ಸಿದ್ದಾಪುರ, ಡಿ. ೨೫: ಹಲವು ವರ್ಷಗಳಿಂದ ಮೂಲಸೌಕರ್ಯ ವಂಚಿತರಾಗಿ ಬದುಕು ಸಾಗಿಸುತ್ತಿರುವ ಆದಿ ದ್ರಾವಿಡ ಸಮಾಜದವರ ಬೇಡಿಕೆಯನ್ನು ಸರ್ಕಾರ ಹಾಗೂ ಜನಪ್ರತಿನಿಧಿಗಳು, ಅಧಿಕಾರಿಗಳು ಕೂಡಲೇ ಈಡೇರಿಸಬೇಕೆಂದು ಆದಿ ದ್ರಾವಿಡ ಸಮಾಜದ ಜಿಲ್ಲಾಧ್ಯಕ್ಷ ಎಚ್.ಎಂ. ಸೋಮಪ್ಪ ಒತ್ತಾಯಿಸಿದರು.

ಸಿದ್ದಾಪುರ ಎಸ್‌ಎನ್‌ಡಿಪಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಆದಿದ್ರಾವಿಡ ಸಮಾಜ ಸೇವಾ ಸಂಘದ ವೀರಾಜಪೇಟೆ ಕ್ಷೇತ್ರದ ಕುಂದು ಕೊರತೆಗಳ ಸಭೆಯಲ್ಲಿ ಮಾತನಾಡಿ, ಇಂದು ಜಿಲ್ಲೆಯಲ್ಲಿರುವ ಸಮುದಾಯದ ಜನರು ಜಾತಿ ಪ್ರಮಾಣ ಪತ್ರ ಇಲ್ಲದೆ ಅಲೆದಾಡುತ್ತಿದ್ದು, ಹಲವು ವರ್ಷಗಳಿಂದ ಮನವಿ ಸಲ್ಲಿಸಿದರೂ ಕಡೆಗಣಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ನಿವೇಶನ ರಹಿತರಿಗೆ ನಿವೇಶನ ಗುರುತಿಸಿ ನೀಡಬೇಕು ಪ್ರಸ್ತುತ ಸರಕಾರದಿಂದ ಘೋಷಿಸಲಾದ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಅಭಿವೃದ್ಧಿ ಶೀಲ ಸಾಲ ಸೌಲಭ್ಯ ಪಡೆಯಲು ಅಧಿಕಾರಿಗಳು ತಾರತಮ್ಯ ಮಾಡುತ್ತಿದ್ದಾರೆ. ಜಿಲ್ಲೆಯ ಎರಡು ಕ್ಷೇತ್ರಗಳಿಂದ ೬೦೦ಕ್ಕೂ ಅಧಿಕ ಮಂದಿ ಸಾಲಸೌಲಭ್ಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ಪಂಚಾಯಿತಿಗಳಲ್ಲಿ ಶೇ. ೨೫ ಅನುದಾನವು ಆದಿ ದ್ರಾವಿಡ ಸಮುದಾಯದ ಜನರಿಗೆ ಸಮರ್ಪಕವಾಗಿ ತಲುಪುತ್ತಿಲ್ಲ ಎಂದು ಹೇಳಿದರು. ಮುಂದಿನ ದಿನಗಳಲ್ಲಿ ಹೋರಾಟದ ಮೂಲಕ ಸೌಲಭ್ಯ ಪಡೆಯಲು ಸಂಘಟನೆ ಮುಂದಾಗಲಿದ್ದು, ಸಂಘಟನೆಯನ್ನು ಬಲಪಡಿಸುವಂತೆ ಕರೆ ನೀಡಿದರು.

ವೀರಾಜಪೇಟೆ ತಾಲೂಕು ಆದಿ ದ್ರಾವಿಡ ಸಮಾಜ ಸೇವಾ ಸಂಘದ ವಿಜಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಮುದಾಯದ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯಿತು.

ರಾಜ್ಯ ಆದಿ ದ್ರಾವಿಡ ಸಮಾಜ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ಪಿ.ವಿ. ಜಯಪ್ರಕಾಶ್, ದಕ್ಷಿಣ ಕನ್ನಡ ಜಿಲ್ಲೆಯ ಆದಿ ದ್ರಾವಿಡ ಸಮಾಜ ಸೇವಾ ಸಂಘದ ಅಧ್ಯಕ್ಷ ರಘುನಾಥ್ ಅತ್ತಾವರ, ಹಾಸನ ಆದಿ ದ್ರಾವಿಡ ಸಮಾಜ ಸೇವಾ ಸಂಘದ ರಾಜ್ಯ ಗೌರವ ಅಧ್ಯಕ್ಷ ಶಂಕರ್, ಚೈತನ್ಯ ಸೇವಾ ಸಹಕಾರ ಸಂಘ ಬ್ಯಾಂಕ್‌ನ ಅಧ್ಯಕ್ಷ ಕೃಷ್ಣ ಸೆಟ್ಟರ್ ಪೇಟೆ ಹಾಗೂ ಪ್ರಬಂಧಕ ನಾಗರಾಜ್, ದಕ್ಷಿಣ ಕನ್ನಡ ಆದಿ ದ್ರಾವಿಡ ಸಮಾಜ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ಆನಂದ್ ಅತ್ತಾವರ, ವೀರಾಜಪೇಟೆ ಆದಿ ದ್ರಾವಿಡ ಸಮಾಜ ಸೇವಾ ಸಂಘದ ಗೌರವ ಅಧ್ಯಕ್ಷ ಸೀನಪ್ಪ, ಹಾಸನ ಜಿಲ್ಲಾ ಕಾರ್ಯದರ್ಶಿ ರುಕ್ಮ, ಕೊಡಗು ಜಿಲ್ಲಾ ಉಪಾಧ್ಯಕ್ಷ ಪಿ.ಎಲ್.ಸುರೇಶ್, ತಾಲೂಕು ಕಾರ್ಯದರ್ಶಿ ಲಲಿತ ಉಪಸ್ಥಿತರಿದ್ದರು.