ಮಡಿಕೇರಿ, ಡಿ. ೨೪: ಕೊಡಗು ಕೆನಲ್ ಕ್ಲಬ್ ಪಾಲಿಬೆಟ್ಟ, ಕರ್ನಾಟಕ ಪಶುವೈದ್ಯರ ಸಂಘ, ಕೊಡಗು ಜಿಲ್ಲಾ ಘಟಕ ಮತ್ತು ಕೃಷಿ ವಿಜ್ಞಾನ ಕೇಂದ್ರ ಗೋಣಿಕೊಪ್ಪದ ಜಂಟಿ ಆಶ್ರಯದಲ್ಲಿ ತಾ. ೨೬ ರಂದು ಗೋಣಿಕೊಪ್ಪ ಸರಕಾರಿ ಶಾಲೆ ಮೈದಾನದಲ್ಲಿ ಬೆಳಿಗ್ಗೆ ೯ ಗಂಟೆಗೆ ೧೫ನೇ ವರ್ಷದ ಶ್ವಾನ ಪ್ರದರ್ಶನ ಆಯೋಜಿಸಲಾಗಿದೆ.
ನೋಂದಣಿ ಬೆಳಿಗ್ಗೆ ೯ ರಿಂದ ೧೧ ರವರೆಗೆ, ಉತ್ತಮ ಶ್ವಾನಗಳ ಆಯ್ಕೆ ಮತ್ತು ಬಹುಮಾನ ವಿತರಣೆ ೧೧ ರಿಂದ ಪ್ರಾರಂಭವಾಗಿ ಮಧ್ಯಾಹ್ನ ೧.೩೦ ಗಂಟೆವರೆಗೆ ನಡೆಯಲಿದೆ. ಪಾಲಿಬೆಟ್ಟ ಲಯನ್ಸ್ ಕ್ಲಬ್ ವತಿಯಿಂದ ಪ್ರದರ್ಶಿಸಲ್ಪಡುವ ಎಲ್ಲಾ ಶ್ವಾನಗಳಿಗೆ ಉಚಿತವಾಗಿ ಹುಚ್ಚು ನಾಯಿ ರೋಗ ನಿರೋಧಕ ಲಸಿಕೆ ನೀಡಲಾಗುತ್ತದೆ.
ಬಾರ್ಕ್ ಎನ್ ಬೈಟ್ಸ್, ಪೆಟ್ಶಾಪ್ ಗೋಣಿಕೊಪ್ಪ ಇವರು ಪ್ರದರ್ಶಿಸುವ ಎಲ್ಲಾ ಶ್ವಾನಗಳಿಗೆ ಜಂತು ನಾಶಕ ಔಷಧಿ ಮತ್ತು ಉತ್ತಮ ತಳಿಯ ಶ್ವಾನಗಳಿಗೆ ಬಹುಮಾನ ಪ್ರಾಯೋಜಿಸಿದ್ದಾರೆ. ವೀರಾಜಪೇಟೆಯ ಕುಲ್ಲಚಂಡ ಎಂ. ಪೂಣಚ್ಚ ಅವರು ತಮ್ಮ ಮಗಳಾದ ದಿವಂಗತ ಡಾ. ಕೆ.ಪಿ. ದೇಚಮ್ಮ ಸ್ಮರಣಾರ್ಥ ಪ್ರದರ್ಶನದಲ್ಲಿ ಆಯ್ಕೆಯಾಗುವ ಮೊದಲ ಉತ್ತಮ ೫ ಶ್ವಾನಗಳಿಗೆ ಬಹುಮಾನ ಪ್ರಾಯೋಜಿಸಿದ್ದಾರೆ.
ಅಂದು ಬೆಳಿಗ್ಗೆ ೧೧ ಗಂಟೆಗೆ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಕೊಡಗು ಕೆನಲ್ ಕ್ಲಬ್ ಅಧ್ಯಕ್ಷ ಕೆ.ಎಂ. ಅಪ್ಪಯ್ಯ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದು, ವೀರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಶ್ವಾನ ಪ್ರದರ್ಶನ ಉದ್ಘಾಟನೆ ಮಾಡಲಿದ್ದಾರೆ.
ಕುಪ್ಪಂಡ ಅಶೋಕ್ ಅಪ್ಪಣ್ಣ ಪ್ರದರ್ಶನದ ರಿಂಗನ್ನು ಉದ್ಘಾಟಿಸಲಿದ್ದಾರೆ. ಮೈಸೂರು ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ಕೆ.ಎನ್. ಬಸವರಾಜು, ಕರ್ನಾಟಕ ಪಶುವೈದ್ಯರ ಸಂಘ, ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಡಾ. ಕೆ.ಪಿ. ಅಯ್ಯಪ್ಪ, ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಉಪನಿರ್ದೇಶಕ ಡಾ. ಲಿಂಗರಾಜು ದೊಡ್ಡಮನಿ, ಕೆ.ವಿ.ಕೆ. ಪ್ರಬಾರ ಮುಖ್ಯಸ್ಥ ಡಾ. ಪ್ರಭಾಕರ್, ಕರುಣಾ ಪ್ರಾಣಿ ದಯಾ ಸಂಘದ ಅಧ್ಯಕ್ಷ ಡಾ. ಜಯರಾಮಯ್ಯ ಇವರುಗಳು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.