ಐಗೂರು ಗ್ರಾಮಸಭೆಯಲ್ಲಿ ಒತ್ತಾಯ
ಐಗೂರು, ಡಿ. ೨೨: ಎಡವನಾಡಿನ ಸಮುದಾಯ ಭವನದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಜಿ.ಕೆ. ವಿನೋದ್ ಅಧ್ಯಕ್ಷತೆಯಲ್ಲಿ ಐಗೂರು ಗ್ರಾಮ ಪಂಚಾಯಿತಿ ಗ್ರಾಮಸಭೆ ನಡೆಯಿತು. ಯಡವನಾಡಿನಲ್ಲಿ ನರೇಗಾ ಯೋಜನೆಯ ಬಗ್ಗೆ ಮತ್ತು ಆನೆಗಳ ಹಾವಳಿಗೆ ಬ್ಯಾರಿಕೇಡ್ ವಿಸ್ತರಿಸುವ ಬಗ್ಗೆ ಗ್ರಾ.ಪಂ. ಮಾಜಿ ಅಧ್ಯಕ್ಷ ರಮೇಶ್ ಪ್ರಸ್ತಾಪಿಸಿದರು. ಗ್ರಾಮಸ್ಥರು ನಿರ್ಣಯ ಮಾಡಿ ಪಂಚಾಯಿತಿಗೆ ತಿಳಿಸಿದರೆ ಕ್ರಮ ಕೈಗೊಳ್ಳುವುದಾಗಿ ಸಮಾಜ ಕಲ್ಯಾಣ ಅಧಿಕಾರಿ ಸಭೆಗೆ ಉತ್ತರಿಸಿದರು.
ಐಗೂರು ಪಂಚಾಯಿತಿ ವ್ಯಾಪ್ತಿಯಲ್ಲಿ ಅನಧಿಕೃತ ಮದ್ಯದ ಅಂಗಡಿಗಳ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಿದ್ದು, ಮದ್ಯ ಮಾರಾಟಗಾರರ ಬಗ್ಗೆ ಇಲಾಖೆಗೆ ತಿಳಿಸಿದರೂ ಕ್ರಮವಹಿಸುತ್ತಿಲ್ಲ, ಇಲಾಖೆಗೆ ಸಾರ್ವಜನಿಕರು ನೀಡಿದ ಮಾಹಿತಿ ಸೋರಿಕೆಯಾಗುತ್ತಿದ್ದು, ಮಾಹಿತಿ ನೀಡಿದವರಿಗೆ ಭದ್ರತೆ ಇಲ್ಲದಾಗಿದೆ ಎಂದು ಗ್ರಾಮಸ್ಥರಾದ ಅವಿನಾಶ್, ಸುಬ್ರಮಣಿ, ಟಿ.ಕೆ. ರಮೇಶ್ ಮತ್ತು ವಿನೋದ್ ಗಂಭೀರ ಆರೋಪ ಮಾಡಿದರು.
ಪೊಲೀಸರು ಮತ್ತು ಅಬಕಾರಿ ಇಲಾಖೆಯವರು ಜಂಟಿ ಕಾರ್ಯಾಚರಣೆ ನಡೆಸಿ ಸಮಸ್ಯೆ ಪರಿಹರಿಸುವಂತೆ ಒತ್ತಾಯಿಸಿದರು. ಐಗೂರು ಜಂಕ್ಷನ್ನಲ್ಲಿ ಸಿಸಿ ಕ್ಯಾಮರಾಗಳು ದುಸ್ಥಿತಿಯಲ್ಲಿದ್ದು, ಕಳ್ಳÀರಿಗೆ ಅನುಕೂಲಕರವಾಗಿದೆ ಮತ್ತು ಐಗೂರಿನ ಚುಮ್ಮನವರ ಮನೆಯ ರಸ್ತೆ ತಿರುವಿನಲ್ಲಿ ಒಂದು ವರ್ಷದಿಂದ ವಿದ್ಯುತ್ ಕಂಬ ಬಾಗಿದ್ದು ಸಣ್ಣ ಪ್ರಮಾಣದಲ್ಲಿ ವಿದ್ಯುತ್ ಪ್ರಹರಿಸುತ್ತಿದೆ. ರಾತ್ರಿ ವೇಳೆ ಆನೆಗಳು ಸಾವಿಗೀಡಾಗುವ ಸಾಧ್ಯತೆಯಿದೆ ಎಂದು ಪಿಡಿಓ ಗಮನಕ್ಕೆ ತಂದರೂ ಸಮಸ್ಯೆ ಸರಿಪಡಿಸಲಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದರು.
ಐಗೂರು ಗ್ರಾಮ ಪಂಚಾಯಿತಿಯಿAದ ಚೆಸ್ಕಾಂಗೆ ರೂ. ೧೦ ಲಕ್ಷ ವಿದ್ಯುತ್ ಬಿಲ್ ಬಾಕಿ ಇದ್ದು, ಚೆಸ್ಕಾಂ ಪಂಚಾಯಿತಿಗೆ ನಾಲ್ಕು ಲಕ್ಷದ ಅರವತ್ತು ಸಾವಿರ ರೂ. ದಂಡ ವಿಧಿಸಿದೆ. ಆದ್ದರಿಂದ ಸಾರ್ವಜನಿಕರು ಸಕಾಲದಲ್ಲಿ ಕಂದಾಯ ಮತ್ತು ನೀರಿನ ಹಣವನ್ನು ಪಾವತಿಸಬೇಕೆಂದು ಅಧ್ಯಕ್ಷ ವಿನೋದ್ ಮನವಿ ಮಾಡಿದರು.
ಕೇಂದ್ರ ಸರ್ಕಾರದ ಜಲಜೀವನ್ ಮಿಷನ್ ಕುಡಿಯುವ ನೀರಿನ ಕೆಲಸ ಪ್ರಾರಂಭಿಸುವ ಮೊದಲೇ ಗ್ರಾಮಸ್ಥರನ್ನು ಸಭೆ ಸೇರಿಸಿ ಗ್ರಾಮಸ್ಥರಿಂದ ಹೊಸ ಪೈಪ್ಗಳನ್ನು ಅಳವಡಿಸುವ ಬಗ್ಗೆ ಮಾಹಿತಿ ಪಡೆದು ಕೆಲಸ ಪ್ರಾರಂಭಿಸಬೇಕೆAದು ಕಾನೂನಿನಲ್ಲಿ ಅವಕಾಶ ಇದ್ದರೂ, ಗ್ರಾಮಸ್ಥರಿಗೆ ತಿಳಿಸದೆ ಕೆಲಸ ಪ್ರಾರಂಭಿಸಿರುವುದು ಸರಿಯಲ್ಲ. ಎಲ್ಲಾ ಹಳೆ ಪೈಪಿನ ಬದಲು ಹೊಸ ಪೈಪ್ ಅಳವಡಿಸಿದರೆ ಪದೇ ಪದೇ ರಿಪೇರಿ ಕೆಲಸ ಬಾರದೆ ಹಣ ಪೋಲಾಗುವುದನ್ನು ತಡೆಯಬಹುದೆಂದು ಕೆ.ಪಿ. ದಿನೇಶ್ ಸಲಹೆ ನೀಡಿದರು. ಇಂಗು ಗುಂಡಿಯ ಹಣವನ್ನು ಫಲಾನುಭವಿಗಳಿಗೆ ನೀಡದೆ ವಿಳಂಬ ಮಾಡಲಾಗುತ್ತಿದೆ ಮತ್ತು ಈಗಿರುವ ಕುಡಿಯುವ ನೀರಿನ ಕಂದಾಯದ ದರವನ್ನು ಕಡಿಮೆ ಮಾಡಬೇಕೆಂದು ಹೊನ್ನಪ್ಪ ಕೋರಿದರು.
ಸಭೆಯಲ್ಲಿ ನೋಡಲ್ ಅಧಿಕಾರಿ ಬಾಲಕೃಷ್ಣ ರೈ, ಪಿಡಿಓ ಬಾಲಕೃಷ್ಣ, ಪಂಚಾಯಿತಿ ಸದಸ್ಯರು, ವಿವಿಧ ಇಲಾಖೆ ಅಧಿಕಾರಿಗಳು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.