ಪೊನ್ನಂಪೇಟೆ, ಡಿ. ೨೪: ೨೦೨೪ ರ ಏಪ್ರಿಲ್ ೨೭ ಮತ್ತು ೨೮ ರಂದು ಹಾತೂರು ಪ್ರೌಢಶಾಲಾ ಮೈದಾನದಲ್ಲಿ ನಡೆಯಲಿರುವ ಅಮ್ಮ ಕೊಡವ ಕ್ರಿಕೆಟ್ ನಮ್ಮೆ ಅಚ್ಚಿಯಂಡ ಕಪ್ನ ಲಾಂಛನ ಬಿಡುಗಡೆ ಕಾರ್ಯಕ್ರಮ ಪೊನ್ನಂಪೇಟೆ ತಾಲೂಕಿನ ಹಳ್ಳಿಗಟ್ಟು ಗ್ರಾಮದಲ್ಲಿರುವ ಅಚ್ಚಿಯಂಡ ಐನ್ಮನೆಯಲ್ಲಿ ನಡೆಯಿತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ವೀರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಅಚ್ಚಿಯಂಡ ಕಪ್ ಲಾಂಛನ ಅನಾವರಣಗೊಳಿಸಿದರು. ನಂತರ ಮಾತನಾಡಿದ ಅವರು ಈ ಮಣ್ಣಿಗಾಗಿ ಈ ಸಂಸ್ಕೃತಿಗಾಗಿ, ಸಮುದಾಯದವರು ಒಂದಾಗಬೇಕಾಗಿದೆ. ಸಣ್ಣ ಸಣ್ಣ ಸಮುದಾಯಗಳು ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಬಲ ಹೊಂದಬೇಕಾಗಿದ್ದು, ಈ ನಿಟ್ಟಿನಲ್ಲಿ ಸರ್ಕಾರ ನೀಡಿರುವ ಮೀಸಲಾತಿಯನ್ನು ಬಳಕೆ ಮಾಡಿಕೊಂಡು ಪ್ರಗತಿ ಸಾಧಿಸಬೇಕಾಗಿದೆ ಎಂದರು.
ಅಮ್ಮ ಕೊಡವ ಕ್ರಿಕೆಟ್ ಹಬ್ಬವಾಗಿ ಆಚರಣೆಯಾಗಲಿ. ಹೆಣ್ಣು ಮಕ್ಕಳಿಗೂ ಹೆಚ್ಚಿನ ಆದ್ಯತೆ ಸಿಗುವಂತಾಗಲಿ. ಈ ಕ್ರೀಡಾಕೂಟದಿಂದ ಪ್ರೀತಿ, ಸ್ನೇಹ, ಬಾಂಧವ್ಯಗಳು ಇನ್ನಷ್ಟು ವೃದ್ಧಿಸಲಿ ಎಂದರು.
ಈ ಸಂದರ್ಭ ಅಚ್ಚಿಯಂಡ ಕುಟುಂಬದ ವತಿಯಿಂದ ಪೊನ್ನಣ್ಣ ಅವರನ್ನು ಸನ್ಮಾನಿಸಲಾಯಿತು.
ಮೈಸೂರು ಅಮ್ಮ ಕೊಡವ ಸಮಾಜ ಕಟ್ಟಡ ನಿರ್ಮಾಣಕ್ಕೆ ಸರ್ಕಾರದ ವತಿಯಿಂದ ನಿವೇಶನ ಕೊಡಿಸುವಂತೆ ಮನವಿ ಪತ್ರವನ್ನು ಸಮಾಜದ ಅಧ್ಯಕ್ಷ ಹೆಮ್ಮಚ್ಚಿಮನೆ ಮಹೇಂದ್ರ ಮತ್ತು ಕಾರ್ಯದರ್ಶಿ ಚಿಲ್ಲಚಮ್ಮಂಡ ಉಮೇಶ್ ಶಾಸಕರಿಗೆ ಸಲ್ಲಿಸಿದರು.
ಅಚ್ಚಿಯಂಡ ಕುಟುಂಬದ ಅಧ್ಯಕ್ಷ ಅಚ್ಚಿಯಂಡ ಜಿ.ಬೋಸು ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಖಿಲ ಅಮ್ಮಕೊಡವ ಸಮಾಜದ ಅಧ್ಯಕ್ಷ ಬಾನಂಡ ಪ್ರಥ್ಯು ಮಾತನಾಡಿ, ಅಚ್ಚಿಯಂಡ ಕಪ್ ಯಶಸ್ಸಿಗೆ ಸಮಾಜದ ವತಿಯಿಂದ ಸಹಕಾರ ನೀಡುವುದಾಗಿ ತಿಳಿಸಿದರು. ಈ ಸಂದರ್ಭ ಗೌರವ ಅಧ್ಯಕ್ಷ ಅಚ್ಚಿಯಂಡ ಮುತ್ತಣ್ಣಮಯ್ಯ, ಉಪಾಧ್ಯಕ್ಷ ಅಚ್ಚಿಯಂಡ ಕೊಡಗು ಗಣೇಶ್, ವ್ಯವಸ್ಥಾಪಕ ಹಾಗೂ ಅಖಿಲ ಅಮ್ಮ ಕೊಡವ ಸಮಾಜದ ಮಾಜಿ ಅಧ್ಯಕ್ಷ ಅಚ್ಚಿಯಂಡ ವೇಣುಗೋಪಾಲ್, ಕಾರ್ಯದರ್ಶಿ ಅಚ್ಚಿಯಂಡ ಅಜಿತ್, ಹಿರಿಯರಾದ ಅಚ್ಚಿಯಂಡ ಸುಕುದೇವ್, ಅಖಿಲ ಅಮ್ಮಕೊಡವ ಸಮಾಜದ ಕಾರ್ಯದರ್ಶಿ ಪುತ್ತಾಮನೆ ಅನಿಲ್ ಪ್ರಸಾದ್, ಅಮ್ಮ ಕೊಡವ ವಿದ್ಯಾಭಿವೃದ್ಧಿ ಸಂಘದ ಅಧ್ಯಕ್ಷ ನಾಳಿಯಮ್ಮಂಡ ಉಮೇಶ್ ಕೇಚಮಯ್ಯ, ಲಾಂಛನ ವಿನ್ಯಾಸ ಮಾಡಿದ ಅಚ್ಚಿಯಂಡ ಘನ ಶ್ಯಾಮ್, ಸಮಿತಿಯ ಸದಸ್ಯರಾದ ಅಚ್ಚಿಯಂಡ ಕಿಶೋರಿ, ರಮ್ಯ, ಪುಷ್ಪ, ಪವಿ, ಮಂಜು ಹಾಗೂ ಇನ್ನಿತರರು ಹಾಜರಿದ್ದರು.
ಅಚ್ಚಿಯಂಡ ದೃತಿ ಪ್ರಾರ್ಥಿಸಿ, ಮನೋಜ್ ನಿರೂಪಿಸಿದರು. ಅಚ್ಚಿಯಂಡ ಗೀತಾ ನವೀನ್ ಸ್ವಾಗತಿಸಿ, ಅಚ್ಚಿಯಂಡ ಅಜಿತ್ ವಂದಿಸಿದರು.
-ಚನ್ನನಾಯಕ