ಮಡಿಕೇರಿ, ಡಿ. ೨೧: ನಿಯಮ ಉಲ್ಲಂಘಿಸಿ ನಗರದಲ್ಲಿ ನಿರ್ಮಾಣ ವಾಗುತ್ತಿರುವ ತಾತ್ಕಾಲಿಕ ಶೆಡ್‌ಗಳ ವಿರುದ್ಧ ಕ್ರಮಕೈಗೊಳ್ಳಬೇಕಾಗಿದೆ. ಹೆದ್ದಾರಿ ಪ್ರಾಧಿಕಾರದ ಸಲಹೆ ಪಡೆದು ಮುಂದುವರೆಯಬೇಕು ಎಂದು ನಗರಸಭೆ ಸಾಮಾನ್ಯ ಸಭೆಯಲ್ಲಿ ಸದಸ್ಯರು ಒತ್ತಾಯಿಸಿದರು.

ನಗರಸಭೆ ಅಧ್ಯಕ್ಷೆ ನೆರವಂಡ ಅನಿತಾ ಪೂವಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಈ ವಿಚಾರ ಪ್ರಸ್ತಾಪಿಸಿದ ಸದಸ್ಯ ಅಮೀನ್ ಮೊಹಿಸಿನ್, ಖಾಸಗಿ ವ್ಯಕ್ತಿಗಳಿಂದ ಜಾಗವನ್ನು ನೆಲಬಾಡಿಗೆ ಆಧಾರದಲ್ಲಿ ಪಡೆದ ಕೆಲವರು ನಗರಸಭೆಗೆ ವಿಸ್ತೀರ್ಣವನ್ನು ಕಡಿಮೆ ತೋರಿಸಿ ಹೆಚ್ಚಿನ ಜಾಗದಲ್ಲಿ ಶೆಡ್ ನಿರ್ಮಿಸಿಕೊಳ್ಳಲು ಮುಂದಾಗಿದ್ದಾರೆ. ಡಿಪೋ ಬಳಿ ಹಾಗೂ ಜ. ತಿಮ್ಮಯ್ಯ ವೃತ್ತದ ಬಳಿ ಈ ಕೆಲಸಗಳು ನಡೆಯುತ್ತಿವೆ. ಇದರ ವಿರುದ್ಧ ಕ್ರಮ ಅಗತ್ಯವಿದೆ. ಡಿಪೋ ಬಳಿ ನಿರ್ಮಾಣ ವಾಗುತ್ತಿರುವ ಶೆಡ್ ಪ್ರದೇಶದಲ್ಲಿ ಪ್ರಾಕೃತಿಕ ವಿಕೋಪ ಸಂಭವಿಸುವ ಸಾಧ್ಯತೆ ಇದೆ ಎಂದ ಅವರು, ಹೆದ್ದಾರಿ ಪ್ರಾಧಿಕಾರದ ಸಲಹೆ ಪಡೆದು ಅವರ ಅನುಮೋದನೆ ದೊರೆತ ಬಳಿಕ ನಿರ್ಮಾಣ ಮುಂದುವರಿಕೆಗೆ ಅವಕಾಶ ನೀಡುವಂತೆ ಒತ್ತಾಯಿಸಿದರು. ಅದುವರೆಗೂ ಕೆಲಸಕ್ಕೆ ನಿರ್ಬಂಧ ಹೇರುವಂತೆ ಹೇಳಿದರು.

ಅದೇ ರೀತಿ ಜನರಲ್ ತಿಮ್ಮಯ್ಯ ವೃತ್ತದ ಬಳಿಯೂ ನಿಯಮ ಮೀರಿ ಹೆಚ್ಚಿನ ತಾತ್ಕಾಲಿಕ ಮಳಿಗೆಯನ್ನು ನಿರ್ಮಿಸಲಾಗುತ್ತಿದೆ ಎಂದು ಗಮನ ಸೆಳೆದರು. ಈ ಬಗ್ಗೆ ಕ್ರಮವಹಿಸುವು ದಾಗಿ ಅಧ್ಯಕ್ಷೆ ಅನಿತಾ ಭರವಸೆ ನೀಡಿದರು.

ಬೀದಿಬದಿ ವ್ಯಾಪಾರಿಗಳನ್ನು ಒಂದೆಡೆ ತಂದು ಶಾಶ್ವತ ನೆಲೆ ಕಲ್ಪಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಲು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ರಾಜಾಸೀಟ್ ಸೇರಿದಂತೆ ನಗರದ ಎಲ್ಲೆಡೆ ಇರುವ ಬೀದಿಬದಿ ವ್ಯಾಪಾರಿಗಳಿಗೆ ಪರ್ಯಾಯ ಜಾಗವನ್ನು ಗುರುತಿಸಲಾಗಿದೆ. ಆದರೆ, ವ್ಯಾಪಾರಿಗಳು ತೀರ್ಮಾನ ತೆಗೆದುಕೊಳ್ಳುತ್ತಿಲ್ಲ. ಈ ಹಿನ್ನೆಲೆ ವ್ಯಾಪಾರಿಗಳು, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಸಭೆ ಮತ್ತೊಮ್ಮೆ ನಡೆಸಿ ಒಮ್ಮತದ ತೀರ್ಮಾನ ನಡೆಸಿ ಶೀಘ್ರದಲ್ಲಿ ಶಾಶ್ವತ ನೆಲೆ ಕಲ್ಪಿಸುವ ಯೋಜನೆಗೆ ಮುಂದಾಗಲು ನಿರ್ಧರಿಸಲಾಯಿತು.

ಅಧ್ಯಕ್ಷೆ ಅನಿತಾ ಮಾತನಾಡಿ, ೪ ಜಾಗಗಳನ್ನು ತೋರಿಸಿದ್ದೇವೆ. ಅದಕ್ಕೆ ಒಪ್ಪಿಗೆಯನ್ನು ವ್ಯಾಪಾರಿಗಳು ನೀಡಿಲ್ಲ. ಸಭೆ ನಡೆಸಿ ಒಮ್ಮತದ ತೀರ್ಮಾನದ ಬಳಿಕವೂ ವ್ಯಾಪಾರಿಗಳು ನಿಯಮ ಪಾಲಿಸದಿದ್ದಲ್ಲಿ ಶಿಸ್ತುಕ್ರಮಕ್ಕೆ ಮುಂದಾಗಲಾಗುವುದು ಎಂದರು.

ಅಧಿಕಾರಿಗಳ ವಿರುದ್ಧ ಸರ್ವ

ಸದಸ್ಯರ ಆಕ್ರೋಶ

ಸಿಬ್ಬಂದಿಗಳ ಕೊರತೆ ಎಂದು ಸಬೂಬು

(ಮೊದಲ ಪುಟದಿಂದ) ಹೇಳುತ್ತ ಜವಾಬ್ದಾರಿಯಿಂದ ಜಾರಿಕೊಳ್ಳುತ್ತಿರುವ ಅಧಿಕಾರಿ ಹಾಗೂ ಸಿಬ್ಬಂದಿಗಳ ವಿರುದ್ಧ ನಗರಸಭೆಯ ಸರ್ವಪಕ್ಷಗಳ ಸದಸ್ಯರು ಆಕ್ರೋಶ ವ್ಯಕ್ತಪಡಿಸಿ ಪೌರಾಯುಕ್ತರು ವರ್ಗಾವÀಣೆಗೊಳ್ಳುವಂತೆ ಆಗ್ರಹಿಸಿದರು.

ಎಲ್ಲಾ ಸದಸ್ಯರು ಅಧಿಕಾರಿ ಹಾಗೂ ಸಿಬ್ಬಂದಿಗಳ ವರ್ತನೆ, ಕೆಲಸ ಮಾಡುತ್ತಿರುವ ರೀತಿಯನ್ನು ಖಂಡಿಸಿದರು. ಸದಸ್ಯ ಕೆ.ಎಸ್. ರಮೇಶ್ ಮಾತನಾಡಿ, ಉಡಾಫೆ ವರ್ತನೆ ತೋರುವ ಅಧಿಕಾರಿಗಳನ್ನು ವರ್ಗಾವಣೆಗೊಳಿಸಬೇಕು. ನಗರಸಭೆ ಸದಸ್ಯರನ್ನು ಅವಹೇಳನ ಮಾಡಿ ಅವಮಾನಿಸಿದ ಸಿಬ್ಬಂದಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ತಾನು ವೈಯಕ್ತಿಕವಾಗಿ ನ್ಯಾಯಾಂಗದ ಮೊರೆ ಹೋಗುತ್ತೇನೆ ಎಂದು ಎಚ್ಚರಿಸಿದರು.

ಸದಸ್ಯ ಅಮೀನ್ ಮೊಹಿಸಿನ್, ಸಿಬ್ಬಂದಿಗಳ ವರ್ತನೆ ಜನಾಕ್ರೋಶಕ್ಕೆ ಕಾರಣವಾಗಿದೆ. ಸಮರ್ಪಕವಾಗಿ ಕೆಲಸಗಳಾಗದೆ ಜನರು ಸಿಬ್ಬಂದಿಗಳನ್ನು ನೇರವಾಗಿ ಬೈಯುತ್ತ, ಹಲ್ಲೆಗೂ ಮುಂದಾದ ಘಟನೆಗಳು ನಡೆದಿವೆ. ಆದರೂ, ಅಧಿಕಾರಿಗಳು ಕೆಲಸದ ವೈಖರಿ ಬದಲಾಯಿಸದೆ ಜನರನ್ನು ಮತ್ತಷ್ಟು ಸಂಕಟಕ್ಕೆ ದೂಡಿ ಸಮಸ್ಯೆ ಸೃಷ್ಟಿಸುತ್ತಿದ್ದಾರೆ. ೪-೫ ಸಿಬ್ಬಂದಿಗಳು ಇಡೀ ನಗರಸಭೆಯನ್ನು ನಿಯಂತ್ರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಸದಸ್ಯ ಉಮೇಶ್ ಸುಬ್ರಮಣಿ, ಸಭೆಯಲ್ಲಿ ಪ್ರಸ್ತಾಪವಾಗಿ ನಿರ್ಣಯವಾಗುವ ವಿಚಾರಗಳು ಕಾರ್ಯಗತವಾಗುತ್ತಿಲ್ಲ. ಅಧ್ಯಕ್ಷರು-ಪೌರಾಯುಕ್ತರು ಸಮನ್ವಯತೆ ಸಾಧಿಸಿ ಮುನ್ನಡೆಯಬೇಕೆಂದು ಸಲಹೆ ನೀಡಿದರು.

ಅರುಣ್ ಶೆಟ್ಟಿ ಮಾತನಾಡಿ, ನಗರದಲ್ಲಿ ಆಡಳಿತ ಕುಸಿಯಲು ಪೌರಾಯುಕ್ತರು ಕಾರಣವಾಗಿದ್ದಾರೆ ಎಂದು ನೇರ ಆರೋಪ ಮಾಡಿದರು.

ಸದಸ್ಯ ಕಾಳಚಂಡ ಅಪ್ಪಣ್ಣ ಮಾತನಾಡಿ, ಸಕಾಲದಡಿ ೨೧ ಸೌಲಭ್ಯ ದೊರೆಯಬೇಕು. ಆದರೆ, ಕೇವಲ ೪-೫ ಸೌಲಭ್ಯ ಜನರಿಗೆ ದೊರೆಯುತಿದ್ದು, ನಿಗದಿತ ದಿನಗಳಲ್ಲಿಯೂ ಕೆಲಸ ಪೂರ್ಣಗೊಳ್ಳುತ್ತಿಲ್ಲ. ಇತರ ನಗರಸಭೆಗಳಿಗೆ ಹೋಲಿಸಿದರೆ ಮಡಿಕೇರಿಯಲ್ಲಿ ಜನಸಂಖ್ಯೆ ಕಡಿಮೆ ಇದೆ. ಇರುವ ಸಿಬ್ಬಂದಿಗಳನ್ನು ಬಳಸಿ ಪರಿಣಾಮಕಾರಿ ಕೆಲಸ ಮಾಡಲು ಸಾಧ್ಯವಿದೆ. ಆದರೆ, ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದ ಕೆಲಸಗಳು ಆಗುತ್ತಿಲ್ಲ ಎಂದು ದೂರಿದರು.

ಮಹೇಶ್ ಜೈನಿ ಮಾತನಾಡಿ, ಪೌರಾಯುಕ್ತರು ಉತ್ಸಾಹ ಕಳೆದುಕೊಂಡಿದ್ದಾರೆ. ಸಿಬ್ಬಂದಿಗಳು ಹಾಗೂ ಜನಪ್ರತಿನಿಧಿಗಳ ನಡುವೆ ಕಂದಕವನ್ನು ಪೌರಾಯುಕ್ತರೇ ಸೃಷ್ಟಿಸಿದ್ದಾರೆ. ಕೆಲಸಗಳನ್ನು ಮಾಡಿಸಿಕೊಳ್ಳಲು ಸಿಬ್ಬಂದಿಗಳ ಬಳಿ ತೆರಳಿದರೆ ಪೌರಾಯುಕ್ತರ ನಿರ್ದೇಶನವಿಲ್ಲ ಎಂದು ವಿಚಾರವನ್ನು ಕಗ್ಗಂಟು ಮಾಡಲಾಗುತ್ತಿದೆ. ಸಿಬ್ಬಂದಿಗಳು ಮನಬಂದAತೆ ರಜೆ ಪಡೆದುಕೊಳ್ಳುತ್ತಿದ್ದಾರೆ. ಇದರ ಬದಲು ನಗರಸಭೆ ಬೀಗ ಹಾಕಬಹುದು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪೌರಾಯುಕ್ತರನ್ನು ವರ್ಗಾವಣೆಗೊಳಿಸಿ

ಪೌರಾಯುಕ್ತ ವಿಜಯ ಅವರನ್ನು ವರ್ಗಾವಣೆಗೊಳಿಸುವಂತೆ ಸದಸ್ಯರು ಪಟ್ಟು ಹಿಡಿದರು. ಈಗಾಗಲೇ ಬದಲಾವಣೆಗೆ ಒತ್ತಾಯಿಸಿ ೨೩ ಸದಸ್ಯರು ಪತ್ರಕ್ಕೆ ಸಹಿ ಹಾಕಿದ್ದೇವೆ. ಆದರೆ, ಅಧ್ಯಕ್ಷರು ಪ್ರಕ್ರಿಯೆ ಮುಂದುವರೆಸದ ಬಗ್ಗೆ ಆಕ್ಷೇಪಗಳು ಕೇಳಿಬಂದವು. ಸದಸ್ಯ ಅಮೀನ್ ಮೊಹಿಸಿನ್ ಮಾತನಾಡಿ, ಸಿಬ್ಬಂದಿಗಳನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಬೇಕಾದ ಅಧ್ಯಕ್ಷರು ವೈಫಲ್ಯ ಅನುಭವಿಸಿದ್ದಾರೆ. ವಿಶೇಷ ಸಭೆ ನಡೆಸಿ ಪೌರಾಯುಕ್ತರ ಬದಲಾವಣೆ ಕುರಿತು ಪ್ರಕ್ರಿಯೆ ನಡೆಯಬೇಕಿತ್ತು ಎಂದರು.

ಸದಸ್ಯೆ ಸಬಿತಾ ಮಾತನಾಡಿ, ಅಭಿವೃದ್ಧಿ ವಿಚಾರ ಕುರಿತು ಚರ್ಚಿಸಲು ಕರೆ ಮಾಡಿದರೆ, ‘ಹೀಗೆ ಆದರೆ ಆತ್ಮಹತ್ಯೆ ಮಾಡಿಕೊಳ್ಳಬೇಕು’ ಎಂದು ಪೌರಾಯುಕ್ತರು ಹೆದರಿಸುತ್ತಾರೆ ಎಂದರು.

ಮರಣದಂಡನೆಗೂ ಸಿದ್ಧ

ತಾನು ಸಿಬ್ಬಂದಿಗಳ ದಿಕ್ಕು ತಪ್ಪಿಸಿ ಸದಸ್ಯರಿಗೆ ಅಗೌರವ ತರುವ ಕೆಲಸ ಮಾಡುತ್ತಿದ್ದೇನೆ ಎಂದು ಯಾರಾದರೂ ಸಾಬೀತುಪಡಿಸಿದ್ದಲ್ಲಿ ಮರಣದಂಡನೆ ಶಿಕ್ಷೆ ಪಡೆಯಲು ಸಿದ್ಧ ಎಂದು ಪೌರಾಯುಕ್ತ ವಿಜಯ ಸವಾಲು ಹಾಕಿದರು.

ಸದಸ್ಯರ ಆರೋಪಗಳಿಗೆ ಉತ್ತರಿಸಿದ ಅವರು, ಉತ್ಸಾಹ ಕಳೆದುಕೊಂಡಿರುವುದು ನಿಜ. ಹಲವು ಸಿಬ್ಬಂದಿಗಳು ವರ್ಗಾವಣೆಯಾದ ಬಳಿಕ ತನ್ನ ಬಲ ಕುಗ್ಗಿದೆ. ಬೇರೆ ಕಾರಣವಲ್ಲ ಎಂದರು.

ತಿಂಗಳಿಗೊಮ್ಮೆ ಸಭೆ ನಡೆಸಿ

ಸಾಮಾನ್ಯ ಸಭೆಯನ್ನು ೩-೪ ತಿಂಗಳಿಗೊಮ್ಮೆ ಸಭೆ ನಡೆಸುತ್ತಿರುವ ಪರಿಣಾಮ ಅಭಿವೃದ್ಧಿ ವಿಚಾರ ಚರ್ಚಿಸಿ ಅದಕ್ಕೆ ಪರಿಹಾರ ಹುಡುಕಲು ಅಸಾಧ್ಯ ಪರಿಸ್ಥಿತಿ ಸೃಷ್ಟಿಯಾಗಿದೆ ಎಂದು ಅಮೀನ್ ಮೊಹಿಸಿನ್ ಅಭಿಪ್ರಾಯಪಟ್ಟರು.

ತಿಂಗಳಿಗೊಮ್ಮೆ ಸಾಮಾನ್ಯ ಸಭೆ, ೧೫ ದಿನಕ್ಕೊಮ್ಮೆ ಸ್ಥಾಯಿ ಸಮಿತಿ ಸಭೆಯನ್ನು ನಡೆಸಬೇಕು. ನಗರೋತ್ಥಾನ ಹೊರತುಪಡಿಸಿ ಬೇರೆ ಮೂಲಗಳಿಂದ ಅನುದಾನ ಲಭ್ಯವಾಗುತ್ತಿಲ್ಲ. ಸರಕಾರದ ಬಳಿ ನಿಯೋಗ ತೆರಳುವ ನಿಟ್ಟಿನಲ್ಲಿ ಶಾಸಕರ ಗಮನ ಸೆಳೆಯಬೇಕು. ನಗರೋತ್ಥಾನದ ಅನುದಾನ ಬಂದು ೮ ತಿಂಗಳಾದರೂ ಒಂದೇ ಒಂದು ಕೆಲಸ ನಡೆದಿಲ್ಲ. ನಗರದ ಜ್ವಲಂತ ಸಮಸ್ಯೆಗಳು ಹಾಗೆಯೇ ಇವೆ. ತೆರಿಗೆ ಸಮರ್ಪಕವಾಗಿ ಸಂಗ್ರಹವಾಗುತ್ತಿಲ್ಲ. ಕಾವೇರಿ ಕಲಾಕ್ಷೇತ್ರ ಕೆಡವಿ ನೂತನ ಕಟ್ಟಡ ನಿರ್ಮಾಣಕ್ಕೆ ಕ್ರಿಯಾ ಯೋಜನೆ ತಯಾರಾದರೂ ಪ್ರಕ್ರಿಯೆ ಮುಂದುವರೆಯದ ಕುರಿತು ಆಕ್ಷೇಪಿಸಿದರು.

ಇದಕ್ಕೆ ಉತ್ತರಿಸಿದ ಅಧ್ಯಕ್ಷೆ ಅನಿತಾ, ಸಭೆ ನಡೆಸಲು ಕೆಲ ಸಮಸ್ಯೆಗಳು ಉಂಟಾಯಿತು. ಜಮೆ ಖರ್ಚಿನ ವಿವರ ಒದಗಿಸಬೇಕಾದ ಲೆಕ್ಕಿಗ ಇಲ್ಲದ ಕಾರಣ ಸಭೆ ನಡೆಸಲು ಸಾಧ್ಯವಾಗಿಲ್ಲ. ಜೊತೆಗೆ ಪೌರಾಯುಕ್ತರು ಲಭ್ಯವಿರಲಿಲ್ಲ ಎಂದು ತಿಳಿಸಿದರು.

ಸದಸ್ಯ ರಾಜೇಶ್ ಯಲ್ಲಪ್ಪ ಮಾತನಾಡಿ, ೪-೫ ತಿಂಗಳಿಗೊಮ್ಮೆ ಸಭೆ ನಡೆಸುವುದರಿಂದ ನಿರೀಕ್ಷಿತ ಫಲಿತಾಂಶ ಸಿಗುತ್ತಿಲ್ಲ. ಇತಿಹಾಸದಲ್ಲಿ ಸದಸ್ಯರಿಗೆ ಈ ರೀತಿ ಆಕ್ರೋಶ ವ್ಯಕ್ತವಾಗಿಲ್ಲ. ಜನರು ದಂಗೆ ಎದ್ದು, ನಗರಸಭೆಗೆ ಕಲ್ಲು ಹೊಡೆಯುವ ಮುನ್ನ ಎಚ್ಚೆತ್ತುಕೊಳ್ಳಬೇಕೆಂದರು.

ಮಾರುಕಟ್ಟೆ ಶೆಡ್ ನಿರ್ಮಾಣ

ಮಾರುಕಟ್ಟೆ ಆವರಣದಲ್ಲಿ ಮಾಂಸ ಮಳಿಗೆಗಳ ಶೆಡ್ ನಿರ್ಮಾಣದ ವಿಳಂಬ ಕುರಿತು ಹಲವು ಸದಸ್ಯರು ಪ್ರಸ್ತಾಪಿಸಿದರು.

ಇದಕ್ಕೆ ಉತ್ತರ ನೀಡಿದ ಪೌರಾಯಕ್ತ ವಿಜಯ, ಈಗಾಗಲೇ ಇ-ಟೆಂಡರ್ ಆಹ್ವಾನಿಸಿದ್ದೇವೆ. ಆದರೆ, ಅರ್ಹತೆಯ ಟೆಂಡರ್‌ದಾರರು ಪಾಲ್ಗೊಳ್ಳದ ಕಾರಣ ತಿರಸ್ಕೃತಗೊಂಡಿದೆ. ಮರುಟೆಂಡರ್ ಕರೆಯಲಾಗಿದೆ ಎಂದು ಮಾಹಿತಿ ನೀಡಿದರು.

ರಸ್ತೆಗಳ ದುಸ್ಥಿತಿ ಬಗ್ಗೆ ಪ್ರಶ್ನಿಸಿದ ಸದಸ್ಯರು, ಮಳೆಗಾಲಕ್ಕೆ ಮುನ್ನ ರಸ್ತೆ ಕಾಮಗಾರಿ ನಡೆಸುವಂತೆ ಒತ್ತಾಯಿಸಿದರು. ಟೆಂಡರ್ ವಿಳಂಬದ ಬಗ್ಗೆ ಬೇಸರ ವ್ಯಕ್ತಪಡಿಸಿದರು. ಕೂಟುಹೊಳೆಗೆ ಹೊಸ ಮೋಟರು ಖರೀದಿ ಮಾಡಬೇಕು, ತ್ಯಾಜ್ಯ ವಿಲೇವಾರಿಗೆ ಗುರುತಿಸಿರುವ ಜಾಗಕ್ಕೆ ಅರಣ್ಯ ಇಲಾಖೆ ನಿರಪೇಕ್ಷಣಾ ಪತ್ರ ಪಡೆಯಲು ಕ್ರಮವಹಿಸಬೇಕೆಂದು ಸಭೆಯಲ್ಲಿ ಪ್ರಸ್ತಾಪವಾಯಿತು.

ಲೋಕಾಯುಕ್ತ ದೂರು ಸಲ್ಲಿಸೋಣ

ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಮೀಸಲಾದ ಅನುದಾನ ಸರಿಯಾಗಿ ವಿನಿಯೋಗವಾಗದ ಬಗ್ಗೆ ಸದಸ್ಯ ಮನ್ಸೂರ್ ಅಲಿ ಪ್ರಸ್ತಾಪಿಸಿದರು. ಸದಸ್ಯೆ ಶ್ವೇತಾ ಪ್ರಶಾಂತ್ ಕೂಡ ಧ್ವನಿಗೂಡಿಸಿ ಅನುದಾನ ಎಸ್.ಸಿ, ಎಸ್.ಟಿ. ಜನಸಂಖ್ಯೆ ಇರುವ ಪ್ರದೇಶಗಳಿಗೆ ತಲುಪುತ್ತಿಲ್ಲ ಎಂದರು. ಫಲಾನುಭವಿಗಳಲ್ಲದವರು ಇದರ ಸವಲತ್ತು ಪಡೆಯುತ್ತಿದ್ದಾರೆ. ಇದರ ವಿರುದ್ಧ ತನಿಖೆಯಾಗಬೇಕು. ಅಗತ್ಯ ಬಿದ್ದಲ್ಲಿ ಲೋಕಾಯುಕ್ತಕ್ಕೂ ದೂರು ಸಲ್ಲಿಸುವುದಾಗಿ ಮನ್ಸೂರ್ ಹೇಳಿದರು.

ಕಾರ್ಯಾದೇಶ ಸಿಗದೆ ತೆರಿಗೆ ಸಂಗ್ರಹ

ಮಾರುಕಟ್ಟೆ ವ್ಯಾಪ್ತಿಯಲ್ಲಿ ಕಾರ್ಯಾದೇಶ ಪಡೆಯದೆ ಸಂಗ್ರಹ ಮಾಡಲಾಗುತ್ತಿದೆ ಎಂದು ಎಸ್.ಸಿ. ಸತೀಶ್ ಪ್ರಸ್ತಾಪಿಸಿದರು. ಟೆಂಡರ್ ಪಡೆದ ವ್ಯಕ್ತಿಗೆ ಇನ್ನೂ ಕಾರ್ಯಾದೇಶ ದೊರೆತಿಲ್ಲ. ಆದರೆ, ಮಾರುಕಟ್ಟೆಯಲ್ಲಿ ಸುಂಕ ಸಂಗ್ರಹಕ್ಕೆ ಮುಂದಾಗಿದ್ದಾರೆ. ಈ ಬಗ್ಗೆ ಕ್ರಮಕ್ಕೆ ಆಗ್ರಹಿಸಿದರು. ಈ ಬಗ್ಗೆ ಸಂಬAಧಪಟ್ಟವರಿಗೆ ಸೂಚಿಸಲಾಗಿದೆ. ಇದುವರೆಗೂ ಯಾವುದೇ ಕ್ರಮವಾಗಿಲ್ಲ ಎಂದು ಕಂದಾಯ ಅಧಿಕಾರಿ ತಾಹೀರ್ ಹೇಳಿದರು. ನಗರಸಭೆ ವ್ಯಾಪ್ತಿಯ ಸರಹದ್ದನ್ನು ಗುರುತಿಸುವ ಕೆಲಸವಾಗಬೇಕೆಂದು ಉಮೇಶ್ ಸುಬ್ರಮಣಿ ಹೇಳಿದರು.

ಸಭೆಯಲ್ಲಿ ಉಪಾಧ್ಯಕ್ಷೆ ಸವಿತಾ ರಾಕೇಶ್, ಸದಸ್ಯರುಗಳು, ವಿವಿಧ ಹಂತದ ಅಧಿಕಾರಿಗಳು ಹಾಜರಿದ್ದರು.