ಚೆಯ್ಯಂಡಾಣೆ, ಡಿ. ೨೧: ವೀರಾಜಪೇಟೆ ಸಮೀಪದ ಪೆರುಂಬಾಡಿ ಸಂಶುಲ್ ಉಲಮಾ ಸಭಾಂಗಣದಲ್ಲಿ ವೀರಾಜಪೇಟೆ ರೇಂಜ್ ಮುಸಾಬಖ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಸಮಸ್ತ ಮುಶಾವರ ಸದಸ್ಯರು ಕೊಡಗು ಜಿಲ್ಲಾ ನಾಇಬ್ ಖಾಝಿ ಅಬ್ದುಲ್ಲ ಫೈಝಿ ಎಡಪಾಲ ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದ ಧ್ವಜಾರೋಹಣವನ್ನು ಸಂಶುಲ್ ಉಲಮಾ ಎಜುಕೇಶನ್ ಟ್ರಸ್ಟ್ನ ಅಧ್ಯಕ್ಷ ಬಶೀರ್ ಹಾಜಿ ನೆರವೇರಿಸಿದರು. ವೀರಾಜಪೇಟೆ ರೇಂಜ್ ವ್ಯಾಪ್ತಿಯ ೧೩ ಮದರಸದ ೮ ವಿಭಾಗಗಳಲ್ಲಿ ೧೩೦ ಸ್ಪರ್ಧೆಗಳಲ್ಲಿ ೫೦೦ಕ್ಕೂ ಅಧಿಕ ವಿದ್ಯಾರ್ಥಿಗಳು ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸಿದರು.
ಇದರಲ್ಲಿ ವೀರಾಜಪೇಟೆಯ ನುಸ್ರತುಲ್ ಉಲೂಮ್ ಮದ್ರಸ ವಿನ್ನರ್ಸ್ ಆಗಿ ಆಯ್ಕೆಯಾದರೆ ಕಡಂಗ ಮನ್ಶಉಲ್ ಉಲೂಮ್ ಮದ್ರಸ ರನ್ನರ್ಸ್ ಪ್ರಶಸ್ತಿ ಪಡೆಯಿತು. ಮೂರನೇ ಸ್ಥಾನವನ್ನು ಗೋಣಿಕೊಪ್ಪ ನೂರುಲ್ ಹುದಾ ಮದರಸ ವಿದ್ಯಾರ್ಥಿಗಳು ಪಡೆದುಕೊಂಡರು.
ಮುಅಲ್ಲಿಮ್ ಕಲಾ ಸ್ಪರ್ಧೆಯಲ್ಲಿ ವೀರಾಜಪೇಟೆ ನುಸ್ರತುಲ್ ಉಲೂಮ್ ಮದ್ರಸ ಪ್ರಥಮ ಹಾಗೂ ಕಡಂಗ ಮನ್ಶಉಲ್ ಉಲೂಮ್ ಮದ್ರಸ ದ್ವಿತೀಯ ಸ್ಥಾನ ಪಡೆಯಿತು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ಕೆಜೆಎಂಸಿಸಿ ಕೇಂದ್ರ ಮುಶಾವರ ಸದಸ್ಯ ಎಂ. ಅಬ್ದುಲ್ ರೆಹಮಾನ್ ಮುಸ್ಲಿಯಾರ್ ವಹಿಸಿದ್ದರು.
ಕೆ.ಪಿ. ಅಬೂಬಕ್ಕರ್ ಮುಸ್ಲಿಯಾರ್ ಪ್ರಾರ್ಥಿಸಿ, ವೀರಾಜಪೇಟೆ ರೇಂಜ್ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಹನೀಫ್ ಫೈಝಿ ಸ್ವಾಗತಿಸಿದರು. ಸಹ ಕಾರ್ಯದರ್ಶಿ ಸುಹೈಬ್ ಫೈಝಿ ವಂದಿಸಿದರು.
ವೇದಿಕೆಯಲ್ಲಿ ಪ್ರಮುಖರಾದ ರಶೀದ್ ಹಾಜಿ, ಅಬ್ದುಲ್ಲ ಮುಸ್ಲಿಯಾರ್, ಇಸ್ಮಾಯಿಲ್ ಮುಸ್ಲಿಯಾರ್, ಅಶ್ರಫ್ ಮುಸ್ಲಿಯಾರ್, ಅಬೂಬಕ್ಕರ್ ಮುಸ್ಲಿಯಾರ್ ಬಶೀರ್ ಕೆ.ಎ. ಎಡಪಾಲ, ಕೆ.ಯು. ಶಾಫಿ, ಅಬ್ದುಲ್ಲ ಕಡಂಗ ಮತಿತ್ತರರು ಇದ್ದರು.