ಮಡಿಕೇರಿ, ಡಿ. ೨೨: ಕಳೆದ ಮೂರು ವರ್ಷ ಇಡೀ ಪ್ರಪಂಚವನ್ನು ಬಾಧಿಸಿ ಸಾವು-ನೋವಿಗೆ ಕಾರಣವಾದ ಕೊರೊನಾ ವೈರಸ್ ಇದೀಗ ಮತ್ತೆ ಉಲ್ಭಣಿಸುತ್ತಿದೆ. ಕೋವಿಡ್ ಉಪತಳಿ ‘ಜೆಎನ್-೧’ ರೂಪಾಂತರಿಯಾಗಿ ಕಾಲಿಟ್ಟಿರುವ ಈ ವೈರಾಣು ಕೇರಳ, ತಮಿಳುನಾಡಿನಲ್ಲಿ ತನ್ನ ಆಟೋಟೋಪ ತೋರಿಸುತ್ತಿದೆ. ಕೇರಳದೊಂದಿಗೆ ಗಡಿ ಹಂಚಿಕೊAಡಿರುವ ಕೊಡಗಿನಲ್ಲಿ ಆತಂಕದ ಪರಿಸ್ಥಿತಿ ಸೃಷ್ಟಿಯಾಗಿರುವ ಹಿನ್ನೆಲೆ ಆರೋಗ್ಯ ಇಲಾಖೆ ಪರಿಸ್ಥಿತಿ ಎದುರಿಸಲು ಪೂರ್ವ ತಯಾರಿಯಲ್ಲಿ ನಿರತವಾಗಿದೆ.

ಈಗಾಗಲೇ ಆರೋಗ್ಯ ಇಲಾಖೆ, ರಾಜ್ಯ ಸರಕಾರ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದು, ೬೦ ವರ್ಷ ಮೇಲ್ಪಟ್ಟವರು, ರೋಗ ಲಕ್ಷಣ ಹೊಂದಿರುವವರು ಮಾಸ್ಕ್ ಧರಿಸುವುದು ಕಡ್ಡಾಯಗೊಳಿಸಲಾಗಿದೆ. ಇತ್ತೀಚೆಗೆ ಜಿಲ್ಲೆಗೆ ಆಗಮಿಸಿದ್ದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಗಡಿಗಳಲ್ಲಿ ಮುಂಜಾಗ್ರತೆ ವಹಿಸುವಂತೆ ನಿರ್ದೇಶನ ನೀಡಿದ್ದು, ಅದರನ್ವಯ ಕೇರಳ ಗಡಿಗಳಲ್ಲಿಯೂ ‘ಹೈಅಲರ್ಟ್’ ವಹಿಸಲಾಗಿದೆ.

ಮಡಿಕೇರಿ ಜಿಲ್ಲಾಸ್ಪತ್ರೆ ಸೇರಿದಂತೆ ವೀರಾಜಪೇಟೆ, ಸೋಮವಾರಪೇಟೆ ತಾಲೂಕು ಆಸ್ಪತ್ರೆಗಳಲ್ಲಿ ಅಗತ್ಯ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಪ್ರತ್ಯೇಕ ಹಾಸಿಗೆಗಳು, ಐಸಿಯು, ವೆಂಟಿಲೇಟರ್, ಆಮ್ಲಜನಕ ದಾಸ್ತಾನಿಡಲಾಗಿದೆ.

ಈ ಹಿಂದೆ ಕೋವಿಡ್ ಪರಿಸ್ಥಿತಿಯಲ್ಲಿ ಆಮ್ಲಜನಕ ಅಲಭ್ಯತೆ ಸಾವಿಗೆ ಕಾರಣವಾಗಿತ್ತು. ಅದನ್ನು ಮನಗಂಡು ಮಡಿಕೇರಿಯಲ್ಲಿ ಆಮ್ಲಜನಕ ಉತ್ಪಾದನಾ ಘಟಕ ಸ್ಥಾಪಿಸಲಾಗಿದ್ದು, ಅದರ ನಿರ್ವಹಣೆಗೆ ಒತ್ತು ನೀಡಲಾಗಿದೆ. ಅದೇ ರೀತಿ ಆಮ್ಲಜನಕ ಪೂರೈಕೆಗೆ ಪೂರಕ ಕೆಲಸಗಳನ್ನು ನಿರ್ವಹಿಸಲಾಗುತ್ತಿದೆ.

ಏನೆಲ್ಲ ವ್ಯವಸ್ಥೆ?

ಜಿಲ್ಲಾಸ್ಪತ್ರೆಯಲ್ಲಿ ಸಾವಿರ ಹಾಗೂ ೫೦೦ ಲೀಟರ್, ಸೋಮವಾರಪೇಟೆ ತಾಲೂಕು ಆಸ್ಪತ್ರೆಯಲ್ಲಿ ೩೯೦ ಲೀಟರ್, ವೀರಾಜಪೇಟೆಯಲ್ಲಿ ಸಾವಿರ ಲೀಟರ್ ಸಾಮರ್ಥ್ಯದ ಆಮ್ಲಜನಕ ಉತ್ಪಾದನಾ ಘಟಕ ಉತ್ತಮ ಸ್ಥಿತಿಯಲ್ಲಿದ್ದು, ಸೂಕ್ತ ನಿರ್ವಹಣೆ ಮಾಡಲಾಗುತ್ತಿದೆ. ವಾತಾವರಣದ ಗಾಳಿಯಿಂದ ಆಮ್ಲಜನಕವನ್ನು ಬೇರ್ಪಡಿಸಿ ಸಂಗ್ರಹಿಸಲಾಗುತ್ತದೆ.

ಜಿಲ್ಲಾಸ್ಪತ್ರೆಯಲ್ಲಿ ೧೩ ಸಾವಿರ ಲೀಟರ್, ಸೋಮವಾರಪೇಟೆಯಲ್ಲಿ ೬ ಸಾವಿರ ಲೀಟರ್, ವೀರಾಜಪೇಟೆಯಲ್ಲಿ ೫,೯೪೦ ಲೀಟರ್ ಸಾಮರ್ಥ್ಯದ ‘ಲಿಕ್ವಿಡ್ ಮೆಡಿಕಲ್ ಆಕ್ಸಿಜನ್ ಟ್ಯಾಂಕ್’ ಲಭ್ಯತೆ ಇದ್ದು, ಇಲ್ಲಿಂದ ರೋಗಿಗಳಿಗೆ ಆಮ್ಲಜನಕ ಪೂರೈಕೆ ಮಾಡಲಾಗುವುದು.

(ಮೊದಲ ಪುಟದಿಂದ) ಜಿಲ್ಲಾಸ್ಪತ್ರೆಯಲ್ಲಿ ೫೦ ಐಸಿಯು ಬೆಡ್ ವೆಂಟಿಲೇಟರ್ ಸಹಿತ ವ್ಯವಸ್ಥೆ ಮಾಡಲಾಗಿದೆ. ಸೋಮವಾರ ಪೇಟೆಯಲ್ಲಿ ೧೦ ವೆಂಟಿಲೇಟರ್ ಸಹಿತ ಐಸಿಯು ಬೆಡ್ ಸುಸ್ಥಿತಿಯಲ್ಲಿದೆ. ನೂತನವಾಗಿ ೧೫ ವೆಂಟಿಲೇಟರ್ ಸಹಿತ ಐಸಿಯು ಪೈಕಿ ೧೧ ಅನ್ನು ಅಳವಡಿಸಲಾಗಿದೆ. ವೀರಾಜಪೇಟೆಯಲ್ಲಿ ೧೨ ವೆಂಟಿಲೇಟರ್ ಸಹಿತ ಐಸಿಯು ಬೆಡ್‌ಗಳ ವ್ಯವಸ್ಥೆ ಇದೆ.

ಆಮ್ಲಜನಕ ಸಿಲಿಂಡರ್‌ಗಳನ್ನು ತುಂಬಿಸುವ ಬಗ್ಗೆ ಕ್ರಮಕೈಗೊಳ್ಳಲಾಗಿದ್ದು, ಜಿಲ್ಲಾಸ್ಪತ್ರೆಯಲ್ಲಿ ೫೦ ಲೀಟರ್‌ನ ೨೫೪ ಜಂಬೋ, ೧೦೪ ಸಣ್ಣ ಸಿಲಿಂಡರ್‌ಗಳನ್ನು ದಾಸ್ತಾನಿಡಲಾಗಿದೆ. ಸೋಮವಾರಪೇಟೆಯಲ್ಲಿ ೭೪ ಜಂಬೋ ಸಿಲಿಂಡರ್ ಪೈಕಿ ೫೦ ತುಂಬಿಡಲಾಗಿದೆ. ವೀರಾಜಪೇಟೆಯಲ್ಲಿ ೫೦ ಲೀಟರ್‌ನ ೪೬ ಜಂಬೋ ಸಿಲಿಂಡರ್ ಸಂಗ್ರಹಿಸಿಡಲಾಗಿದೆ.

ಅದೇ ರೀತಿ ಜಿಲ್ಲಾಸ್ಪತ್ರೆಯಲ್ಲಿ ‘ಆಕ್ಸಿಜನ್ ಕಾನ್ಸಂಟ್ರೇಟರ್’ ೨೫೫ ಬಳಕೆಗೆ ಯೋಗ್ಯವಿದೆ. ಸೋಮವಾರಪೇಟೆಯಲ್ಲಿ ೪೭, ವೀರಾಜಪೇಟೆಯಲ್ಲಿ ೨೧ ಲಭ್ಯವಿದೆ.

ಮೆಡಿಕಲ್ ಗ್ಯಾಸ್ ಪೈಪ್‌ಲೈನ್‌ಗಳ ವ್ಯವಸ್ಥೆ ಕೂಡ ಮಾಡಲಾಗಿದ್ದು. ಜಿಲ್ಲಾಸ್ಪತ್ರೆಯ ೪೧೦ ಬೆಡ್, ಸೋಮವಾರಪೇಟೆಯ ೧೦೦, ವೀರಾಜಪೇಟೆಯ ೧೪೦ ಬೆಡ್‌ಗಳಿಗೆ ಸಂಪರ್ಕ ನೀಡಲಾಗಿದೆ. ಎಲ್ಲಾ ಆಸ್ಪತ್ರೆಗಳ ಐಸಿಯು ಬೆಡ್‌ಗಳು ಸುಸ್ಥಿತಿಯಲ್ಲಿರುವುದಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸತೀಶ್ ತಿಳಿಸಿದ್ದಾರೆ. ಟಿ ಹೆಚ್.ಜೆ. ರಾಕೇಶ್