*ಗೋಣಿಕೊಪ್ಪ, ಡಿ. ೨೧: ಖಿನ್ನತೆಯಿಂದ ಹೊರಬರಲು ಉತ್ತಮ ಪುಸ್ತಕಗಳ ಓದಿನಿಂದ ಸಾಧ್ಯವಾಗಬಲ್ಲದು ಎಂದು ಪತ್ರಕರ್ತ ಜಗದೀಶ್ ಜೋಡುಬೀಟಿ ಅಭಿಮತ ವ್ಯಕ್ತಪಡಿಸಿದರು.

ವೀರಾಜಪೇಟೆ ಕಾವೇರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರವನ್ನು ಉದ್ದೇಶಿಸಿ ಮಾತನಾಡಿದರು.

ಅಂಕಗಳಿಗಾಗಿ ಶಿಕ್ಷಣದ ಉದ್ದೇಶವನ್ನು ಈಡೇರಿಸಿಕೊಳ್ಳದೆ, ಉತ್ತಮ ಜೀವನ ಸಾಗಿಸಲು ಮೌಲ್ಯಧಾರಿತ ಶಿಕ್ಷಣವನ್ನು ಪಡೆಯಬೇಕು. ವಿವೇಕಾನಂದ, ಗಾಂಧಿ, ಅಂಬೇಡ್ಕರ್‌ರವರ ಜೀವನ ಮಾದರಿ ಪುಸ್ತಕಗಳ ಓದಿನಿಂದ ಪ್ರೇರಣೆ ಹೊಂದುವ ಮೂಲಕ ಬದುಕನ್ನ ಉತ್ಕೃಷ್ಟಗೊಳಿಸಿ ಕೊಳ್ಳಬಹುದಾಗಿದೆ.

ವಿದ್ಯಾರ್ಥಿಗಳು ನಾಲ್ಕು ಗೋಡೆಗಳ ಶಿಕ್ಷಣಕಷ್ಟೇ ಸೀಮಿತ ವಾಗದೆ ಸಮಾಜದ ಹೊರಗಿನ ನಡೆಯ ಬಗ್ಗೆ ತಿಳಿದುಕೊಳ್ಳುತ್ತಾ ಬದುಕನ್ನು ಅನುಭವಿಸಬೇಕು ಎಂದು ಹೇಳಿದರು.

ಗೋಣಿಕೊಪ್ಪ ಪೊಲೀಸ್ ಠಾಣಾ ಮುಖ್ಯಪೇದೆ ಮಾದಪಂಡ ಕೆ. ಪೂವಣ್ಣ ಮಾತನಾಡಿ, ವಿದ್ಯಾರ್ಥಿಗಳು ಓದಿನ ಕಡೆಗಷ್ಟೇ ಗಮನ ಹರಿಸಬೇಕು. ಮಾದಕ ಪದಾರ್ಥಗಳ ಸೇವನೆಯಿಂದ ತಮ್ಮ ವ್ಯಕ್ತಿತ್ವ ಮತ್ತು ಸಮಾಜವನ್ನು ಕಳೆದುಕೊಳ್ಳುವ ಪರಿಸ್ಥಿತಿ ಬರಬಹುದು. ಅಲ್ಪ ಸಂತೋಷಕ್ಕಾಗಿ ಮಾದಕ ವ್ಯಸನಿಗಳಾಗದೆ ಉತ್ತಮ ಗುಣಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಮಾದಕ ವಸ್ತುಗಳ ದುಷ್ಪರಿಣಾಮಗಳು ಮತ್ತು ಸೈಬರ್ ಕ್ರೆöÊಮ್‌ಗಳ ಬಗ್ಗೆ ಮಾಹಿತಿ ನೀಡಿದರು. ಕಾವೇರಿ ಪದವಿ ಪೂರ್ವ ಕಾಲೇಜು, ಪ್ರಾಂಶುಪಾಲ ಎನ್.ಎಂ. ನಾಣಯ್ಯ ಅಧ್ಯಕ್ಷತೆಯಲ್ಲಿ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಘದ ಸಂಚಾಲಕಿ ಎ.ಎಂ. ಡಯಾನ ಸೋಮಯ್ಯ, ರಾ.ಸೇ.ಯೋ. ಕಾರ್ಯಕ್ರಮಾಧಿಕಾರಿ ಗಾಯತ್ರಿ ಮತ್ತು ಸ್ವಯಂಸೇವಕರು ಇದ್ದರು.