ಮಡಿಕೇರಿ, ಡಿ. ೨೪: ಕೊಡಗು ಮುಸ್ಲಿಂ ಸ್ಪೋರ್ಟ್ಸ್ ಟ್ರಸ್ಟ್ ವತಿಯಿಂದ ಏಪ್ರಿಲ್ ೧೯ ರಿಂದ ೨೮ ರವರಗೆ ಮೂರ್ನಾಡುವಿನಲ್ಲಿ ಮುಸ್ಲಿಂ ಕ್ರಿಕೆಟ್ ಕಪ್ ಹಾಗೂ ಹಗ್ಗಜಗ್ಗಾಟ ಕ್ರೀಡಾಕೂಟದ ನಡೆಯಲಿದೆ ಎಂದು ಟ್ರಸ್ಟ್ ಪ್ರಮುಖರು ತಿಳಿಸಿದರು. ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಧಾನ ಕಾರ್ಯದರ್ಶಿ ಆದಾಂ ಕುಶಾಲನಗರ, ಜಮಾಅತ್‌ಗಳ ನಡುವಿನ ೧೮೦ ತಂಡಗಳು ಕ್ರಿಕೆಟ್ ಪಂದ್ಯಾಟದಲ್ಲಿ ಭಾಗವಹಿಸಲಿವೆ. ಮೂರ್ನಾಡುವಿನ ಜೂನಿಯರ್ ಕಾಲೇಜು ಮೈದಾನದಲ್ಲಿ ಪಂದ್ಯಾಟ ನಡೆಯಲಿದೆ. ಕ್ರಿಕೆಟ್‌ನಲ್ಲಿ ವಿಜೇತ ತಂಡಕ್ಕೆ ರೂ. ೭೭,೭೮೬ ಮತ್ತು ಟ್ರೋಫಿ, ರನ್ನರ್ಸ್ ತಂಡಕ್ಕೆ ರೂ. ೩೭,೭೮೬ ನಗದು, ಆಕರ್ಷಕ ಟ್ರೋಫಿ, ತೃತೀಯ ಸ್ಥಾನ ಪಡೆಯುವ ತಂಡಕ್ಕೆ ರೂ. ೧೭,೭೮೬ ಬಹುಮಾನ ನೀಡಲಾಗುವುದು ಎಂದರು.

ಟ್ರಸ್ಟ್ ಅಧ್ಯಕ್ಷ ಅಬ್ದುಲ್ ಖಾದರ್ ಮಾತನಾಡಿ, ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ತಂಡಕ್ಕೆ ರೂ. ೧೩,೩೧೩ ನಗದು ಹಾಗೂ ಟ್ರೋಫಿ, ರನ್ನರ್ಸ್ ತಂಡಕ್ಕೆ ರೂ. ೬,೩೧೩ ಹಾಗೂ ಟ್ರೋಫಿ ನೀಡಲಾಗುವುದು. ಹೆಚ್ಚಿನ ಮಾಹಿತಿಗೆ ೯೭೪೦೪೮೧೨೭೮, ೯೪೪೮೮೯೯೩೪೩ ಸಂಖ್ಯೆಯನ್ನು ಸಂಪರ್ಕಿಸುವAತೆ ಕೋರಿದರು.

ಮುಸ್ಲಿಂ ಕಪ್ ಸಂಸ್ಥಾಪಕ ಅಬ್ದುಲ್ ರಶೀದ್ ಮಾತನಾಡಿ, ಕಳೆದ ೨೦ ವರ್ಷಗಳಿಂದ ಪಂದ್ಯಾಟ ಯಶಸ್ವಿಯಾಗಿ ನಡೆಯುತ್ತಿದ್ದು, ಸರಕಾರದ ಯಾವುದೇ ಅನುದಾನವಿಲ್ಲದೆ ದಾನಿಗಳ ಸಹಕಾರದಿಂದ ನಡೆಯುತ್ತಿದೆ. ಸರಕಾರ ಈ ಬಾರಿ ನೆರವು ನೀಡುವ ನಿರೀಕ್ಷೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಗೋಷ್ಠಿಯಲ್ಲಿ ಟ್ರಸ್ಟ್ ಉಪಾಧ್ಯಕ್ಷ ಶಾಸೀರ್ ವೀರಾಜಪೇಟೆ, ನಿರ್ದೇಶಕರುಗಳಾದ ಅಬ್ದುಲ್ ಮೇಕೇರಿ, ಅಬ್ದುಲ್ ರಜಾಕ್ ಎಡಪಾಲ ಹಾಜರಿದ್ದರು.