ಮಡಿಕೇರಿ, ಡಿ. ೨೨: ಕೊಡಗು ಗೌಡ ಯುವ ವೇದಿಕೆ ಆಶ್ರಯದಲ್ಲಿ ೨ನೇ ಬಾರಿಗೆ ಅರೆಭಾಷಿಕ ಗೌಡ ಜನಾಂಗದವರಿಗಾಗಿ ಹತ್ತು ಕುಟುಂಬ ಹದಿನೆಂಟು ಗೋತ್ರದ ಗೌಡ ಕ್ರಿಕೆಟ್ ಟಿ-೧೦ ಪ್ರೀಮಿಯರ್ ಲೀಗ್ ಪಂದ್ಯಾವಳಿ ಜನರಲ್ ಕೆ.ಎಸ್. ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ೨೦೨೪ರ ಏಪ್ರಿಲ್ ತಿಂಗಳಿನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ವೇದಿಕೆಯ ಸಹ ಕಾರ್ಯದರ್ಶಿ ಕೆದಂಬಾಡಿ ಕಾಂಚನಗೌಡ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನಾಂಗದ ಯುವ ಪೀಳಿಗೆಯನ್ನು ಸಾಫ್ಟ್ಬಾಲ್ ಕ್ರಿಕೆಟ್ನಿಂದ ಪ್ರೊಫೆಷನಲ್ ಕ್ರಿಕೆಟ್ಗೆ ಕರೆದುಕೊಂಡು ಹೋಗುವುದು ಮುಖ್ಯ ಗುರಿಯಾಗಿದೆ. ಮೊದಲ ವರ್ಷದ ಕ್ರೀಡಾಕೂಟ ಅತ್ಯುತ್ತಮವಾಗಿ ಮೂಡಿಬಂದಿದೆ. ಎರಡನೇ ಆವೃತ್ತಿಗೆ ಸಿದ್ಧತೆಗಳು ಪ್ರಾರಂಭವಾಗಿದ್ದು, ಈ ಬಾರಿ ೧೨ ಪ್ರಾಂಚೈಸಿ ತಂಡಗಳನ್ನು ಆಡಿಸುವ ತೀರ್ಮಾನ ಕೈಗೊಳ್ಳಲಾಗಿದೆ. ಆಸಕ್ತರು ತಾ.೨೮ರೊಳಗೆ ಯುವ ವೇದಿಕೆಯನ್ನು ಸಂಪರ್ಕಿಸಬೇಕು. ಆಟಗಾರರು ಜ.೧೮ರೊಳಗೆ ಹೆಸರು ನೋಂದಾಯಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಪ್ರಥಮ ಬಹುಮಾನ ಪಡೆದ ತಂಡಕ್ಕೆ ರೂ. ೧,೧೧,೧೧೧, ದ್ವಿತೀಯ ಸ್ಥಾನ ಪಡೆದ ತಂಡಕ್ಕೆ ರೂ. ೭೭,೭೭೭, ತೃತೀಯ ಸ್ಥಾನ ಪಡೆದ ತಂಡಕ್ಕೆ ರೂ. ೪೪,೪೪೪ ನಗದು ಮತ್ತು ಆಕರ್ಷಕ ಟ್ರೋಫಿ ನೀಡಿ ಗೌರವಿಸಲಾಗುವುದು. ಅಲ್ಲದೆ ಮ್ಯಾನ್ ಆಫ್ ದಿ ಸೀರಿಸ್, ಬೆಸ್ಟ್ ಬ್ಯಾಟ್ಸ್ಮೆನ್, ಬೆಸ್ಟ್ ಬೌಲರ್, ಬೆಸ್ಟ್ ವಿಕೆಟ್ ಕೀಪರ್, ಎಮರ್ಜಿಂಗ್ ಪ್ಲೇಯರ್ ಸೇರಿದಂತೆ ಹಲವು ವೈಯಕ್ತಿಕ ಬಹುಮಾನ ನೀಡಿ ಗೌರವಿಸಲಾಗುವುದು ಎಂದು ಮಾಹಿತಿ ನೀಡಿದರು.
ವೇದಿಕೆ ಅಧ್ಯಕ್ಷ ಪಾಣತ್ತಲೆ ಜಗದೀಶ್ ಮಂದಪ್ಪ ಮಾತನಾಡಿ, ಜನಾಂಗದ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುತ್ತಿರುವ ವೇದಿಕೆಗೆ ಕ್ರೀಡಾಕೂಟ ಆಯೋಜಿಸಲು ಸರ್ಕಾರ ಅನುದಾನ ನೀಡಿ ಸಹಕರಿಸಬೇಕು ಎಂದು ಮನವಿ ಮಾಡಿದ ಅವರು, ಕ್ರೀಡಾಕೂಟದ ಹೆಚ್ಚಿನ ಮಾಹಿತಿಗಾಗಿ ೯೯೭೨೩೭೬೧೫೧, ೯೯೮೦೦೦೪೩೭೪ ಸಂಪರ್ಕಿಸಬಹುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕ್ರೀಡಾಧ್ಯಕ್ಷ ಬಾಲಡಿ ಮನೋಜ್ ಕುಮಾರ್, ವೇದಿಕೆಯ ಕೋಶಾಧಿಕಾರಿ ಕುಕ್ಕೇರ ಜಯ ಲಕ್ಷö್ಮಣ್, ಆಹಾರ ಸಮಿತಿ ಅಧ್ಯಕ್ಷ ಪರ್ಚನ ಸತೀಶ್ ತಿಮ್ಮಯ್ಯ, ಸದಸ್ಯ ಕೋಚನ ದಿಶಾಂತ್ ಉಪಸ್ಥಿತರಿದ್ದರು.