*ಗೋಣಿಕೊಪ್ಪ, ಡಿ. ೨೪: ಭಾರತ ಸರ್ಕಾರ ಗೃಹ ಮಂತ್ರಾಲಯ, ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ ಸಂಘಟನೆ, ಜಿಲ್ಲಾ ಯುವ ಒಕ್ಕೂಟ, ಕೂರ್ಗ್ ಪಬ್ಲಿಕ್ ಶಾಲೆ ಮತ್ತು ಪ್ರೀ ಯೂನಿವರ್ಸಿಟಿ ಕಾಲೇಜು ಸಹಯೋಗದಲ್ಲಿ ತಾ. ೨೬ ರಿಂದ ೩೧ ರವರೆಗೆ ಗೋಣಿಕೊಪ್ಪ ಕಾಪ್ಸ್ ಶಾಲೆಯಲ್ಲಿ ಕಾಶ್ಮೀರಿ ಯುವ ವಿನಿಮಯ ಕಾರ್ಯಕ್ರಮ ಅಯೋಜಿಸಲಾಗಿದೆ ಎಂದು ನೆಹರು ಯುವ ಕೇಂದ್ರ ದಕ್ಷಿಣ ಭಾರತ ವಲಯ ನಿರ್ದೇಶಕ ಎಂ.ಎನ್. ನಟರಾಜ್ ತಿಳಿಸಿದ್ದಾರೆ.
ಜಮ್ಮು-ಕಾಶ್ಮೀರದ ಪುಲ್ವಾಮ, ಬದಗಾಂ, ಬಾರಮುಲ್ಲ, ಕುಪ್ವಾರ, ಅನಂತ್ನಾಗ್, ಶ್ರೀನಗರ ಜಿಲ್ಲೆಗಳ ೧೨೦ ಯುವಕ, ಯುವತಿಯರು ಆಗಮಿಸಲಿದ್ದಾರೆ. ಇಲ್ಲಿಯ ಅಚಾರ-ವಿಚಾರ, ಕಲೆ, ಸಂಸ್ಕೃತಿ, ಉಡುಗೆ-ತೊಡುಗೆ, ಆಹಾರ ಪದ್ಧತಿ, ಜೀವನ ಶೈಲಿ, ಸರಕಾರದ ಯೋಜನೆಗಳ ಬಗ್ಗೆ ವಿಚಾರ ವಿನಿಮಯ ಮಾಡಿಕೊಡುವ ಉದ್ದೇಶ ಇದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ತಾ. ೨೬ ರಂದು ೫ ಗಂಟೆಗೆ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಬಿ. ನಾಗೇಂದ್ರ ಉದ್ಘಾಟಿಸಲಿದ್ದಾರೆ. ಶಾಸಕ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ, ಉಸ್ತುವಾರಿ ಸಚಿವ ಎನ್.ಎಸ್. ಬೋಸರಾಜು, ಸಂಸದ ಪ್ರತಾಪ್ ಸಿಂಹ, ಎಂಎಲ್ಸಿ ಸುಜಾ ಕುಶಾಲಪ್ಪ, ಮಡಿಕೇರಿ ಶಾಸಕ ಡಾ. ಮಂಥರ್ ಗೌಡ, ಎಂಎಲ್ಸಿ ಬೋಜೇಗೌಡ, ಯುವ. ಸಬಲೀಕರಣ, ಕ್ರೀಡಾ ಇಲಾಖೆ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ್ ಪ್ರಸಾದ್, ಕೂರ್ಗ್ ಅಕಾಡೆಮಿ ಫರ್ ಎಜುಕೇಷನ್ ಆಂಡ್ ಕಲ್ಪರ್ ಅಧ್ಯಕ್ಷ ಎಂ.ಡಿ. ನಂಜುAಡ ಪಾಲ್ಗೊಳ್ಳಲಿದ್ದಾರೆ. ತಾ. ೩೧ ರಂದು ನಡೆಯುವ ಸಮಾರೋಪದಲ್ಲಿ ಕರ್ನಾಟಕ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ವಿಧಾನ ಸಭಾಧ್ಯಕ್ಷ ಯು.ಟಿ. ಖಾದರ್ ಸೇರಿದಂತೆ ಪ್ರಮುಖರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಕೂರ್ಗ್ ಅಕಾಡೆಮಿ ಫಾರ್ ಎಜುಕೇಷನ್ ಆಂಡ್ ಕಲ್ಪರ್ ಅಧ್ಯಕ್ಷ ಎಂ.ಡಿ. ನಂಜುAಡ ಮಾತನಾಡಿ, ಗುಣಮಟ್ಟದ ನಿರ್ವಹಣೆಗೆ ಆಡಳಿತ ಮಂಡಳಿ ಒತ್ತು ನೀಡಿದೆ. ದೇಶದ ಕಲೆ, ಸಂಸ್ಕೃತಿ ವಿನಿಮಯಕ್ಕೆ ಆತಿಥ್ಯ ವಹಿಸಿರುವುದು ಹೆಮ್ಮೆಯ ವಿಚಾರ. ಉತ್ತಮ ಮೂಲಭೂತ ವ್ಯವಸ್ಥೆ, ವಸತಿ, ಶೌಚಗೃಹ, ಭದ್ರತೆ ಮೂಲಕ ಪ್ರೋತ್ಸಾಹ ನೀಡಲಾಗುವುದು. ಕ್ರೀಡೆ, ಸಾಂಸ್ಕೃತಿಕ ವೇದಿಕೆ, ಮೈದಾನದ ವ್ಯವಸ್ಥೆ ಕೂಡ ಪೂರಕವಾಗಿದೆ ಎಂದರು.
ಗೋಷ್ಠಿಯಲ್ಲಿ ಜಿಲ್ಲಾ ಯುವ ಒಕ್ಕೂಟ ಮಾಜಿ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ, ಆಪಟ್ಟೀರ ಟಾಟು ಮೊಣ್ಣಪ್ಪ, ಅಧ್ಯಕ್ಷ ಸುಕುಮಾರ್, ಸಲಹೆಗಾರ ಕಂದಾ ದೇವಯ್ಯ, ವೀರಾಜಪೇಟೆ ತಾಲೂಕು ಅಧ್ಯಕ್ಷೆ ಶೀಲಾ ಬೋಪಣ್ಣ, ಕಾಪ್ಸ್ ವಸತಿ ವ್ಯವಸ್ಥಾಪಕ ಚೊಟ್ಟಂಗಡ ಎಸ್. ಸೋಮಯ್ಯ ಇದ್ದರು.