನಿಯರ್ ರಾಜೇಶ್ವರಿ ಅವರನ್ನು ಸಭೆಯ ಅಧ್ಯಕ್ಷರು ಸೇರಿದಂತೆ ಗ್ರಾಮಸ್ಥರು ತೀವ್ರ ತರಾಟೆಗೆ ತೆಗೆದುಕೊಂಡ ಘಟನೆ ಕಿರುಗೂರು ಗ್ರಾಮ ಪಂಚಾಯಿತಿಯ ಗ್ರಾಮ ಸಭೆಯಲ್ಲಿ ಕಂಡು ಬಂತು.
ಕಿರುಗೂರು ಗ್ರಾಮ ಪಂಚಾಯಿತಿಯ ಅಧ್ಯಕ್ಷ ಚೆಪ್ಪುಡೀರ ರಾಕೇಶ್ ದೇವಯ್ಯ ಅಧ್ಯಕ್ಷತೆಯಲ್ಲಿ ಕಿರುಗೂರು, ಕೋಟೂರು ಹಾಗೂ ಮತ್ತೂರು ಗ್ರಾಮದ ಜನರು ಗ್ರಾಮ ಸಭೆಯಲ್ಲಿ ತಮ್ಮ ತಮ್ಮ ಭಾಗದ ಹಲವು ಸಮಸ್ಯೆಗಳನ್ನು ಸಭೆಯ ಮುಂದಿಟ್ಟರು. ಸಭೆಯಲ್ಲಿ ಪ್ರಮುಖವಾಗಿ ಸಾರ್ವಜ ನಿಕರು ಓಡಾಡುವ ಗ್ರಾಮೀಣ ರಸ್ತೆಯ ದುಸ್ಥಿತಿ ಬಗ್ಗೆ ಗಂಭೀರ ಚರ್ಚೆ ನಡೆಯಿತು.
ಈ ವೇಳೆ ಸಭೆಗೆ ಆಗಮಿಸಿದ್ದ ಪೊನ್ನಂಪೇಟೆ ಪಂಚಾಯತ್ ರಾಜ್ ಇಂಜಿನಿಯರಿAಗ್ ವಿಭಾಗದ ಇಂಜಿನಿಯರ್ ರಾಜೇಶ್ವರಿ ವಿವರ ನೀಡುತ್ತಿದ್ದಂತೆಯೇ ಗ್ರಾಮಸ್ಥರು ಅಧಿಕಾರಿಗಳ ಸಮಜಾಯಿಷಿಕೆಯನ್ನು ಆಕ್ಷೇಪಿಸಿದರು. ಗುಂಡಿ ಬಿದ್ದ ರಸ್ತೆಯಲ್ಲಿ ಸಾರ್ವಜನಿಕರು ಓಡಾಡಲು ಸಾಧ್ಯವಾಗುತ್ತಿಲ್ಲ. ಹಿರಿಯ ಅಧಿಕಾರಿಗಳ ಗಮನ ಸೆಳೆಯುವಲ್ಲಿ ವಿಫಲರಾಗಿದ್ದೀರಿ ಎಂದು ಆರೋಪಿಸಿದರು. ಈ ಬಗ್ಗೆ ಸಭೆಗೆ ಮಾಹಿತಿ ನೀಡಲು ಅಧ್ಯಕ್ಷ ಚೆಪ್ಪುಡೀರ ರಾಕೇಶ್ ಮುಂದಾದರು. ಗ್ರಾಮೀಣ ರಸ್ತೆಗಳ ದುಸ್ಥಿತಿ ಬಗ್ಗೆ ಕಳೆದ ೨ ತಿಂಗಳ ಬಗ್ಗೆ ಕಚೇರಿಗೆ ೨ ಪತ್ರಗಳನ್ನು ಬರೆದಿದ್ದೇವೆ. ಪತ್ರಕ್ಕೆ ಇಲಾಖೆಯಿಂದ ಉತ್ತರ ಬಂದಿಲ್ಲ. ಕನಿಷ್ಟ ಸ್ಥಳ ಪರಿಶೀಲನೆ ಮಾಡುವ ಸೌಜನ್ಯವು ಅಧಿಕಾರಿಗಳಿಗೆ ಇಲ್ಲದಾಗಿದೆ. ಗ್ರಾಮ ಸಭೆಯನ್ನು ನಾಮಕಾವಸ್ಥೆಗೆ ಮಾಡುತ್ತಿಲ್ಲ. ಬಹುದೊಡ್ಡ ಜವಾಬ್ದಾರಿಯೊಂದಿಗೆ ಗ್ರಾಮಸ್ಥರು ತಮ್ಮ ಸಮಯವನ್ನು ಮೀಸಲಿಟ್ಟು ಸಭೆಗೆ ಆಗಮಿಸಿದ್ದಾರೆ. ಇವರಿಗೆ ಸಮಂಜಸ ಉತ್ತರ ನೀಡುವಂತೆ ಇಂಜಿನಿಯರ್ ರಾಜೇಶ್ವರಿಗೆ ತಾಕೀತು ಮಾಡಿದರು. ಇಂಜಿನಿಯರ್ ರಾಜೇಶ್ವರಿ ಸಭೆಗೆ ಮಾಹಿತಿ ನೀಡಲು ವಿಫಲರಾದರು. ಮುಂದಿನ ಕ್ರಿಯಾಯೋಜನೆಯಲ್ಲಿ ಕಾಮಗಾರಿ ಸೇರಿಸುವುದಾಗಿ ಸಮಜಾಯಿಷಿಕೆ ನೀಡಿದರು. ಇವರ ಉತ್ತರಕ್ಕೆ ತೃಪ್ತರಾಗದ ಅಧ್ಯಕ್ಷ ರಾಕೇಶ್ ದೇವಯ್ಯ ಕಳೆದ ೬ ತಿಂಗಳಿAದ ಪಂಚಾಯಿತಿ ಅಭಿವೃದ್ಧಿಗಾಗಿ ಒಂದು ನಯಪೈಸೆ ಬಿಡುಗಡೆಗೊಂಡಿಲ್ಲ. ಕನಿಷ್ಟ ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ನೀಡಲು ನೀವು ವಿಫಲರಾಗಿದ್ದೀರಿ ಗ್ರಾಮ ಸಭೆಗೆ ಸಮಂಜಸ ಉತ್ತರದೊಂದಿಗೆ ಆಗಮಿಸಬೇಕು ಎಂದು ಅಧಿಕಾರಿಗೆ ಎಚ್ಚರಿಕೆ ನೀಡಿದರು. ಗ್ರಾಮೀಣ ರಸ್ತೆ ಅಭಿವೃದ್ಧಿಗೆ ಉದ್ಯೋಗಖಾತ್ರಿ ಯೋಜನೆಯಲ್ಲಿ ಶೇ. ೧೦ ಅನುದಾನ ಮೀಸಲಿಡ ಬಹುದು. ಇದನ್ನು ಮೀರಿ ಅನುದಾನ ಸದ್ಬಳಕೆ ಮಾಡಲು ಅವಕಾಶ ವಿರುವುದಿಲ್ಲ. ಹೀಗಾಗಿ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಅನುದಾನವು ಲಭ್ಯವಾಗಬೇಕಾಗಿವೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ವಿಶೇಷ ಗಮನ ಹರಿಸಬೇಕು. ಪಂಚಾಯಿತಿ ಮೂಲಕ ಲಿಖಿತವಾಗಿ ರಸ್ತೆ ಸಮಸ್ಯೆಗಳ ಬಗ್ಗೆ ಪತ್ರ ವ್ಯವಹಾರ ನಡೆಸಿದ್ದೇವೆ. ಪಂಚಾಯಿತಿ ಬರೆದ ಪತ್ರಕ್ಕೆ ಮಾನ್ಯತೆ ಇಲ್ಲವೆ.? ಎಂದು ಮತ್ತೊಮ್ಮೆ ಅಧಿಕಾರಿಯನ್ನು ಪ್ರಶ್ನಿಸಿದರು.
ಬಹುಮುಖ್ಯವಾಗಿ ನೀರಾವರಿ ಇಲಾಖೆಯ(ಎಂಐಡಿ) ಅಧಿಕಾರಿಗಳು ಅನುದಾನ ಬಿಡುಗಡೆಯಾಗಿದ್ದರೂ. ಕಾಮಗಾರಿ ಆರಂಭಕ್ಕೆ ಮೀನಾಮೇಷ ಎಣಿಸುತ್ತಿದ್ದಾರೆ. ಈ ಬಗ್ಗೆ ಅಧಿಕಾರಿಗಳನ್ನು ಪ್ರಶ್ನಿಸಿದಾಗ ದರ್ಪದ ಮಾತನಾಡುತ್ತಾರೆ. ಇಂತಹ ಅಧಿಕಾರಿಗಳಿಂದ ಏನನ್ನು ನೀರಿಕ್ಷಿಸಲು ಸಾಧ್ಯ ಎಂದು ಸಭೆಯಲ್ಲಿ ಅಧ್ಯಕ್ಷ ರಾಕೇಶ್ ದೇವಯ್ಯ ಅತೃಪ್ತಿ ವ್ಯಕ್ತಪಡಿಸಿದೆ.
ಸಭೆಯಲ್ಲಿ ನೋಡಲ್ ಅಧಿಕಾರಿಗಳಾದ ಸಿಪಿಒ ನಂದೀಶ್ ಮಾತನಾಡಿ ಕಳೆದ ಎರಡೂವರೆ ವರ್ಷಗಳಿಂದ ಜಿ.ಪಂ. ಹಾಗೂ ತಾ.ಪಂ. ಚುನಾಯಿತ ಪ್ರತಿನಿಧಿಗಳಿಲ್ಲದೆ ಅನುದಾನಗಳಲ್ಲಿ ಕೊರತೆಯಾಗಿದೆ. ೧೫ನೇ ಹಣಕಾಸು ಯೋಜನೆಯಲ್ಲಿ ಬರುವ ಅನುದಾನವೂ ಕೂಡ ಇನ್ನೂ ಬಂದಿಲ್ಲ. ಬಂದಿರುವ ಅನುದಾನದಲ್ಲಿ ನಿಗದಿತ ಯೋಜನೆಗಳಿಗಷ್ಟೆ ಬಳಕೆ ಮಾಡಬೇಕು. ಇದರಿಂದಾಗಿ ಗ್ರಾಮೀಣ ಭಾಗದ ರಸ್ತೆಗಳ ಅಭಿವೃದ್ದಿಗಾಗಿ ಹಿನ್ನಡೆಯಾಗಿದೆ. ಬರುವ ಅನುದಾನದಲ್ಲಿ ಕ್ಷೇತ್ರದ ಶಾಸಕರು ನೀಡುವ ರಸ್ತೆಗಳ ಕಾಮಗಾರಿಯನ್ನು ಮಾತ್ರ ನಿಯಮದಂತೆ ಮಾಡಬೇಕಾಗಿದೆ ಎಂದು ಗ್ರಾಮಸ್ಥರ ರಸ್ತೆ ಸಮಸ್ಯೆ ಬಗ್ಗೆ ವಿವರ ನೀಡಿದರು.
ಪಂಚಾಯಿತಿ ವ್ಯಾಪ್ತಿಯಲ್ಲಿರುವ ಸರ್ಕಾರಿ ಜಾಗಗಳನ್ನು ಪತ್ತೆ ಹಚ್ಚಿ ಇವುಗಳಲ್ಲಿ ಪಂಚಾಯಿತಿ ಅಭಿವೃದ್ಧಿಗೆ ಬೇಕಾದ ಆಸ್ಪತ್ರೆ, ಗ್ರಂಥಾಲಯ, ಸ್ಮಶಾನಭೂಮಿ ಹಾಗೂ ಅಂಗನವಾಡಿ ಕೇಂದ್ರಗಳು ನಿರ್ಮಿಸಬೇಕಿದೆ. ಈ ನಿಟ್ಟಿನಲ್ಲಿ ಕಂದಾಯ ಇಲಾಖೆ ವತಿಯಿಂದ ಪಂಚಾಯಿತಿ ವ್ಯಾಪ್ತಿಯ ಕಿರುಗೂರು, ಮತ್ತೂರು ಹಾಗೂ ಕೋಟೂರು ಭಾಗದಲ್ಲಿರುವ ಸರ್ಕಾರಿ ಜಾಗವನ್ನು ಗುರುತಿಸಿ ಪಂಚಾಯಿತಿಗೆ ಹಸ್ತಾಂತರಿಸಲು ಕೂಡಲೇ ಕ್ರಮ ಕೈಗೊಳ್ಳುವಂತೆ ಸಭೆಯಲ್ಲಿದ್ದ ಕಂದಾಯ ಇಲಾಖೆ ಅಧಿಕಾರಿ ಬಾಳಪ್ಪನವರಿಗೆ ಸೂಚನೆ ನೀಡಿದರು. ಮುಂದಿನ ಮೂರು ತಿಂಗಳಿನಲ್ಲಿ ಪಂಚಾಯಿತಿ ಅಭಿವೃದ್ಧಿಯ ಬಗ್ಗೆ ಗ್ರಾಮಸ್ಥರ ಸಮ್ಮುಖದಲ್ಲಿ ಚರ್ಚೆ ನಡೆಸಲು ವಿಶೇಷ ಗ್ರಾಮ ಸಭೆ ನಡೆಸಲು ನಿರ್ಣಯ ಕೈಗೊಳ್ಳ ಲಾಯಿತು. ಗ್ರಾ.ಪಂ. ಉಪಾಧ್ಯಕ್ಷೆ ಕೆ.ಕೆ. ಲಲಿತ, ಸದಸ್ಯರುಗಳಾದ ಎನ್. ಸುನೀತ, ಪಿ.ಡಿ. ಜೀವನ್, ಸಿ.ಪಿ. ರೇಖಾ ಪೆಮ್ಮಯ್ಯ, ಹೆಚ್.ವಿ. ರಂಗಸ್ವಾಮಿ, ಹೆಚ್.ಎಂ. ಕಾವೇರಮ್ಮ, ಕೆ.ಕೆ. ರವಿ, ಪಿ.ಡಿ. ಸುಮಿತ್ರ, ಕೆ.ಎಂ. ಕಾವೇರಪ್ಪ ಉಪಸ್ಥಿತರಿದ್ದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎ.ಎ. ಶಫೀಕ್ ಸ್ವಾಗತಿಸಿ, ಕಾರ್ಯ ದರ್ಶಿ ಎ.ಪಿ. ರಾಧ ವಂದಿಸಿದರು. ಸಭೆಯಲ್ಲಿ ಪಂಚಾಯಿತಿ ಸಿಬ್ಬಂದಿ ಗಳಾದ ವಿಠಲ, ರೀನಾ, ಶಾಂತಿ, ರವಿ, ಗಾಯತ್ರಿ ಸೇರಿದಂತೆ ವಿವಿಧ ಭಾಗದ ಗ್ರಾಮಸ್ಥರು ಹಾಜರಿದ್ದರು.
ಸರ್ಕಾರದ ಸವಲತ್ತುಗಳು ಗ್ರಾಮ ಪಂಚಾಯಿತಿಯಲ್ಲಿ ಸುಲಲಿತವಾಗಿ ಲಭಿಸುವಂತೆ ಪಂಚಾಯಿತಿಯಲ್ಲಿ ಬಾಪೂಜಿ ಸೇವಾ ಕೇಂದ್ರವನ್ನು ಆರಂಭಿಸಿದ್ದು ಇದನ್ನು ಗ್ರಾಮ ಪಂಚಾಯಿತಿ ಸದಸ್ಯರು, ಅಧಿಕಾರಿಗಳು ಲೋಕಾರ್ಪಣೆ ಮಾಡಿದರು.