ಮಡಿಕೇರಿ, ಡಿ. ೨೨: ಭಾಗಮಂಡಲ ಸಂಗಮ ಕ್ಷೇತ್ರದಲ್ಲಿ ಯಾತ್ರಾರ್ಥಿಗಳ ಮನ ಕಂಗೊಳಿಸುವAತಹ ಲಾನ್ ಸಹಿತದ ನೈಸರ್ಗಿಕ ಆಕರ್ಷಣೆಯನ್ನು ಕಲ್ಪಿಸುವ ಯೋಜನೆಯೊಂದನ್ನು ಜಾರಿಗೊಳಿಸಲಾಗುತ್ತಿದೆ. ಇದಕ್ಕಿಂತ ಮುಖ್ಯವಾಗಿ ಯಾತ್ರಾರ್ಥಿಗಳು ಸಂಗಮ ಕ್ಷೇತ್ರದಲ್ಲಿ ನಡೆದಾಡುವಾಗ ಜಾರುವಿಕೆ ಇಲ್ಲದಂತಹ ವಿಶೇಷ ಕಲ್ಲುಹಾಸುಗಳನ್ನು ಅಳವಡಿಸುವ ಮೂಲಕ ಸುಗಮವಾಗಿ ನಡೆದಾಡಲು ಅನುಕೂಲ ಕಲ್ಪಿಸಲಾಗುವುದು. ಒಂದೆಡೆ ಆಕರ್ಷಣೆ, ಮತ್ತೊಂದೆಡೆ ಅನುಕೂಲ ಜೊತೆಗೆ ಸೇತುವೆ ಬಳಿ ಸ್ವಾಗತ ಕಮಾನು ನಿರ್ಮಾಣ ಗೊಳಿಸುವ ಕಾರ್ಯವನ್ನು ನಡೆಸಲಾಗುತ್ತದೆ. ಇದೇ ಅಲ್ಲದೆ, ಕೊಡಗಿಗೆ ಪ್ರವೇಶಿಸುವ ಜನರ ಗಮನ ಸೆಳೆಯಲು ಮಡಿಕೇರಿಯ ಸುದರ್ಶನ ವೃತ್ತದಲ್ಲಿಯೂ ಕಮಾನುವೊಂದನ್ನು ಸ್ಥಾಪಿಸಲಾಗುವುದು ಎಂದು ತಿಳಿದುಬಂದಿದೆ.
ವೀರಾಜಪೇಟೆ ಕ್ಷೇತ್ರದ ಶಾಸಕ ಅಜ್ಜಿಕುಟ್ಟೀರ ಎಸ್. ಪೊನ್ನಣ್ಣ ಅವರು ಜಾತ್ರೆ ಸಂದರ್ಭ ಸರಕಾರದಿಂದ ರೂ. ೨ ಕೋಟಿ ಅನುದಾನ ಮಂಜೂರು ಮಾಡಿಸಿದರು. ಈ ಪೈಕಿ ರೂ. ೭೩ ಲಕ್ಷ ಜಾತ್ರಾ ವೆಚ್ಚಕ್ಕಾಗಿ ವಿನಿಯೋಗಿಸಲಾಗುತ್ತದೆ. ಇನ್ನೂ ಕೂಡ ಈ ಜಾತ್ರಾ ವೆಚ್ಚದ ಬಿಲ್ಗಳನ್ನು ಪಾವತಿಸಬೇಕಾಗಿದೆ. ಉಳಿದ ಹಣದಲ್ಲಿ ಭಾಗಮಂಡಲದಲ್ಲಿ ಈ ವಿಶೇಷ ಯೋಜನೆಗಳನ್ನು ಕೈಗೊಳ್ಳಲಾಗಿದೆ. ಈ ಕುರಿತಾಗಿ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರನ್ನು ‘ಶಕ್ತಿ’ ಸಂಪರ್ಕಿಸಿದಾಗ ಸಂಗಮ ಕ್ಷೇತ್ರದಲ್ಲಿ ಬರುವಂತಹ ಯಾತ್ರಾರ್ಥಿಗಳಿಗೆ ಮನೋಲ್ಲಾಸ ತರುವಂತಹ ಹಸಿರುಮಯವಾದ ಲಾನ್ಗಳನ್ನು ಅಭಿವೃದ್ಧಿಪಡಿಸ ಲಾಗುತ್ತದೆ. ಜೊತೆಗೆ ನೀರಿನ ಚಿಲುಮೆಗಳನ್ನು ಅಭಿವೃದ್ಧಿಗೊಳಿಸಲಾಗುತ್ತದೆ. ಜನರು ಕುಳಿತುಕೊಳ್ಳಲು ಅಲ್ಲಲ್ಲಿ ಆಸನಗಳನ್ನು ಕಲ್ಪಿಸಲಾಗುತ್ತದೆ. ಜೊತೆಗೆ ಮಳೆಗಾಲದಲ್ಲಿಯೂ ಯಾತ್ರಾರ್ಥಿಗಳು ನಡೆದಾಡುವಾಗ ಕಾಲು ಜಾರದ ರೀತಿಯಲ್ಲಿ ಜಾರು ರಹಿತ ವಿಶೇಷ ಕಲ್ಲುಗಳನ್ನು ಅಳವಡಿಸಲಾಗುತ್ತದೆ ಎಂದು ಮಾಹಿತಿಯಿತ್ತರು. ಶಾಸಕ ಪೊನ್ನಣ್ಣ ಅವರ ಪ್ರಯತ್ನದಿಂದ ಈ ಕಾರ್ಯವನ್ನು ನಿರ್ವಹಿಸಲಾಗುತ್ತಿದೆ ಎಂದರು.
(ಮೊದಲ ಪುಟದಿಂದ) ಈ ಕುರಿತಾಗಿ ಶಾಸಕ ಪೊನ್ನಣ್ಣ ಅವರನ್ನು ‘ಶಕ್ತಿ’ ಸಂಪರ್ಕಿಸಿದಾಗ, ಸರಕಾರದ ಅನುದಾನದಲ್ಲಿ ಜಿಲ್ಲಾಧಿಕಾರಿಯವರು ಆಸಕ್ತಿ ವಹಿಸಿ ಕಾರ್ಯಾರಂಭ ಮಾಡಿದ್ದಾರೆ. ಭಾಗಮಂಡಲವು ಉತ್ತಮ ಕ್ಷೇತ್ರವಾಗಿ ರೂಪುಗೊಳ್ಳಲು ಈ ಯೋಜನೆ ಪೂರಕವಾಗಿದೆ ಎಂದು ಅನಿಸಿಕೆ ವ್ಯಕ್ತಪಡಿಸಿದರು. ಜನವರಿ ಅಂತ್ಯದ ಒಳಗೆ ಈ ಕಾರ್ಯ ಪೂರ್ಣಗೊಳ್ಳುವ ನಿರೀಕ್ಷೆ ವ್ಯಕ್ತಪಡಿಸಿದರು. ಭಾಗಮಂಡಲ ಸೇತುವೆಯ ಕೆಲಸವನ್ನು ಚುರುಕುಗೊಳಿಸಲಾಗಿದ್ದು, ಬಹುಪಾಲು ಒಂದೆರಡು ತಿಂಗಳಲ್ಲಿ ಮುಕ್ತಾಯಗೊಳ್ಳಲಿದೆ ಎಂದು ಮಾಹಿತಿಯಿತ್ತರು.
ಭಾಗಮಂಡಲ - ತಲಕಾವೇರಿ ಕ್ಷೇತ್ರಗಳಿಗೆ ನೂತನ ವ್ಯವಸ್ಥಾಪನಾ ಸಮಿತಿ ರಚನೆ ಕುರಿತ ಪ್ರಸ್ತಾಪಿಸಿದಾಗ, ಈ ಹಿಂದೆ ಇದಕ್ಕೆ ಸಂಬAಧಿಸಿದAತೆ ನ್ಯಾಯಾಲಯದಲ್ಲಿ ಒಂದು ಪ್ರಕರಣ ಇದ್ದು, ಇದನ್ನು ಶೀಘ್ರ ಇತ್ಯರ್ಥಗೊಳಿಸುವಂತೆ ಅಡ್ವೋಕೇಟ್ ಜನರಲ್ ಅವರಲ್ಲಿ ಕೋರಿದ್ದೇನೆ. ಶೀಘ್ರದಲ್ಲಿಯೇ ಈ ಪ್ರಕರಣ ಬಗೆಹರಿದು ನೂತನ ಸಮಿತಿಯನ್ನು ರಚಿಸಲಾಗುತ್ತದೆ ಎಂದು ಪೊನ್ನಣ್ಣ ತಿಳಿಸಿದರು.
‘ಶಕ್ತಿ’ಗೆ ತಿಳಿದುಬಂದAತೆ ಭಾಗಮಂಡಲದ ಕಾಮಗಾರಿಯನ್ನು ಕೋಲಾರದ ಗುತ್ತಿಗೆದಾರರೊಬ್ಬರಿಗೆ ವಹಿಸಲಾಗಿದೆ ಎನ್ನಲಾಗಿದೆ.
ಸಮರ್ಪಕ ಮಾಹಿತಿ ಇಲ್ಲ: ಭಾಗಮಂಡಲ ಪಂಚಾಯಿತಿ ಅಧ್ಯಕ್ಷ ಕಾಳನ ರವಿ ಅವರು ‘ಶಕ್ತಿ’ಯೊಂದಿಗೆ ಮಾತನಾಡಿ, ಜಿಲ್ಲಾಧಿಕಾರಿಯವರು ಈ ಕಾಮಗಾರಿ ಪ್ರಾರಂಭಿಸುವಾಗ ಮುಕ್ತವಾಗಿ ಯಾವುದೇ ಮಾಹಿತಿಯನ್ನು ನೀಡಿಲ್ಲ. ಸ್ಥಳೀಯರಿಗಾಗಲೀ, ಗ್ರಾಮ ಪಂಚಾಯಿತಿಗಾಗಲೀ ಇಲ್ಲಿ ಏನು ಕೆಲಸ ನಡೆಯುತ್ತಿದೆ ಎಂಬುದರ ಅರಿವೇ ಇಲ್ಲ. ಕಾಮಗಾರಿಗೆ ಸಾಮಗ್ರಿಗಳು ಬಂದು ಬಿದ್ದಾಗಲೇ ಇಲ್ಲಿ ಏನೋ ನಡೆಯುತ್ತಿದೆ ಎಂದು ಗೊತ್ತಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಉದ್ಯಾನವನದ ರೀತಿಯಲ್ಲಿ ಇಲ್ಲಿ ಯಾವುದೇ ಕೆಲಸ ನಡೆಯಬಾರದು. ಮಳೆಗಾಲದಲ್ಲಿ ಅವೆಲ್ಲಾ ಕೊಚ್ಚಿ ಹೋಗುತ್ತವೆ. ಜಿಲ್ಲಾಡಳಿತ ಶಾಶ್ವತವಾದ ಕೆಲಸವನ್ನು ನಡೆಸಬೇಕಾಗಿದೆ. ಅಲ್ಲದೆ, ಪ್ರವಾಸೋದ್ಯಮಕ್ಕೆ ಪೂರಕವಾಗಿ ಯೋಜನೆ ಕೈಗೊಳ್ಳಲಾಗುತ್ತದೆ ಎನ್ನುವ ಮಾತು ಕೇಳಿಬಂದಿದೆ. ಹಾಗಿದ್ದರೆ ಇಲ್ಲಿ ಕೆಲವು ಸ್ಥಳೀಯರು ಗಾಜಿನ ಸೇತುವೆ ಮಾಡುವುದಾಗಿ ಕೋರಿದಾಗ, ಅದು ಪ್ರವಾಸೋದ್ಯಮಕ್ಕೆ ಪೂರಕ ಎಂದು ಜಿಲ್ಲಾಧಿಕಾರಿಯವರು ತಿರಸ್ಕರಿಸಿದ್ದುದು ಏಕೆ ಎಂದು ಕಾಳನ ರವಿ ಪ್ರಶ್ನಿಸಿದರು. ಈ ಎಲ್ಲದರ ಕುರಿತಾಗಿ ಸದ್ಯದಲ್ಲಿ ನಡೆಯಲಿರುವ ಗ್ರಾಮಸಭೆಯಲ್ಲಿ ಗ್ರಾಮಸ್ಥರು ಚರ್ಚಿಸಲಿದ್ದಾರೆ ಎಂದು ಮಾಹಿತಿಯಿತ್ತರು.
-ಸುನಿಲ್ ಕುಯ್ಯಮುಡಿ.