ವೀರಾಜಪೇಟೆ, ಡಿ. ೨೦: ಹೊಸ ಮತದಾರರನ್ನು ಮತದಾರರ ಪಟ್ಟಿಯಲ್ಲಿ ಸೇರಿಸುವ ಕಾರ್ಯವು ವೀರಾಜಪೇಟೆ ತಾಲೂಕಿನಲ್ಲಿ ಬಿರುಸಿನಿಂದ ನಡೆಯಿತು. ತಾಲೂಕು ಆಡಳಿತದ ವತಿಯಿಂದ ಹೊಸ ಯುವ ಮತದಾರರನ್ನು ಪಟ್ಟಿಗೆ ಸೇರ್ಪಡಿಸಲು ಹಲವು ಕ್ರಮಗಳನ್ನು ಕೈಗೊಳ್ಳಲಾಯಿತು. ವೀರಾಜಪೇಟೆ ತಾಲೂಕು ವ್ಯಾಪ್ತಿಯಲ್ಲಿ ಬರುವ ಪದವಿಪೂರ್ವ ಹಾಗೂ ಪದವಿ ಕಾಲೇಜುಗಳಿಗೆ ತೆರಳಿದ ತಾಲೂಕು ಕಚೇರಿಯ ಸಿಬ್ಬಂದಿ ವರ್ಗ ಪ್ರಾಂಶುಪಾಲರಿಗೆ ಇದರ ಕುರಿತು ಮಾಹಿತಿಯನ್ನು ನೀಡಿ, ತರಗತಿಗಳಿಗೆ ತೆರಳಿ ವಿದ್ಯಾರ್ಥಿಗಳಿಗೆ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೊಳಿಸಲು ತಿಳಿಸಿ ಜಾಗೃತಿ ಮೂಡಿಸಿದರು.
ತಾಲೂಕು ಕಚೇರಿಯಲ್ಲಿ ನಿರಂತರವಾಗಿ ತಹಶೀಲ್ದಾರ್ ನೇತೃತ್ವದಲ್ಲಿ ಪ್ರಾಂಶುಪಾಲರುಗಳ ಸಭೆಯನ್ನು ಕರೆದು ಆ ಸಭೆಯಲ್ಲಿ ಒಟ್ಟು ಎಷ್ಟು ವಿದ್ಯಾರ್ಥಿಗಳು ನೋಂದಾವಣೆ ಮಾಡಿದ್ದಾರೆ ಎಂದು ಮಾಹಿತಿಯನ್ನು ಪಡೆಯಲಾಗುತ್ತಿತ್ತು. ಪ್ರಾಂಶುಪಾಲರುಗಳು ತಮ್ಮ ಕಾಲೇಜಿನಲ್ಲಿ ಒಬ್ಬರು ಉಪನ್ಯಾಸಕರನ್ನು ನೋಡಲ್ ಅಧಿಕಾರಿಗಳಾಗಿ ನೇಮಿಸಿ ಈ ಪ್ರಕ್ರಿಯೆ ತ್ವರಿತವಾಗಿ ನಡೆಯಲು ಸಹಕರಿಸಿದರು. ೧೭ ಹಾಗೂ ೧೮ ವರ್ಷ ತುಂಬಿದ ಯುವ ಮತದಾರರನ್ನು ಈ ಪಟ್ಟಿಗೆ ಸೇರಿಸುವ ಕಾರ್ಯ ನಡೆಸಲಾಯಿತು. ವಿದ್ಯಾರ್ಥಿಗಳು ಮೊಬೈಲ್ ಫೋನ್ ಬಳಸಿ ಆನ್ಲೈನ್ ಅರ್ಜಿ ಪ್ರತಿ ಭರ್ತಿ ಮಾಡಿ ಪಟ್ಟಿಗೆ ಹೆಸರು ಸೇರಿಸುವ ಪ್ರಕ್ರಿಯೆಗೆ ಸಕಾರಾತ್ಮಕವಾಗಿ ಸಹಕರಿಸಿದರು.
ವೀರಾಜಪೇಟೆ ತಾಲೂಕಿನಾದ್ಯಂತ ಹೊಸ ಯುವ ಮತದಾರರನ್ನು ಪಟ್ಟಿಗೆ ಸೇರಿಸುವ ಕಾರ್ಯ ಪೂರ್ಣಗೊಂಡಿದೆ. ತಹಶೀಲ್ದಾರರು, ಸಿಬ್ಬಂದಿಗಳು, ಪ್ರಾಂಶುಪಾಲರುಗಳು, ಉಪನ್ಯಾಸಕರು ಈ ಕಾರ್ಯಕ್ಕೆ ಸಂಪೂರ್ಣ ಒತ್ತನ್ನು ನೀಡಿ ಯಶಸ್ವಿಗೊಳಿಸಿದ್ದಾರೆ. ೨೦೨೪ ರ ಲೋಕಸಭಾ ಚುನಾವಣೆಯಲ್ಲಿ ತಮ್ಮ ಮೊದಲ ಮತದಾನ ಮಾಡುವ ಹಕ್ಕನ್ನು ಯುವ ಮತದಾರರು ಪಡೆದುಕೊಂಡರು.
ಚುನಾವಣಾ ಆಯೋಗದ ನಿರ್ದೇಶನದಂತೆ ವೀರಾಜಪೇಟೆ ತಾಲೂಕಿನಲ್ಲಿರುವ ೧೫ ಕಾಲೇಜುಗಳಲ್ಲಿ ಇರುವ ೧೭ ಮತ್ತು ೧೮ ವರ್ಷ ತುಂಬಿದ ಯುವ ಮತದಾರರನ್ನು ಮತದಾರರ ಪಟ್ಟಿಗೆ ಸೇರಿಸಲಾಗಿರುತ್ತದೆ. ಈ ಕಾರ್ಯದಲ್ಲಿ ಸಂಬAಧಪಟ್ಟ ಕಾಲೇಜುಗಳ ಪ್ರಾಂಶುಪಾಲರುಗಳು ತಮ್ಮ ಸಂಪೂರ್ಣ ಸಹಕಾರ ನೀಡಿದರು.