ಕೂಡಿಗೆ, ಡಿ. ೨೩: ಪಿಕಪ್ ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಬೈಕ್‌ನಲ್ಲಿದ್ದ ದಂಪತಿ ಗಂಭೀರ ಗಾಯ ಗೊಂಡಿರುವ ಘಟನೆ ಕುಶಾಲನಗರ ಕೂಡಿಗೆ ರಾಜ್ಯ ಹೆದ್ದಾರಿಯ ಗುಮ್ಮನಕೊಲ್ಲಿ ಪೆಟ್ರೋಲ್ ಬಂಕ್ ಸಮೀಪ ನಡೆದಿದೆ. ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿಜಯನಗರ ಗ್ರಾಮದ ನಿವಾಸಿಗಳಾದ ಪ್ರಸನ್ನ ಕುಮಾರ್ ಹಾಗೂ ಆಶಾ ಗಂಭೀರ ಗಾಯಗಳಾಗಿ ಮಂಗಳೂರಿನ ಎಜೆ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ.

ಕೂಡಿಗೆ ಕಡೆಯಿಂದ ಬರುತ್ತಿದ್ದ ಪಿಕಪ್ ವಾಹನ (ಕೆಎ೧೨ ಸಿ೦೪೦೨) ಕುಶಾಲನಗರ ಕಡೆಯಿಂದ ಕೂಡಿಗೆಗೆ ತೆರಳುತ್ತಿದ್ದ (ಕೆಎ೧೨ ಎಲ್೮೪೨೭) ಬೈಕ್ ನಡುವೆ ಅಪಘಾತ ಸಂಭವಿಸಿದೆ.

ಪ್ರಸನ್ನ ಕುಮಾರ್ ಅವರಿಗೆ ಮೊಣಕಾಲು ಹಾಗೂ ಎಡ ಕೈ ಮುರಿದಿದ್ದು, ಆಶಾ ಅವರಿಗೆ ಎಡ ಕೈ ಮುರಿಯಲ್ಪಟ್ಟಿದೆ. ಕಾಲಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಕುಶಾಲನಗರ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಬಳಿಕ ಮಂಗಳೂರಿಗೆ ಸಾಗಿಸಲಾಗಿದೆ.

ಕುಶಾಲನಗರ ಸಂಚಾರಿ ಪೊಲೀಸ್ ಠಾಣಾಧಿಕಾರಿ ಕಾಶಿಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ.