ಶನಿವಾರಸಂತೆ, ಡಿ. ೨೫: ಭಾರತದ ಭವಿಷ್ಯವನ್ನು ಬರೆಯುವಂತಹ ಶಾಲೆಗಳು ಮುಂದೊAದು ದಿನ ಸರ್ದಾರ್ ವಲ್ಲಭಭಾಯಿ ಪಟೇಲ್‌ರ ಏಕತೆಯ ಸಂದೇಶದ ಸಂಕೇತವಾಗಿ ಸುಭದ್ರ ಏಕತೆಯನ್ನು ಹಾಗೂ ಉಕ್ಕಿನ ಸದೃಢ ಮನಸ್ಥಿತಿಯನ್ನು ಸಾರುತ್ತವೆ ಎಂಬುದಕ್ಕೆ ಶನಿವಾರಸಂತೆಯ ಸೇಕ್ರೆಡ್ ಹಾರ್ಡ್ ವಿದ್ಯಾಸಂಸ್ಥೆಯ ವಾರ್ಷಿಕೋತ್ಸವದ “ಏಕತೆ’’ ಶೀರ್ಷಿಕೆಯ ವೇದಿಕೆ ಸಾಕ್ಷಿಯಾಗಿದೆ ಎಂದು ಸೋಮವಾರಪೇಟೆ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಹೇಮಂತ್ ಅಭಿಪ್ರಾಯ ವ್ಯಕ್ತಪಡಿಸಿದರು. ಪಟ್ಟಣದ ಸೇಕ್ರೆಡ್ ಹಾರ್ಟ್ ವಿದ್ಯಾಸಂಸ್ಥೆಯ ಆಂಗ್ಲ ಮಾದ್ಯಮ ಶಾಲೆ ಹಾಗೂ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸೇಕ್ರೆಡ್ ಹಾರ್ಟ್ ವಿದ್ಯಾಸಂಸ್ಥೆಯು ೫ ದಶಕಗಳಿಂದ ಪಟ್ಟಣ ವ್ಯಾಪ್ತಿಯ ೧೫-೨೦ ಹಳ್ಳಿಗಳ ಸಾವಿರಾರು ಮಕ್ಕಳಿಗೆ ವಿದ್ಯಾದಾನ ಮಾಡುತ್ತಾ ಶೈಕ್ಷಣಿಕ ಮನೋದಾರ್ಢ್ಯತೆ ಮೂಡಿಸಿ ಅತ್ಯುತ್ತಮ ಫಲಿತಾಂಶ ಪಡೆದು ರಾಜ್ಯದಲ್ಲೇ ಹೆಸರು ಮಾಡಿದೆ. ಇದು ವಿದ್ಯಾರ್ಥಿಗಳಲ್ಲಿ ಮೌಲ್ಯ, ಶಿಸ್ತು, ಶ್ರದ್ಧೆ, ಪರಿಪಕ್ವತೆಯ ಅರಿವು ಮೂಡಿಸುತ್ತಿದೆ. ಸ್ವಯಂ ಶಿಸ್ತನ್ನು ಮೈಗೂಡಿಸಿಕೊಳ್ಳುವ ವಿದ್ಯಾರ್ಥಿಗಳಿಗೆ ಶಿಕ್ಷಕರ ಬದ್ಧತೆ ಆದರ್ಶವಾಗಿದ್ದು ಗುರಿ ಸಾಧಿಸುವ ಛಲ ಮೂಡಿಸುತ್ತಿದೆ. ಪೋಷಕರು ಸಹ ಮಕ್ಕಳಲ್ಲಿ ಆರೋಗ್ಯ ಹಾಗೂ ಪರಿಸರ ಕಾಳಜಿಯನ್ನು ಮೂಡಿಸಬೇಕು ಎಂದು ಕರೆ ನೀಡಿದರು.

೧೦ನೇ ತರಗತಿ ಹಾಗೂ ಪಿಯು ಪರೀಕ್ಷೆಗಳಲ್ಲಿ ರಾಜ್ಯಮಟ್ಟದಲ್ಲಿ ಉತ್ತಮ ಫಲಿತಾಂಶ ಪಡೆದ ವಿದ್ಯಾರ್ಥಿಗಳಾದ ಜನಿತಾ, ಪೂರ್ವಿ, ಇತರ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಗ್ರಾಮೀಣ ಶಾಲೆಯೊಂದನ್ನು ಮಾದರಿ ಶಾಲೆಯಾಗಿ ರೂಪಿಸುತ್ತಾ ರಾಜ್ಯ, ರಾಷ್ಟç ಹಾಗೂ ಅಂರ‍್ರಾಷ್ಟೀಯ ಮಟ್ಟದಲ್ಲಿ ಖ್ಯಾತರಾಗಿರುವ ಮುಳ್ಳೂರು ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕ್ರೀಯಾಶೀಲ ಕಾಯಕ ಯೋಗಿ ಶಿಕ್ಷಕ ಸಿ.ಎಸ್. ಸತೀಶ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಮೈಸೂರಿನ ಸೆಂಟ್ ಥೋಮಸ್ ವಿದ್ಯಾಸಂಸ್ಥೆ ಅಧ್ಯಕ್ಷ ರೆವೆರೆಂಡ್ ಫಾದರ್ ಡಾ. ಆಗಸ್ಟಿನ್ ಪೈಮಪಳ್ಳಿ ಸಿಮಿ ಮಾತನಾಡಿ, ಏಕತೆಯ ಮನೋಭಾವ ಮೊದಲಿಗೆ ಮನೆಯಿಂದಲೇ ಆರಂಭವಾಗಬೇಕು. ಅಧಿಕ ಕೆಲಸದ ಹೊರೆಯ ಜತೆಗೆ ಬದ್ಧತೆಯಲ್ಲಿ ಕಾರ್ಯ ನಿರ್ವಹಿಸುತ್ತಾ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಶಿಕ್ಷಕರಿಗೆ ಪೋಷಕರು ಕೃತಜ್ಞರಾಗಿರಬೇಕು ಎಂದರು. ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ ಹರೀಶ್, ದುಂಡಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸತ್ಯವತಿ ದೇವರಾಜ್, ಸಹ ಶಿಕ್ಷಣಾಧಿಕಾರಿ ಹೆಚ್.ಆರ್. ಶೇಖರ್, ಸಮೂಹ ಸಂಪನ್ಮೂಲ ವ್ಯಕ್ತಿ ಸಿ.ಕೆ. ದಿನೇಶ್, ವಿದ್ಯಾಸಂಸ್ಥೆ ವ್ಯವಸ್ಥಾಪಕ ಫಾದರ್ ಡಾ.ಫ್ರಾನ್ಸಿಸ್ ಸಿ.ಸಿ. ಸಿಮಿ ಹಾಗೂ ಪ್ರಾಂಶುಪಾಲ ಫಾದರ್ ಸಬಾಸ್ಟಿನ್ ಮೈಕೆಲ್ ಸಿಮಿ ಉಪಸ್ಥಿತರಿದ್ದರು.

ವಿದ್ಯಾಸಂಸ್ಥೆ ಪ್ರಾಂಶುಪಾಲ ಫಾದರ್ ಸಬಾಸ್ಟಿನ್ ಮೈಕೆಲ್ ಸ್ವಾಗತಿಸಿದರು. ಶಿಕ್ಷಕ ಗುರುಬಸಪ್ಪ ವಾರ್ಷಿಕ ವರದಿ ವಾಚಿಸಿದರು. ಶಿಕ್ಷಕಿಯರಾದ ನೇತ್ರಾವತಿ, ಯಶೋದಾ ಇತರರು ಕಾರ್ಯಕ್ರಮ ನಿರ್ವಹಿಸಿದರು. ಉಪನ್ಯಾಸಕಿ ರೋಹಿಣಿ ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳು ನೃತ್ಯ ರೂಪಕ, ನಾಟಕ, ಗಾಯನ ಇತ್ಯಾದಿ ಕಾರ್ಯಕ್ರಮಗಳನ್ನು ಪ್ರದರ್ಶಿಸಿ ಮನರಂಜಿಸಿದರು.