* ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿದ ಶಾಸಕರು
* ಕಾಲ್ನಡಿಗೆಯಲ್ಲಿ ನಗರ ಪ್ರದಕ್ಷಿಣೆ * ಸಮಸ್ಯೆ ಬಗ್ಗೆ ಅವಲೋಕನ
ಗೋಣಿಕೊಪ್ಪಲು, ಡಿ. ೨೫: ದ.ಕೊಡಗಿನ ಪ್ರಮುಖ ಪಟ್ಟಣವಾದ ಗೋಣಿಕೊಪ್ಪ ನಗರ ದಿನದಿಂದ ದಿನಕ್ಕೆ ವೇಗವಾಗಿ ಬೆಳೆಯುತ್ತಿದ್ದಂತೆಯೇ ವಾಹನ ದಟ್ಟಣೆಯೂ ಕೂಡಾ ಹೆಚ್ಚಾಗುತ್ತಿದೆ.
ಪ್ರವಾಸಿಗರು ಕೂಡ ಹೆಚ್ಚಾಗಿ ಆಗಮಿಸುತ್ತಿರುವುದರಿಂದ ವಿಶೇಷವಾಗಿ ವಾರದ ಶನಿವಾರ ಹಾಗೂ ಭಾನುವಾರ, ಹಬ್ಬದ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಾಹನ ದಟ್ಟಣೆ ಕಂಡುಬರುತ್ತಿದೆ. ಗೋಣಿಕೊಪ್ಪ ಪೊಲೀಸರು ದಿನಪೂರ್ತಿ ಟ್ರಾಫಿಕ್ ನಿವಾರಿಸುದೇ ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ.
ಪ್ರಮುಖವಾಗಿ ನಗರದ ಪೊನ್ನಂಪೇಟೆ, ಪಾಲಿಬೆಟ್ಟ, ಬೈಪಾಸ್ ಜಂಕ್ಷನ್ ನಲ್ಲಿ ಟ್ರಾಫಿಕ್ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು ನಗರದಲ್ಲಿ ಸಾಲು,ಸಾಲು ವಾಹನಗಳು ಕಂಡು ಬರುತ್ತಿವೆ.
ಇದನ್ನು ಗಂಭೀರವಾಗಿ ಪರಿಗಣಿಸಿದ ಕ್ಷೇತ್ರದ ಶಾಸಕ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ. ಎಸ್.ಪೊನ್ನಣ್ಣ, ಹಿರಿಯ ಪೊಲೀಸ್ ಅಧಿಕಾರಿ ಹಾಗೂ ಪ್ರಮುಖ ಸಂಘ ಸಂಸ್ಥೆಗಳೊAದಿಗೆ ತುರ್ತು ಸಭೆ ನಡೆಸಿ ಮಾಹಿತಿ ಪಡೆದರು.
ಅಲ್ಲದೇ ಸ್ವತಃ ರಸ್ತೆಗಿಳಿದ ಶಾಸಕ ಎ.ಎಸ್.ಪೊನ್ನಣ್ಣ ಪೊನ್ನಂಪೇಟೆ ರಸ್ತೆ ಜಂಕ್ಷನ್ ನಿಂದ ಬೈಪಾಸ್ ಜಂಕ್ಷನ್ ತನಕ ನಡೆದು ವಾಸ್ತವ ಪರಿಸ್ಥಿತಿ ಅವಲೋಕನ ಮಾಡಿದರು.
ಬೈಪಾಸ್ ರಸ್ತೆಯಿಂದ ನೇರವಾಗಿ, ಮಸೀದಿ ರಸ್ತೆಯ ಮೂಲಕ ಹರಿಯುವ ಕೀರೆಹೊಳೆಗೆ ಸೇತುವೆ ನಿರ್ಮಾಣದ ಬಗ್ಗೆ ಪರಿಶೀಲನೆ ನಡೆಸಿದರು.
ಕಳೆದ ೪೦ ವರ್ಷಗಳ ಹಿಂದೆ ಈ ಭಾಗದಲ್ಲಿ ಸೇತುವೆ ನಿರ್ಮಾಣ ಮಾಡಲಾಗಿತ್ತು ಎಂದು ಗ್ರಾಮ ಪಂಚಾಯಿತಿ ಸದಸ್ಯ ಕುಲ್ಲಚಂಡ ಪ್ರಮೋದ್ ಗಣಪತಿ ಶಾಸಕರ ಗಮನ ಸೆಳೆದರು.
ಸ್ಥಳದಿಂದ ದೂರವಾಣಿ ಮೂಲಕ ಲೋಕೋಪಯೋಗಿ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಮಾತನಾಡಿದ ಶಾಸಕ ಪೊನ್ನಣ್ಣ ಸೇತುವೆ ನಿರ್ಮಾಣದ ಬಗ್ಗೆ ನೀಲ ನಕ್ಷೆ ತಯಾರಿಸಲು ನಿರ್ದೇಶನ ನೀಡಿದರು. ನಂತರ ಬೈಪಾಸ್ ರಸ್ತೆ ಜಂಕ್ಷನ್‌ನಲ್ಲಿ ಕೆಲ ಕಾಲ ನಿಂತು ಟ್ರಾಫಿಕ್ ಸಮಸ್ಯೆಗಳ ಬಗ್ಗೆ ಖುದ್ದು ವೀಕ್ಷಣೆ ಮಾಡಿದರು.
ಸ್ಥಳದಲ್ಲಿದ್ದ ವೀರಾಜಪೇಟೆ ಡಿವೈಎಸ್ಪಿ ಮೋಹನ್ ಕುಮಾರ್ ಅವರಿಗೆ ಸಲಹೆ ನೀಡಿದರು. ರಸ್ತೆ ಬದಿಯಲ್ಲಿ ನಿಯಮ ಮೀರಿ ನಿಲುಗಡೆ ಮಾಡುವ ವಾಹನಗಳ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸ್ಪಷ್ಟ ಸೂಚನೆ ನೀಡಿದರು.
ಶಾಸಕರು ನೋಡ, ನೋಡುತ್ತಿದ್ದಂತೆಯೇ ಪೊನ್ನಂಪೇಟೆ, ಗೋಣಿಕೊಪ್ಪ ಭಾಗದಿಂದ ವಾಹನಗಳು ಬೈಪಾಸ್ ಜಂಕ್ಷನ್‌ನಲ್ಲಿ ಹೆಚ್ಚಾಗಿ ಆಗಮಿಸಿ ಟ್ರಾಫಿಕ್ ಸಮಸ್ಯೆ ಎದುರಾಯಿತು.
ಈ ವೇಳೆ ಗೋಣಿಕೊಪ್ಪ ಪೊಲೀಸ್ ಠಾಣೆಯ ಎಸ್.ಐ. ಖುದ್ದಾಗಿ ನಿಂತು ಟ್ರಾಫಿಕ್ ವ್ಯವಸ್ಥೆ ಸುಲಲಿತವಾಗಿ ಮಾಡಿದರು.
ನಗರದ ಕಾಮತ್ ನವಮಿ ಸಭಾಂಗಣದಲ್ಲಿ ಆಯೋಜನೆಗೊಂಡಿದ್ದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಎ.ಎಸ್. ಪೊನ್ನಣ್ಣ, ಗೋಣಿಕೊಪ್ಪ ನಗರದ ಟ್ರಾಫಿಕ್ ಸಮಸ್ಯೆ ನಿವಾರಣೆಗೆ ನಾಗರಿಕರ ಸಹಕಾರ ಅತ್ಯಗತ್ಯ. ಎಲ್ಲೆಂದರಲ್ಲಿ ವಾಹನ ನಿಲುಗಡೆ, ಅಂಗಡಿ ಮುಂದೆ ನಿಂತು ವಾಹನದಲ್ಲಿಯೇ ಕುಳಿತು ಸಾಮಗ್ರಿಗಳ ಖರೀದಿ ಮಾಡುತ್ತಿರುವುದು ಕೂಡ ಟ್ರಾಫಿಕ್ ಸಮಸ್ಯೆಗೆ ಒಂದು ಕಾರಣವಾಗುತ್ತಿದೆ.
ನಿಗದಿತ ಸ್ಥಳದಲ್ಲಿ ವಾಹನ ನಿಲುಗಡೆ ಆಗುತ್ತಿಲ್ಲ. ಎಲ್ಲೆಂದರಲ್ಲಿ ವಾಹನಗಳ ಪಾರ್ಕಿಂಗ್ ಆಗುತ್ತಿರುವ ಕಾರಣ ಸಮಸ್ಯೆ ಗಂಭೀರವಾಗಿದೆ. ಇವುಗಳನ್ನು ಹತೋಟಿಗೆ ತರಲು ಪೋಲಿಸರು ನಿಯಮದಂತೆ ಕ್ರಮ ಜರುಗಿಸಬೇಕು, ಅಗತ್ಯ ಬಿದ್ದಾಗ ದಂಡ ವಿಧಿಸಬೇಕು, ನಿಯಮಗಳನ್ನು ಮೀರಿ ವಾಹನ ಪಾರ್ಕಿಂಗ್ ಮಾಡುವ ವಾಹನಗಳಿಗೆ ಲಾಕ್ ಅಳವಡಿಸಬೇಕು, ಟ್ರಾಫಿಕ್ ಸಮಸ್ಯೆ ನಿವಾರಣೆ ಮಾಡಲು ಸ್ವಯಂ ಸೇವಕರನ್ನು ನಿಯೋಜನೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ವೀರಾಜಪೇಟೆ ಡಿವೈಎಸ್ಪಿ ಮೋಹನ್ ಕುಮಾರ್ ಮಾತನಾಡಿ ಗೋಣಿಕೊಪ್ಪ ನಗರದ ಟ್ರಾಫಿಕ್ ಸಮಸ್ಯೆ ಬಗ್ಗೆ ವಿವರ ನೀಡಿದರು. ಪಾರ್ಕಿಂಗ್ ಪ್ರದೇಶದಲ್ಲಿ ಮಾರ್ಕಿಂಗ್ ವ್ಯವಸ್ಥೆ, ಏಕ ಮುಖ ಸಂಚಾರದ ಬಗ್ಗೆ ಪ್ರಸ್ತಾಪ ಮಾಡಿದರು.
ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಕಡೆಮಾಡ ಸುನೀಲ್ ಮಾದಪ್ಪ ಮಾತನಾಡಿ, ಗೋಣಿಕೊಪ್ಪ ನಗರದಲ್ಲಿ ಅಷ್ಟಾಗಿ ಟ್ರಾಫಿಕ್ ಇರುವುದಿಲ್ಲ. ನಿಯಮ ಉಲ್ಲಂಘನೆ ಮಾಡುವುದರಿಂದ ಸಮಸ್ಯೆ ಎದುರಾಗಿದೆ. ಶನಿವಾರ, ಭಾನುವಾರದಂದು ವಾಹನ ದಟ್ಟಣೆ ಕಂಡುಬರುತ್ತದೆ. ಅಡ್ಡಾದಿಡ್ಡಿ ಆಟೋಗಳ ಓಡಾಟ, ರಸ್ತೆ ಬದಿಯಲ್ಲಿ ವ್ಯಾಪಾರ, ವಾಹನಗಳಲ್ಲಿ ವ್ಯಾಪಾರ ನಡೆಸುವುದರಿಂದ ಸಮಸ್ಯೆ ಆಗುತ್ತಿದೆ. ಬೈಪಾಸ್ ಜಂಕ್ಷನ್, ಪೊನ್ನಂಪೇಟೆ ಹಾಗೂ ಪಾಲಿಬೆಟ್ಟ ರಸ್ತೆ ಜಂಕ್ಷನ್‌ನಲ್ಲಿ ಸಮಸ್ಯೆ ಜಾಸ್ತಿ ಇದೆ. ಅಗತ್ಯ ಸಿಬ್ಬಂದಿ ನಿಯೋಜನೆ ಮಾಡಿದ್ದಲ್ಲಿ ಸಮಸ್ಯೆ ಪರಿಹಾರ ಕಾಣಲಿದೆ ಎಂದರು.
ಗ್ರಾ.ಪA. ಸದಸ್ಯ ಬಿ.ಎನ್.ಪ್ರಕಾಶ್ ಮಾತನಾಡಿ, ವಾಹನ ನಿಲುಗಡೆಗೆ ಮಾರ್ಕಿಂಗ್ ವ್ಯವಸ್ಥೆ ಮಾಡುವ ಮೂಲಕ ಸಮಸ್ಯೆಗೆ ಪರಿಹಾರ ಕಾಣಬಹುದಾಗಿದೆ ಎಂದರು.
ಚೇAಬರ್ ಆಪ್ ಕಾಮರ್ಸ್ನ ಉಪಾಧ್ಯಕ್ಷ ಪೊನ್ನಿಮಾಡ ಸುರೇಶ್, ಉದ್ಯಮಿ ಪುರುಷೋತ್ತಮ ಗ್ರಾ.ಪಂ. ಸದಸ್ಯ ಕುಲ್ಲಚಂಡ ಪ್ರಮೋದ್ ಗಣಪತಿ, ಎಂ. ಮಂಜುಳ ಸೇರಿದಂತೆ ಇನ್ನಿತರ ಪ್ರಮುಖರು ಹಲವು ಉಪಯುಕ್ತ ಸಲಹೆ ನೀಡಿದರು.
ಗೋಣಿಕೊಪ್ಪ ಠಾಣಾಧಿಕಾರಿ ರೂಪದೇವಿ ಬೀರಾದಾರ್ ಇಲ್ಲಿನ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿದರು, ನಿಯಮಗಳನ್ನು ಪಾಲಿಸಿ ಟ್ರಾಫಿಕ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಲಾಗುತ್ತದೆ ಎಂದರು.
ಸಭೆಯಲ್ಲಿ ಗ್ರಾ.ಪಂ. ಅಧ್ಯಕ್ಷ ಮನ್ನಕ್ಕಮನೆ ಸೌಮ್ಯಬಾಲು, ಸಿಪಿಐ ಗೋವಿಂದರಾಜು, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೀದೆರಿರ ನವೀನ್, ಪ್ರಮುಖರಾದ ಆಲೀರ ರಶೀದ್, ಅಬ್ದುಲ್ ಸಮ್ಮದ್, ಖಾಲಿದ್ ಚೇಂಬರ್ ಆಫ್ ಕಾಮರ್ಸ್ನ ಕಾರ್ಯದರ್ಶಿ ಗಣೇಶ್ ರೈ, ಉಪಾಧ್ಯಕ್ಷ ಪ್ರಭಾಕರ್ ನೆಲ್ಲಿತ್ತಾಯ, ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
- ಹೆಚ್.ಕೆ.ಜಗದೀಶ್