ಏಸು ಕ್ರಿಸ್ತನು ಈ ಲೋಕಕ್ಕೆ ಜನಿಸಿ ಬರುವಾಗ ಆತನಿಗೆ ಈ ಭೂಮಿಯ ಮೇಲೆ ಸ್ಥಳವಿರಲಿಲ್ಲ. ಬಡವರಲ್ಲಿ ಬಡವನಾಗಿ, ದೀನರಲ್ಲಿ ದೀನನಾಗಿ ದನದ ಕೊಟ್ಟಿಗೆಯಲ್ಲಿ ಹುಲ್ಲಿನ ಗೋದಲಿಯಲ್ಲಿ ಕ್ರಿಸ್ತನ ಜನನವಾಯಿತು. ಕ್ರಿಸ್ತನು ರಾಜಾದಿ ರಾಜನಾಗಿ ಅರಮನೆಯಲ್ಲಿ ಶ್ರೀಮಂತರ ಮನೆಯಲ್ಲಿ ಜನಿಸಲಿಲ್ಲ. ಬದಲಾಗಿ ಏಸು ಆತನು ದೇವರ ಆಲೋಚನೆಯಂತೆ ದೇವರ ಉದ್ದೇಶವನ್ನು ನೆರವೇರಿಸುವುದಕ್ಕಾಗಿ ಭೂಮಿಯ ಮೇಲೆ ಜನಿಸಿ ಬಂದನು.
ಆಕಾಶದಲ್ಲಿ ಹಾರಾಡುವ ಪಕ್ಷಿಗಳಿಗೆ ಗೂಡುಗಳಿವೆ. ಕಾಡಿನಲ್ಲಿ ವಾಸಿಸುವ ನರಿಗಳಿಗೆ ಗುಹೆಗಳಿವೆ. ದೇವ ಕುಮಾರನಿಗೆ ಭೂಮಿಯ ಮೇಲೆ ತಲೆ ಇಟ್ಟು ವಿಶ್ರಾಂತಿ ಪಡೆಯಲು ಕೂಡ ಸ್ಥಳವಿಲ್ಲ ಎಂಬುದಾಗಿ ಪರಿಶುದ್ದ ಬೈಬಲ್ನಲ್ಲಿ ಉಲ್ಲೇಖವಿರುತ್ತದೆ.
ಏಸು ಕ್ರಿಸ್ತನು ಭೂಮಿಯ ಮೇಲೆ ಜನಿಸಿದಾಗ ಆಕಾಶದಲ್ಲಿ ಒಂದು ಭವ್ಯ ಬೆಳಕಿನಿಂದ ಕೂಡಿದ ವಿಶೇಷ ನಕ್ಷತ್ರವು ಗೋಚರಿಸುತ್ತದೆ. ಈ ನಕ್ಷತ್ರವು ಕ್ರಿಸ್ತನ ಜನನಕ್ಕೆ ಸಾಕ್ಷಿಯಾಗುತ್ತದೆ, ಮಾತ್ರವಲ್ಲದೆ ಮೂಡಣ ದೇಶದ ಜೋಯಿಸರು ಕೂಡ ಈ ನಕ್ಷತ್ರದ ಆಧಾರದ ಮೇಲೆ ಏಸು ಕಂದನು ಜನಿಸಿದ ಸ್ಥಳಕ್ಕೆ ಬರುತ್ತಾರೆ. ಆ ಕಾಲದಲ್ಲಿ ಮಧ್ಯರಾತ್ರಿಯ ಚುಮುಚುಮು ಚಳಿಯಲ್ಲಿ ತಮ್ಮ ಕುರಿಯ ಮಂದೆಯನ್ನು ಕಾಯುವ ಕುರುಬರಿಗೆ ಏಸು ಕ್ರಿಸ್ತನ ಜನನದ ಶುಭ ಸಂದೇಶವು ಪರಿಶುದ್ಧ ದೇವ ದೂತರ ಮೂಲಕ ವಾಣಿಯಾಗುತ್ತದೆ. ಅದೇನೆಂದರೆ ಈ ದಿನ ನಿಮಗಾಗಿ ಡೇವಿಡ್ ರಾಜನ ಊರಿನಲ್ಲಿ ಒಬ್ಬ ರಕ್ಷಕನು ಹುಟ್ಟಿರುತ್ತಾನೆ. ಆತನನ್ನು ಗುರುತಿಸೋದಕ್ಕೆ ನಿಮಗೆ ಗುರುತೇನೆಂದರೆ ಬಟ್ಟೆಯಲ್ಲಿ ಸುತ್ತಿದ ಒಂದು ಮಗು ದನದ ಕೊಟ್ಟಿಗೆಯಲ್ಲಿ ಹುಲ್ಲಿನ ಗೋದಲಿಯಲ್ಲಿ ಮಲಗಿರುವುದನ್ನು ಕಾಣುವಿರಿ ಎಂಬುದಾಗಿ ಮಾತ್ರವಲ್ಲದೆ ಆ ದೇವದೂತರು ಈ ರೀತಿ ನುಡಿಯುತ್ತಾರೆ. ಪರಲೋಕದಲ್ಲಿ ದೇವರಿಗೆ ಮಹಿಮೆ ಭೂಲೋಕದಲ್ಲಿ ಮನುಷ್ಯರೊಳಗೆ ಸಮಾಧಾನ ಎಂಬುದಾಗಿ ಕ್ರಿಸ್ಮಸ್ ಆಚರಣೆಗಾಗಿ ನವೆಂಬರ್ ತಿಂಗಳ ಕೊನೆಯ ವಾರದಿಂದಲೇ ಸಿದ್ಧತೆಯನ್ನು ಮಾಡಿಕೊಂಡಿರುತ್ತೇವೆ. ಮುಖ್ಯವಾಗಿ ನಮ್ಮ ಮನೆಗಳನ್ನು ಸ್ವಚ್ಛಗೊಳಿಸುತ್ತೇವೆ. ಎಲ್ಲಾ ಕಾರ್ಯಕ್ರಮಗಳ ಪಟ್ಟಿಯನ್ನು ಮಾಡಿ ನಮ್ಮ ಆರಾಧನೆ ಆಚಾರ ನಿಯಮ ನಿಷ್ಠೆಯೊಂದಿಗೆ ಏಸು ಕ್ರಿಸ್ತನ ಶುಭ ಸಂದೇಶವನ್ನು ಮನೆ ಮನೆಗಳಿಗೆ ಸಾರುತ್ತಾ ಭಜನೆ, ಸಂಗೀತದೊAದಿಗೆ ಕ್ರಿಸ್ತನನ್ನು ಮಹಿಮೆಪಡಿಸುತ್ತಿದ್ದೇವೆ. ಆದರೆ ಪರಲೋಕದಲ್ಲಿರುವ ನಮ್ಮ ದೇವರಿಗೆ ಮಹಿಮೆಯಾಗಬೇಕಾದರೆ ನಮ್ಮ ಮನಸ್ಸು ಸಮಾಧಾನದಿಂದ ಕೂಡಿರಬೇಕು.
ಕ್ರಿಸ್ಮಸ್ ಹಬ್ಬದ ಈ ಶುಭದಿನದಲ್ಲಿ ನಮ್ಮೆಲ್ಲರ ಮನಸ್ಸುಗಳಲ್ಲಿ ದಿವ್ಯ ಶಾಂತಿ ಸಮಾಧಾನ, ಸಂತೋಷ ನೆಲೆಸಬೇಕಾದರೆ, ನಮ್ಮ ಮನೆಗಳನ್ನು ಶುಚಿಗೊಳಿಸಿದಂತೆಯೇ ನಮ್ಮ ಹೃದಯದ ಮನಸ್ಸಿನಲ್ಲಿ ಅಂಟಿಕೊAಡಿರುವ ಅಸೂಯೆ, ದ್ವೇಷ, ವೈರತ್ವ, ಕೋಪ, ಅಕ್ರಮ, ಅನ್ಯಾಯವೆಂಬ ಸ್ವಾರ್ಥ ಗುಣಗಳ ಪಾಪದ ಕೊಳೆಯ ಮಲಿನತ್ವವನ್ನು ನಮ್ಮ ಹೃದಯದಿಂದ ಮನಸ್ಸಿನಿಂದ ತೊಡೆದು ಹಾಕಿ ಶುದ್ಧ ಮನಸ್ಸಿನಿಂದ ಚರ್ಚ್ ದೇವಾಲಯಗಳಿಗೆ ಹೋಗೋಣ. ದೇವಾಲಯಕ್ಕೆ ಹೋಗುವಾಗ ನಮ್ಮ ಹೆಜ್ಜೆಗಳನ್ನು ನಮ್ಮ ನಡತೆಗಳನ್ನು ಗಮನಿಸುತ್ತಾ ನಮ್ಮನ್ನು ಪರೀಕ್ಷಿಸಿಕೊಳ್ಳೋಣ.
ನಮ್ಮ ತಪ್ಪುಗಳಿಗಾಗಿ ಪಶ್ಚಾತ್ತಾಪಪಡೋಣ. ದೇವರು ನಮ್ಮ ತಪ್ಪುಗಳನ್ನು ಕ್ಷಮಿಸುತ್ತಾನೆ. ದೇವರಿಂದ ನಮ್ಮ ತಪ್ಪುಗಳು ಕ್ಷಮಿಸಲ್ಪಟ್ಟಾಗ ನಮ್ಮ ಹೃದಯದಲ್ಲಿ ನಮ್ಮ ಮನಸ್ಸಿನಲ್ಲಿ ದಿವ್ಯ ಸಮಾಧಾನ ಸಂತೋಷವನ್ನು ಹೊಂದುತ್ತೇವೆ. ನಮ್ಮೆಲ್ಲರ ಜೀವನದಲ್ಲಿ ಒಂದು ಬದಲಾವಣೆಯ ಹೊಸತನವನ್ನು ಕಾಣುತ್ತೇವೆ. ಈ ರೀತಿಯಾಗಿ ಕ್ರಿಸ್ಮಸ್ ಹಬ್ಬದ ಈ ಶುಭ ದಿನದಲ್ಲಿ ನಮ್ಮೆಲ್ಲರ ಜೀವನದಲ್ಲಿ ಒಂದು ಬದಲಾವಣೆಯ ಜೀವಿತವನ್ನು ತಂದುಕೊಳ್ಳಲು ಪ್ರಯತ್ನಿಸೋಣ. ನಮ್ಮ ಹೃದಯದ ಮನಸ್ಸುಗಳನ್ನು ಶುದ್ಧೀಕರಿಸಿ ಮುಚ್ಚಿ ಹೋಗಿರುವ ಹೃದಯದ ಕರುಣೆಯ ಬಾಗಿಲನ್ನು ತೆರೆಯಲು ಪ್ರಯತ್ನಿಸೋಣ. ಅನಾಥ ಮಕ್ಕಳು, ದಿಕ್ಕಿಲ್ಲದವರು, ರೋಗಿಗಳು, ವಿಧವೆಯರು, ಕುರುಡರು, ಅಂಗವಿಕಲರು, ಬಡತನ ಹಿಂಸೆ ಕಷ್ಟದಿಂದ ಜೀವಿಸುತ್ತಿರುವವರಿಗೆ ತ್ಯಾಗದ ಮೂಲಕ ನಮ್ಮ ಸಹಾಯವನ್ನು ನೀಡಿ ಕತ್ತಲೆಯಲ್ಲಿ ಬೆಳಕು ಕೊಡುವ ದೀಪಗಳಂತೆ ಭೂಮಿಯ ಮೇಲೆ ಬೆಳಕಾಗಿ ಜೀವಿಸೋಣ.
- ಸ್ಟೀವನ್ ಬೆನಡಿಕ್ಟ್ ಫಿಲಿಫ್, ಕೂಡುಮಂಗಳೂರು ಮೊ: ೯೭೩೧೧೮೧೨೮೮