ಕುಶಾಲನಗರ, ಡಿ. ೨೨: ಕುಶಾಲನಗರ ಸಮೀಪದ ಕೊಡಗರಹಳ್ಳಿ ಬಳಿ ಕಾಫಿ ತೋಟದ ಒಳಭಾಗದಲ್ಲಿ ಶುಂಠಿ ಬೆಳೆಯಲು ೩೫ ಎಕರೆ ವ್ಯಾಪ್ತಿಯಲ್ಲಿ ನಡೆದ ಮರಗಳ ಮಾರಣಹೋಮ ಪ್ರಕರಣದಲ್ಲಿ ದಿನ ಕಳೆದಂತೆ ನಿಗೂಢ ರಹಸ್ಯಗಳು ಹೊರಬೀಳಲು ಪ್ರಾರಂಭಗೊAಡಿದೆ.

ನೂರಾರು ಎಕರೆ ಕಾಫಿ ತೋಟದ ನಡುವೆ ಸಾವಿರಾರು ಮರಗಳ ಮಾರಣಹೋಮ ಆಗುವುದರೊಂದಿಗೆ ಭಾರೀ ಬೆಲೆ ಬಾಳುವ ಬೀಟೆ, ನಂದಿ ಮತ್ತಿತರ ಮರಗಳು ಸಾಗಾಟಗೊಂಡಿರುವ ಕುರುಹುಗಳು ಅಲ್ಲಲ್ಲಿ ಕಂಡು ಬರುತ್ತಿವೆ. ಕೆಲವೆಡೆ ಬಿಟಿಮರಗಳ ಬುಡಗಳು ಗೋಚರಿಸಿವೆ. ಕೆಲವು ಬೀಟೆ ಮರಗಳು ಈ ಪ್ರದೇಶದಲ್ಲಿ ಬಿದ್ದಿರೋ ದೃಶ್ಯಗಳು ಕಂಡು ಬಂದಿವೆ. ಇವುಗಳ ಬಗ್ಗೆ ಪ್ರಥಮ ವರ್ತಮಾನ ಮಾಹಿತಿ ವರದಿಯಲ್ಲಿ ದಾಖಲಿಸದೇ ಇರುವುದು ಸಂಶಯಕ್ಕೆ ಎಡೆ ಮಾಡುತ್ತಿದೆ.

ನೂರಾರು ಮರಗಳ ಹನನ ವಾಗಿದ್ದರೂ, ಅರಣ್ಯ ಅಧಿಕಾರಿಗಳು ದಾಖಲಿಸಿರುವ ಅರಣ್ಯ ಮೊಕದ್ದಮೆ ಮಾಹಿತಿಯಲ್ಲಿ ೨ ಅಂಕಿಗಳಷ್ಟೇ ಮರಗಳ ಸಂಖ್ಯೆಯನ್ನು ತೋರಿಸಿದ್ದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಒಂದೇ ಪ್ರಕರಣಕ್ಕೆ ಎರಡು ಎಫ್.ಐ.ಆರ್.ಗಳನ್ನು ನಮೂದಿಸಿ ರುವುದು, ಸ್ಥಳೀಯ ಅರಣ್ಯ ಅಧಿಕಾರಿಗಳ ನಡೆಯಲ್ಲಿ ಹಲವು ಅನುಮಾನಗಳನ್ನು ಮೂಡಿಸಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದಂತೆ ಕಂಡುಬರುತ್ತಿಲ್ಲ.

ಸ್ಥಳದಲ್ಲಿ ಬೆಲೆಬಾಳುವ ಬೀಟೆ ಮರಗಳು ಬಿದ್ದಿದ್ದರೂ ಅವುಗಳನ್ನು ನಮೂದಿಸದೆ ಇರುವುದು, ಎಫ್.ಐ.ಆರ್.ನಲ್ಲಿ ಆ ವ್ಯಾಪ್ತಿಯ ಸರ್ವೆ ನಂಬರ್ ದಾಖಲಿಸದೇ ಇರುವುದು, ವಾಹನಗಳನ್ನು ಜಪ್ತಿಪಡಿಸಿದ್ದು ವಾಹನಗಳ ಮಾಲೀಕರ ಮತ್ತು ವಾಹನ ಚಾಲಕರ ಹೆಸರನ್ನು ಕೈ ಬಿಟ್ಟಿರುವುದು, ಮರಗಳ ಸಾಗಾಟ ಮಾಡಿರುವುದನ್ನು ದಾಖಲಿಸದೆ ಇರುವುದು ಕಂಡು ಬರುತ್ತಿದೆ.

ಮರಗಳ ಹನನ ಪ್ರಕರಣ ಗಂಭೀರ ಪ್ರಕರಣವಾಗಿದ್ದು ವಶಪಡಿಸಿಕೊಂಡ ವಾಹನಗಳ ಇತ್ಯಾದಿ ವಿವರಗಳನ್ನು ಮತ್ತು ಸಂಪೂರ್ಣ ಮಾಹಿತಿಯನ್ನು ಅರಣ್ಯ ಅಧಿಕಾರಿಗಳು ಮಾಧ್ಯಮಗಳಿಗೆ ಬಹಿರಂಗಗೊಳಿಸದೆ ಮೌನವಾಗಿ ರುವುದು ಇಲ್ಲಿ ಎದ್ದು ಕಾಣುತ್ತಿದೆ.

ಖಾಸಗಿ ಕಾಫಿ ತೋಟಗಳಲ್ಲಿ ಗಿಡಗಳ ಅಭಿವೃದ್ಧಿಗೆ ನೆರಳನ್ನು ತಪ್ಪಿಸಲು ಮರಗಳ ರೆಂಬೆ ಕೊಂಬೆಗಳನ್ನು ತೆರವುಗೊಳಿಸಲು ಅವಕಾಶ ಇದೆಯೇ ಹೊರತು ವಾಣಿಜ್ಯ ಬೆಳೆ, ಶುಂಠಿ ಮತ್ತು ಇತರ ಬೆಳೆಗಳಿಗೆ ಮರಗಳನ್ನು ತುಂಡರಿಸುವ ಅವಕಾಶ ಇರುವುದಿಲ್ಲ. ಇದು ಸುಪ್ರೀಂಕೋರ್ಟ್ ಆದೇಶ ಉಲ್ಲಂಘಿಸಿದAತಾಗಿದ್ದು, ಇದೊಂದು ಗಂಭೀರ ಪ್ರಕರಣ ಎಂದೇ ಪರಿಗಣಿಸಬೇಕಾಗಿದೆ ಎನ್ನುವುದು ಸಾರ್ವಜನಿಕರ ಅಭಿಪ್ರಾಯ. ಈ ನಡುವೆ ತನಿಖಾಧಿಕಾರಿಯಾಗಿ ನೇಮಕಗೊಂಡಿರುವ ಸೋಮವಾರಪೇಟೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಗೋಪಾಲ್ ಸಮಗ್ರ ಮಾಹಿತಿ ಕಲೆ ಹಾಕುತ್ತಿದ್ದಾರೆ.

ಈ ಎಲ್ಲ ಪ್ರಶ್ನೆಗಳಿಗೆ ‘ಶಕ್ತಿ’ ಯೊಂದಿಗೆ ಪ್ರತಿಕ್ರಿಯಿಸಿರುವ ಮಡಿಕೇರಿ ವಿಭಾಗದ ಅರಣ್ಯ ಉಪ ಸಂರಕ್ಷಣಾಧಿಕಾರಿ ಬಿ. ಭಾಸ್ಕರ್ ಈ ಬಗ್ಗೆ ತನಿಖಾಧಿಕಾರಿಗಳು ಗಮನಹರಿಸಿ ಕ್ರಮ ಕೈಗೊಳ್ಳಲಿದ್ದಾರೆ. ಈಗಾಗಲೇ ಸಂಬAಧಿಸಿದ ಅಧಿಕಾರಿಗಳಿಗೆ ಸಮಜಾಯಿಷಿಕೆ ಕೇಳಿ ಇಲಾಖೆ ನೋಟಿಸ್ ನೀಡಲಾಗಿದೆ ಎಂದು ಹೇಳಿದ್ದಾರೆ.

ಸ್ಥಳದಿಂದ ಮರಗಳ ಸಾಗಾಟವಾಗಿರುವ ಬಗ್ಗೆ ಸಮಗ್ರ ಪರಿಶೀಲನೆ ನಡೆಯುತ್ತಿದೆ. ಮೂರು ದಿನಗಳ ಒಳಗೆ ಹಿರಿಯ ಅಧಿಕಾರಿ ಗಳಿಗೆ ವರದಿ ಸಲ್ಲಿಸಲಾಗುವುದು. ವಶಪಡಿಸಿಕೊಂಡ ವಾಹನಗಳ ಬಗ್ಗೆ ಮತ್ತು ಅವುಗಳ ಮಾಲೀಕರು, ಚಾಲಕರ ಬಗ್ಗೆ ಕೂಡ ವಿವರ ಸಂಗ್ರಹಿಸಲಾಗುತ್ತಿದೆ ಎಂದರು.

ಕೊಡಗು ಜಿಲ್ಲಾ ಅರಣ್ಯ ಸಂಚಾರಿ ದಳ ಮತ್ತು ಅರಣ್ಯ ಇಲಾಖೆಗೆ ಸಹಕಾರಿಯಾಗಿರುವ ಪೊಲೀಸ್ ಅರಣ್ಯ ಸಂಚಾರಿ ದಳ ಸಂಪೂರ್ಣ ನಿಷ್ಕಿçಯವಾಗಿರುವ ಬಗ್ಗೆ ಕೂಡ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗುತ್ತಿದೆ. ಜಿಲ್ಲೆಯ ಕಾಡುಗಳು ಬರಿದಾಗುವ ಮುನ್ನ ಎಲ್ಲರೂ ಎಚ್ಚೆತ್ತುಕೊಳ್ಳಬೇಕಾಗಿದೆ.

‘ಶಕ್ತಿ’ಯಲ್ಲಿ ವಿಶೇಷ ವರದಿ ಪ್ರಕಟಗೊಂಡ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಬಿತ್ತರ ಗೊಂಡು ಇದೀಗ ಪ್ರಕರಣ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಅರಣ್ಯ ಪಡೆ ಮುಖ್ಯಸ್ಥರ ಅಂಗಳಕ್ಕೆ ತಲುಪಿದ್ದು, ಪ್ರಕರಣದ ಬಗ್ಗೆ ಸಮಗ್ರ ವರದಿ ನೀಡುವಂತೆ ಮಡಿಕೇರಿ ವಿಭಾಗದ ಹಿರಿಯ ಅಧಿಕಾರಿಗಳಿಗೆ ಸೂಚನೆ ದೊರೆತಿದೆ.