ಕರಿಕೆ, ಡಿ. ೨೨: ಜಿಲ್ಲೆಯ ಗಡಿ ಗ್ರಾಮವಾದ ಕರಿಕೆ ಭಾಗದಲ್ಲಿ ಕಾಡಾನೆಗಳು ನಿರಂತರವಾಗಿ ರೈತರು ಬೆಳೆದ ಅಡಿಕೆ, ತೆಂಗು, ಬಾಳೆ ಬೆಳೆಗಳನ್ನು ನಾಶಪಡಿಸುತ್ತಿರುವ ಹಿನ್ನೆಲೆ ಗ್ರಾಮಸ್ಥರು ಪರಿಹಾರಕ್ಕೆ ಒತ್ತಾಯಿಸಿ ಅರಣ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಈ ವರ್ಷ ಸುಮಾರು ಇಪ್ಪತ್ತೆöÊದು ಪ್ರಕರಣಗಳು ದಾಖಲಾಗಿವೆ. ಗ್ರಾಮದ ಪಚ್ಚೆಪಿಲಾವು ಎಂಬಲ್ಲಿ ಪಟ್ಟಿಘಾಟ್ ಮೀಸಲು ಅರಣ್ಯದಿಂದ ಆಹಾರದ ಕೊರತೆಯಿಂದ ಆನೆಗಳ ಹಿಂಡು ಆಗಮಿಸುತ್ತಿದ್ದು, ಅರಣ್ಯದ ಗಡಿಯಲ್ಲಿ ಸುಮಾರು ಎರಡು ಕಿ.ಮೀ. ಉದ್ದದ ಆನೆ ಕಂದಕ ನಿರ್ಮಾಣ ಮಾಡಿದ್ದು, ಕೇವಲ ಒಂದು ಜಾಗದಲ್ಲಿ ಸಣ್ಣ ಹೊಳೆಯ ಜಾಗದಲ್ಲಿ ಬಾಕಿ ಉಳಿದ ಕಾರಣ ಆನೆ ಗ್ರಾಮದೊಳಗೆ ಪ್ರವೇಶ ಮಾಡುತ್ತಿದ್ದು, ಇಲ್ಲಿ ಆನೆ ತಡೆ ಕಂದಕ ನಿರ್ಮಾಣ ಮಾಡುವಂತೆ ಕೋರಿ ಮಾಜಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಹೊದ್ದೆಟ್ಟಿ ಸುಧೀರ್ ಕುಮಾರ್ ನೇತೃತ್ವದಲ್ಲಿ ಗ್ರಾಮಸ್ಥರು ಭಾಗಮಂಡಲ ವಲಯ ಅರಣ್ಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಇದಕ್ಕೆ ಸ್ಪಂದಿಸಿದ ವಲಯ ಅರಣ್ಯ ಅಧಿಕಾರಿ ರವೀಂದ್ರ ತಾನು ಖುದ್ದಾಗಿ ಸ್ಥಳ ಪರಿಶೀಲನೆ ನಡೆಸಿ ಈ ಬಗ್ಗೆ ಅಂದಾಜುಪಟ್ಟಿ ತಯಾರಿಸಿ ಇಲಾಖೆ ಅನುಮೋದನೆಯನ್ನು ಪಡೆದು ಮುಂದಿನ ವಾರ್ಷಿಕ ವರ್ಷದಲ್ಲಿ ಕಾಮಗಾರಿ ನಡೆಸಿಕೊಡಲಾಗುವುದೆಂದು ಭರವಸೆ ನೀಡಿದರು.