ಶನಿವಾರಸಂತೆ, ಡಿ. ೨೨: ಸ್ಥಳೀಯ ಗ್ರಾಮ ಪಂಚಾಯಿತಿಯ ಸಾಮಾನ್ಯ ಸಭೆ ಪಂಚಾಯಿತಿ ಅಧ್ಯಕ್ಷೆ ಗೀತಾ ಹರೀಶ್ ಅಧ್ಯಕ್ಷತೆಯಲ್ಲಿ ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು.

ಸಭೆಯಲ್ಲಿ ಗ್ರಾಮಾಭಿವೃದ್ಧಿ ಹಾಗೂ ಗ್ರಾಮ ಸ್ವಚ್ಛತೆಯ ಬಗ್ಗೆ ಚರ್ಚೆ ನಡೆಯಿತು. ಸರ್ಕಾರಿ ಸುತ್ತೋಲೆ ಹಿನ್ನೆಲೆ ಜಿಎಸ್‌ಟಿ ಕಟ್ಟುವ ಬಗ್ಗೆ ಸಂಬAಧಪಟ್ಟ ಇಲಾಖೆ ಜೊತೆ ಪತ್ರ ವ್ಯವಹಾರ ನಡೆಸುವುದು ಹಾಗೂ ಪಂಚಾಯಿತಿ ವಾಹನದ ಇನ್ಸೂರೆನ್ಸ್ ಪಾವತಿಸುವಂತೆ ತೀರ್ಮಾನಿಸಲಾಯಿತು. ಸಾರ್ವಜನಿಕರ ಅರ್ಜಿಯನ್ನು ಪರಶೀಲಿಸಿ ನಂದಿನಿ ಹಾಲಿನ ಡೈರಿಗೆ ಸ್ಥಳವಕಾಶ ನೀಡುವ ಬಗ್ಗೆ ಸದಸ್ಯರು ಚರ್ಚೆ ನಡೆಸಿ, ಸಂತೆ ಮಾರುಕಟ್ಟೆ ಯೊಳಗೆ ಮಾಡುವಂತೆ ತೀರ್ಮಾನಿಸ ಲಾಯಿತು. ಅಂಗನವಾಡಿ ಕಾರ್ಯಕರ್ತರ ಅರ್ಜಿಗೆ ಸ್ಪಂದಿಸಿ, ಕೇಂದ್ರಗಳಿಗೆ ಪಂಚಾಯಿತಿ ವತಿಯಿಂದ ಗಾಡ್ರೆಜ್ ಬೀರುಗಳನ್ನು ನೀಡುವ ಬಗ್ಗೆಯೂ ನಿರ್ಧರಿಸಲಾಯಿತು.

ಭಾರತಿ ವಿದ್ಯಾಸಂಸ್ಥೆಯಲ್ಲಿ ನಡೆದ ರಾಜ್ಯಮಟ್ಟದ ಟೆನ್ನಿಕಾಯ್ಟ್ ಪಂದ್ಯಾವಳಿಗೆ ಸಹಾಯಧನ ನೀಡುವುದು ಹಾಗೂ ಕನ್ನಡ ಸಾಹಿತ್ಯ ಪರಿಷತ್ ಭವನ ಕಟ್ಟಡ ದುರಸ್ತಿಗೆ ಸಹಾಯಧನ ನೀಡುವುದರ ಜೊತೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಪತ್ರ ಬರೆಯಲು ಸದಸ್ಯರು ತೀರ್ಮಾನಿಸಿದರು.

೨೦೨೩-೨೪ ರ ಸಾಲಿನ ಕ್ರಿಯಾ ಯೋಜನೆ ತಯಾರಿಸುವ ಬಗ್ಗೆ, ಸಿಬ್ಬಂದಿ ನೇಮಕದ ಬಗ್ಗೆ, ವಾಣಿಜ್ಯ ಸಂಕೀರ್ಣದ ಬಾಡಿಗೆ ಬಾಕಿ ಹಣ ಬಂದ ತಕ್ಷಣ ಮೀನು ಹಾಗೂ ಕೋಳಿ ಮಾಂಸದ ಮಳಿಗೆ ಹಸ್ತಾಂತರ ಮಾಡಲು ನಿರ್ಣಯಿಸಲಾಯಿತು.

ಮಕ್ಕಳ ಗ್ರಾಮ ಸಭೆ ನಡೆಸುವ ಬಗ್ಗೆ ದಿನಾಂಕ ನಿಗದಿಪಡಿಸಲು ಮುಖ್ಯ ಶಿಕ್ಷಕರ ಸಭೆ ಕರೆಯುವಂತೆ ಸೂಚಿಸಲಾಯಿತು. ೧೫ನೇ ಹಣಕಾಸು ಕ್ರಿಯಾ ಯೋಜನೆ ಕಾಮಗಾರಿಯನ್ನು ಬದಲಾವಣೆ ಮಾಡುವಂತೆ ಸಭೆಯಲ್ಲಿ ಸರ್ವಾನುಮತದಿಂದ ತೀರ್ಮಾನಿಸಲಾಯಿತು.

ಸಭೆಯಲ್ಲಿ ಬಸ್ ನಿಲ್ದಾಣ ನಿರ್ಮಾಣದ ಬಗ್ಗೆ ಚರ್ಚೆ ನಡೆದು ೧೫ ಸೆಂಟ್ ಜಾಗವನ್ನು ಪಂಚಾಯಿತಿಗೆ ಇಟ್ಟುಕೊಂಡು ಉಳಿದ ಜಾಗವನ್ನು ಕೆ.ಎಸ್.ಆರ್.ಟಿ.ಸಿ.ಗೆ ನೀಡುವಂತೆಯೂ ಸರ್ವ ಸದಸ್ಯರೂ ಸಮ್ಮತಿ ಸೂಚಿಸಿದರು.

ಪಂಚಾಯಿತಿಯ ರಾಜ್ಯದಲ್ಲೇ ಖ್ಯಾತಿ ಪಡೆದಿರುವ ವಿಸ್ತಾರವಾದ ಸಂತೆ ಮಾರುಕಟ್ಟೆ ನಿರ್ಮಾಣಕ್ಕೆ ಶ್ರಮಿಸಿದ ಸಮಾಜಸೇವಕ ಮಾಜಿ ಪುರಸಭಾಧ್ಯಕ್ಷ ಬಿ. ಗಂಗಪ್ಪ ಕರ್ಕೇರ ಅವರ ಹೆಸರಿನ ನಾಮಫಲಕವನ್ನು ಮಾರುಕಟ್ಟೆಯ ಮುಖ್ಯದ್ವಾರಕ್ಕೆ ಅಳವಡಿಸುವ ಬಗ್ಗೆಯೂ ಚರ್ಚೆ ನಡೆಯಿತು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹರೀಶ್, ಅಧ್ಯಕ್ಷೆ ಗೀತಾ ಹರೀಶ್, ಉಪಾಧ್ಯಕ್ಷ ಸರ್ದಾರ್ ಅಹಮ್ಮದ್ ಹಾಗೂ ಸರ್ವ ಸದಸ್ಯರೂ ಉದ್ಘಾಟನಾ ಕಾರ್ಯಕ್ರಮ ಆಯೋಜಿಸಿ, ನಾಮಫಲಕ ಅಳವಡಿಸುವ ಬಗ್ಗೆ ನಿರ್ಧರಿಸಿದರು.

ಪಂಚಾಯಿತಿ ಉಪಾಧ್ಯಕ್ಷ ಸರ್ದಾರ್ ಅಹಮ್ಮದ್, ಸದಸ್ಯರಾದ ಎಸ್.ಸಿ. ಶರತ್ ಶೇಖರ್, ಎಸ್.ಎನ್. ರಘು, ಎಸ್.ಎ. ಆದಿತ್ಯ ಗೌಡ, ಎಸ್.ಆರ್. ಮಧು, ಸರೋಜಾ ಶೇಖರ್, ಸರಸ್ವತಿ, ಫರ್ಜಾನಾ ಶಾಹಿದ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹರೀಶ್, ಕಾರ್ಯದರ್ಶಿ ದೇವರಾಜ್ ಹಾಗೂ ಸಿಬ್ಬಂದಿ ಹಾಜರಿದ್ದರು.