*ಸಿದ್ದಾಪುರ, ಡಿ. ೨೨: ಸಿದ್ದಾಪುರ ಗ್ರಾಮ ಪಂಚಾಯಿತಿ ಮುಂಭಾಗದಲ್ಲಿದ್ದ ಹಳೆಯ ಬಾವಿಯನ್ನು ಮುಚ್ಚಿ ಒಂದು ಮನೆಗೆ ರಸ್ತೆ ನಿರ್ಮಿಸಿಕೊಟ್ಟಿರುವ ಪ್ರಕರಣದ ಕುರಿತು ಸೂಕ್ತ ತನಿಖೆ ನಡೆಸಬೇಕೆಂದು ಪಂಚಾಯಿತಿ ಸದಸ್ಯರಾದ ಪ್ರೇಮ ಹಾಗೂ ಸಮೀರ ಒತ್ತಾಯಿಸಿದ್ದಾರೆ. ತಾಲೂಕು ಪಂಚಾಯಿತಿ ಕಾರ್ಯನಿರ್ವ ಹಣಾಧಿಕಾರಿಗಳ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸದಸ್ಯರು ವೇಣುಗೋಪಾಲ ಎಂಬವರಿಗೆ ಸೇರಿದ ಮನೆ ಮಾರಾಟ ಮಾಡಿದ್ದು, ಬಾವಿಯಿಂದಾಗಿ ಮನೆಯ ರಸ್ತೆ ಕಿರಿದಾಗಿದೆ ಎನ್ನುವ ಕಾರಣಕ್ಕೆ ಬಾವಿಯನ್ನು ಮುಚ್ಚಿ ಅಗಲದ ರಸ್ತೆಯನ್ನು ನಿರ್ಮಿಸಲಾಗಿದೆ ಎಂದು ಆರೋಪಿಸಿದರು. ಸಾರ್ವಜನಿಕರ ಉಪ ಯೋಗಕ್ಕಾಗಿ ಇದ್ದ ಬಾವಿಯನ್ನು ಉಳಿಸಿಕೊಳ್ಳಬೇಕು ಎಂದು ಒತ್ತಾಯಿ ಸಿದರು. ಒಂದು ಮನೆಗಾಗಿ ಗ್ರಾ.ಪಂ. ಅನುದಾನದಿಂದ ರಸ್ತೆ ನಿರ್ಮಿಸುವ ಅಗತ್ಯವೇನಿತ್ತು ಎಂದು ಪ್ರಶ್ನಿಸಿದರು.
ಅರ್ಜಿ ವಿಲೇವಾರಿಗೆ ಹಣ
ಗ್ರಾ.ಪಂ.ಯಲ್ಲಿ ಗ್ರಾಮಸ್ಥರ ಯಾವುದೇ ಕೆಲಸ ಕಾರ್ಯಗಳು ಸುಲಭವಾಗಿ ಆಗುತ್ತಿಲ್ಲ. ಅರ್ಜಿ ವಿಲೇವಾರಿಯಾಗಬೇಕಾದರೆ ಹಣ ನೀಡಬೇಕು ಎಂದು ವಿ.ಕೆ. ಜಾಫರ್ ಅಲಿ ಸೇರಿದಂತೆ ಕೆಲವರು ಆರೋಪಿಸಿದರು. ಇದಕ್ಕೆ ಉತ್ತರಿಸಿದ ಕಾರ್ಯನಿರ್ವಹಣಾಧಿಕಾರಿಗಳು ಸೂಕ್ತ ದಾಖಲೆ ನೀಡಿದರೆ ತನಿಖೆಗೆ ಸೂಚಿಸುವುದಾಗಿ ತಿಳಿಸಿದರು.