*ಗೋಣಿಕೊಪ್ಪ, ಡಿ. ೨೨: ಜೇನು ಕೃಷಿ ತರಬೇತಿ, ಪ್ರಾತ್ಯಕ್ಷಿಕೆ ಕಾರ್ಯಕ್ರಮವನ್ನು ರೈತ ಉತ್ಪಾದಕ ಸಂಸ್ಥೆಯ ಸದಸ್ಯರಿಗೆ ಪೊನ್ನಂಪೇಟೆಯ ಅರಣ್ಯ ಮಹಾ ವಿದ್ಯಾಲಯದಲ್ಲಿ ನಡೆಸಲಾಯಿತು.

ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ವ್ಯಾಪ್ತಿಯ ಮಡಿಕೇರಿ ವಿಸ್ತರಣಾ ಶಿಕ್ಷಣ ಘಟಕ ಸಹಯೋಗದಲ್ಲಿ ಎರಡು ದಿನಗಳ ಕಾರ್ಯಕ್ರಮವನ್ನು ಮಹಾವಿದ್ಯಾಲಯದ ಪ್ರಬಾರ ಡೀನ್ ಡಾ. ಎಂ. ಜಡೇಗೌಡ ನೆರವೇರಿಸಿದರು.

ಜೀವ ವೈವಿಧ್ಯತೆಯ ಸಂರಕ್ಷಣೆಯಲ್ಲಿ ಜೇನು ನೊಣಗಳ ಪಾತ್ರ ಪ್ರಮುಖ ವಾದುದ್ದು. ಜೇನು ಸಾಕಣೆ ಕೃಷಿಕರಿಗೆ ಆದಾಯವನ್ನು ತಂದುಕೊಡುವ ಒಂದು ಉತ್ತಮ ಕಸುಬಾಗಿದೆ. ಹೆಚ್ಚು ಹೆಚ್ಚು ಜೇನು ಸಾಕಣೆ ಮಾಡಿ ಹಾಗೆಯೇ ಇತರರೂ ಜೇನು ಸಾಕಣೆ ಮಾಡುವಂತೆ ಪ್ರೋತ್ಸಾಹಿಸಿ ಎಂದು ಈ ಸಂದರ್ಭ ರೈತರಿಗೆ ತಿಳಿಸಿದರು. ವಿಸ್ತರಣಾ ಶಿಕ್ಷಣ ಘಟಕದ ಮುಖ್ಯಸ್ಥ ಡಾ. ಆರ್.ಎನ್. ಕೆಂಚರೆಡ್ಡಿ, ಜೇನು ಕುಟುಂಬ ನಿರ್ವಾಹಣೆ ಕ್ರಮಗಳ ಬಗ್ಗೆ ಸಾಮಾನ್ಯ ತೊಂದರೆಗಳ ಬಗ್ಗೆ ಹಾಗೂ ಮೌಲ್ಯವರ್ಧಿತ ಉತ್ಪನ್ನಗಳ ತಯಾರಿಕೆಯ ಬಗ್ಗೆ ಮಾಹಿತಿ ನೀಡಿದರು. ಮಹಾವಿದ್ಯಾಲಯದ ಮಧುವನದಲ್ಲಿ ಜೇನು ಕುಟುಂಬಗಳ ವಿಭಜನೆ, ಒಟ್ಟುಗೂಡಿಸುವಿಕೆ ಹಾಗೂ ಮುಜೆಂಟಿ ಜೇನು ನೊಣಗಳ ಬಗ್ಗೆ ಪ್ರಾತ್ಯಕ್ಷಿಕೆಯನ್ನು ವಿದ್ಯಾರ್ಥಿಗಳು ನಡೆಸಿಕೊಟ್ಟರು.

ರೈತ ಉತ್ಪಾದಕ ಸಂಸ್ಥೆಯ ಪ್ರತಿನಿಧಿ ಡಾ. ರಾಜೇಂದ್ರ ಹೆಗಡೆ ಅವರು, ಜೇನು ಕೃಷಿಯಲ್ಲಿ ತೊಡಗಿಕೊಂಡು ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸಿ, ಮಾರಾಟ ಮಾಡಿ ಹೆಚ್ಚು ಲಾಭಗಳಿಸಿಕೊಳ್ಳುವುದರ ಜೊತೆಗೆ ಪರಿಸರದ ಸಮತೋಲನ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಶ್ರಮಿಸಬೇಕೆಂದು ಮಾಹಿತಿ ನೀಡಿದರು.